Advertisement
ಹದಿನೆಂಟು ವರುಷದ ಸುದೀರ್ಘ ಪಯಣದ ಮೂಲಕ ಹಂತ ಹಂತವಾಗಿ ಮೇಲೆದ್ದು ನಿಂತ ದೇಗುಲವಿದು. 2001ರಲ್ಲಿ ಗುರು ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಪ್ರಥಮ ಬಾರಿಗೆ ಈ ಪ್ರದೇಶಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಕ್ತರು ಕರಸೇವೆಯ ಮೂಲಕ ಗುಡ್ಡವನ್ನು ಕೊರೆದು ಮಂದಿರ ತನಕದ ಒಂದು ಕಿಲೋಮೀಟರ್ ಉದ್ದದ ರಸ್ತೆಯನ್ನು ಒಂದೇ ತಿಂಗಳಿನಲ್ಲಿ ನಿರ್ಮಿಸಿದ್ದರು.
ಪ್ರಕೃತಿದತ್ತ ಷಡಾಧಾರವೇ ಇರುವುದರಿಂದ ಷಡಾಧಾರ ಪ್ರತಿಷ್ಠೆಯನ್ನು ಇಲ್ಲಿ ಮಾಡಲಾಗಿಲ್ಲ. ಶ್ರೀ ಪರಾಶಕ್ತಿಯ ಜತೆಗೆ ಗಣಪತಿ ಮತ್ತು ಕಾಲಭೈರವೇಶ್ವರರು ಇಲ್ಲಿ ಪೂಜೆಗೊಳ್ಳುತ್ತಾರೆ. ಮೂಲ ಗುರು ಮಚ್ಛೇಂದ್ರನಾಥರ ಗುರುಪೀಠವನ್ನು ಸ್ಥಾಪಿಸಲಾಗಿದೆ. ಪುರಾತನ ಕಾಲದ ವಿಶಾಲವಾದ ಬಕುಳ ಪುಷ್ಪದ ಮರ ವೊಂದಿದ್ದು ಅದರ ಬುಡದಲ್ಲಿ ಹುತ್ತವಿದೆ. ಅದರಲ್ಲಿ ನವನಾಗರ ಸಾನ್ನಿಧ್ಯವಿದೆ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದ್ದು ಆ ಜಾಗವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಲ್ಲಿಗೆ ಅರ್ಚಕ ರಿಗೂ ಪ್ರವೇಶವಿಲ್ಲ. ಬಳಿಯಲ್ಲೇ ನಾಗ ಪ್ರತಿಷ್ಠೆಯನ್ನು ಮಾಡಲಾಗಿದೆ. ಶೈವ, ವೈಷ್ಣವ, ಶಾಕ್ತೇಯ ಈ ಮೂರು ಮುಖ್ಯ ಸನಾತನ ಧಾರೆಗಳು ಒಟ್ಟಾಗಿರುವ ವಿಶೇಷ ಈ ದೇಗುಲದ್ದು. ಕರ್ಗಲ್ಲಿನಿಂದ ಮತ್ತು ಸುಂದರ ಕೆತ್ತನೆಗಳಿಂದ ಕೂಡಿದ ಈ ದೇಗುಲಕ್ಕೆ ತಗುಲಿದ ಖರ್ಚು ಸುಮಾರು 1.50 ಕೋಟಿ ರೂ.ಗೂ ಹೆಚ್ಚು. ಕ್ಷೇತ್ರದ ಹಿನ್ನೆಲೆ
ಸುಮಾರು ಹದಿನೆಂಟು ವರುಷಗಳ ಹಿಂದೆ ಇಲ್ಲಿ ಪ್ರಾಕೃತಿಕವಾದ ಬನವೊಂದಿತ್ತು. ಅಲ್ಲಿ ಕಿರಾತೇಶ್ವರನ ಸಾನ್ನಿಧ್ಯವಿತ್ತು ಮತ್ತು ಊರವರ ಸಮ್ಮುಖದಲ್ಲಿ ಪದಕಣ್ಣಾಯ ಮನೆತನದವರಿಂದ ವರುಷಕ್ಕೆ ಒಂದಾವರ್ತಿ ಶಿವಾರ್ಚನೆ ನಡೆಯುತ್ತಿತ್ತು. ಈ ಬನದ ಸುತ್ತಲೂ ಸಾಮಾನ್ಯ ವರ್ಗದ ಜನರ ಮನೆಗಳಿದ್ದವು. ಅವರ್ಯಾರೂ ನೆಮ್ಮದಿಯಿಂದ ಇರಲಿಲ್ಲ.
Related Articles
Advertisement
ಪ್ರಾಕೃತಿಕ ವೈಪರೀತ್ಯಗಳಿಗೆ ಈಡಾಗಿ ನಾಶವಾಗಿದ್ದ ದೇಗುಲವನ್ನು ಮತ್ತೆ ಪುನರುತ್ಥಾನಗೊಳಿಸಬೇಕೆಂದು ಭಕ್ತರು ಪಣತೊಟ್ಟರು. ಈ ಪ್ರಯುಕ್ತ ಅಷ್ಟಮಂಗಲ ಪ್ರಶ್ನೆಯ ಮೂಲಕ ಚಿಂತನವನ್ನು ನಡೆಸಿದಾಗ ಆ ಸ್ಥಳದ ದೇಗುಲವು 2,400 ವರ್ಷಗಳಷ್ಟು ಹಳೆಯ ಕಾಲಾವ ಧಿಗೆ ಸೇರಿದ್ದು ಎಂದೂ ನಾಥಪಂಥಕ್ಕೆ ಸೇರಿದ ನವನಾಥರು ಓಡಾಡಿದ ಪ್ರದೇಶವೆಂದೂ ತಿಳಿದುಬಂತು.
ನವನಾಥರುಗಳಲ್ಲಿ, ಶ್ರೀ ಮಚ್ಛೇಂದ್ರನಾಥರ ತಪೋ ಭೂಮಿ ಅದಾಗಿತ್ತು. ಆ ಸ್ಥಳವನ್ನು ಪರಿಶೀಲಿಸಿದಾಗ, ಉತVನನವನ್ನು ಮಾಡಿದಾಗ ಅಲ್ಲಿ ದೇಗುಲವಿದ್ದುದರ ಕುರುಹುಗಳು ಸಿಕ್ಕಿದವು. ಭಕ್ತರು ಉತ್ಸಾಹಿಗಳಾಗಿದ್ದರೂ ಕೂಡ ನಮಗಿದು ಸಾಧ್ಯವೇ ಎಂಬ ಆತಂಕ ಅವರ ಮನಸ್ಸಿನಲ್ಲಿತ್ತು. ಯಾಕೆಂದರೆ ಅತ್ಯಂತ ಸಾಮಾನ್ಯ ಜನರ ಸಮೂಹವಷ್ಟೇ ಅಲ್ಲಿತ್ತು. ಮುಂದಾಳತ್ವವನ್ನು ವಹಿಸಿ ಮುನ್ನಡೆಸುವ ಸಶಕ್ತರು ಯಾರೂ ಇರಲಿಲ್ಲ. ಭಕ್ತರ ಭಯವನ್ನರಿತ ಗುರು ನರೇಂದ್ರನಾಥ ಸ್ವಾಮೀಜಿ ಧೈರ್ಯ ತುಂಬಿ ಹರಸಿದರು. ಗುರುಗಳ ಸೂಚನೆಯಂತೆ ಮುಂದುವರಿದ ಭಕ್ತರು ದೇಗುಲ ನಿರ್ಮಾಣ ಸಾಕಾರಗೊಳಿಸಿದ್ದಾರೆ.
ಹಣ ನೀಡಿ ಸೇವೆ ಇಲ್ಲಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ ಇಲ್ಲಿ ಯಾವುದೇ ಸೇವೆ,ಹರಕೆಗಳ ಫಲಕಗಳನ್ನು ಹಾಕಲಾಗಿಲ್ಲ. ಹಣ ನೀಡಿ ಸೇವೆ ಮಾಡಿಸುವ ಪರಿಪಾಠವಿಲ್ಲ.ಭಕ್ತರು ಹೃದಯಾಂತರಾಳದ ನಿಜ ಪ್ರಾರ್ಥನೆ ಮೂಲಕ ಭಕ್ತಿಯ ನಿವೇದನೆಯನ್ನು ಮಾಡುವುದು ರೂಢಿಯಾಗಿದೆ.ಈ ದೇಗು ಲಕ್ಕೆ ಎಪ್ರಿಲ್ 16ರಿಂದ 22ರ ವರೆಗೆ ಪ್ರತಿಷ್ಠಾ ಬ್ರಹ್ಮಕಲಶ ವೇದಮೂರ್ತಿ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಜರಗುತ್ತಿದೆ. – ಕವಿತಾ ಅಡೂರು