Advertisement

ಪರಪ್ಪು ಸೇತುವೆ ಮೇಲ್ದರ್ಜೆಗೇರಿಸುವ ಬೇಡಿಕೆಗಿಲ್ಲ ಮನ್ನಣೆ : ಅಭಿವೃದ್ಧಿಗೆ ಹಣಕಾಸು ಕೊರತೆ!

11:39 PM Feb 15, 2021 | Team Udayavani |

ಕಾರ್ಕಳ: ಕಾರ್ಕಳದಿಂದ ನಕ್ರೆ ಮಾರ್ಗವಾಗಿ ಉಡುಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪರಪ್ಪು ಬಳಿಯಿರುವ ಹಳೆಯ ಸೇತುವೆ ಅಗಲಕಿರಿದಾಗಿದ್ದು, ಅಪಾಯಕಾರಿಯಾಗಿದೆ. ಈ ಸೇತುವೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆದರೆ ಜನರ ಬೇಡಿಕೆಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ.

Advertisement

ಕಾರ್ಕಳ ಬೈಪಾಸ್‌ ರಸ್ತೆಯ ಸರ್ವಜ್ಞ ಜಂಕ್ಷನ್‌ನಿಂದ ಬಲಭಾಗಕ್ಕೆ ಕವಲೊಡೆದು ನಕ್ರೆ ರಂಗನ್‌ ಪಲ್ಕೆ, ಅಲೆವೂರು ಮೂಲಕ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ 35 ಕಿ.ಮೀ. ಹತ್ತಿರದ ರಸ್ತೆಯಿದು. 1966ರಲ್ಲಿ ನಿರ್ಮಾಣವಾದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಇದಾಗಿದೆ. ಇದು ವಿಸ್ತರಣೆಗೊಂಡು ಉತ್ತಮವಾಗಿದ್ದರೆ, ಸೇತುವೆ ಮಾತ್ರ ಕಿರಿದಾಗಿಯೇ ಉಳಿದಿರುವುದು ಸಮಸ್ಯೆಯಾಗಿದೆ.

ಶಿಥಿಲಗೊಳ್ಳುತ್ತಿದೆ
ಇತ್ತೀಚಿನ ತನಕ ಸೇತುವೆ ಗಟ್ಟಿಮುಟ್ಟಾಗಿಯೇ ಇತ್ತು. ಹೆಚ್ಚುತ್ತಿರುವ ವಾಹನ ಹಾಗೂ ಜನದಟ್ಟಣೆಯಿಂದ ಸೇತುವೆ ಕ್ರಮೇಣ ಶಿಥಿಲವಾಗಿದೆ. ಪಿಲ್ಲರ್‌ಗಳು ಬಲ ಕಳೆದುಕೊಳ್ಳುವ ಹಂತದಲ್ಲಿವೆ. ಶಿಥಿಲಗೊಂಡು ಕುಸಿಯುವ ಮುಂಚಿತ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಇಲ್ಲಿ ಏಕಕಾಲದಲ್ಲಿ ಸೇತುವೆ ಮೇಲೆ ಎರಡೆರಡು ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ವಾಹನಗಳು ಢಿಕ್ಕಿ ಹೊಡೆದು ಪಕ್ಕದ ಕಂದಕಕ್ಕೆ ಉರುಳಿಬಿದ್ದ ಘಟನೆಗಳೂ ಸಂಭವಿಸಿವೆ.

ಅನುದಾನದ ಕೊರತೆ?
ಸೇತುವೆ ಮೇಲ್ದರ್ಜೆಗೇರಿಸುವಂತೆ ಗ್ರಾ.ಪಂ ಸಭೆಗಳಲ್ಲಿ ಚರ್ಚೆಗಳು ನಡೆದಿವೆ. ಸೇತುವೆಯ ಇಕ್ಕಟ್ಟಾದ ಸ್ಥಿತಿ ಬಗ್ಗೆ ಸ್ಥಳೀಯರು ಇಲಾಖೆಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಶಾಸಕರಿಂದ ಪ್ರಸ್ತಾವನೆಯೂ ಹೋಗಿದೆ. ಕೊರೊನಾದ ಬಳಿಕ ಸರಕಾರದ ಆರ್ಥಿಕ ಸ್ಥಿತಿಗತಿ ಉತ್ತಮವಾಗಿಲ್ಲದ ಕಾರಣ ನಿರೀಕ್ಷೆಯ ಅನುದಾನಗಳು ಬರುತ್ತಿಲ್ಲ.

ಮಳೆಗಾಲ ಕೃತಕ ನೆರೆ ಸೃಷ್ಟಿ!

Advertisement

ಮಳೆಗಾಲದಲ್ಲಿ ಇದೇ ಸೇತುವೆ ಬಳಿ ಕೃತಕ ನೆರೆ ಉಂಟಾಗಿ ಸಮಸ್ಯೆ ಸೃಷ್ಟಿಯಾಗುತ್ತದೆ. ಸೇತುವೆಯ ತಳಭಾಗದಲ್ಲಿ ನೀರು ಹರಿದು ಹೋಗಲು ಸಾಕಷ್ಟು ಸ್ಥಳಾವಕಾಶವಿಲ್ಲದೆ, ಕೃತಕ ನೆರೆಗೆ ಕಾರಣವಾಗುತ್ತದೆ.

ಸುರಕ್ಷತೆ ಇಲ್ಲ

ಕಾರ್ಕಳ-ನಕ್ರೆ ಪಿಡಬ್ಲ್ಯುಡಿ ರಸ್ತೆಯಲ್ಲಿರುವ ಈ ಸೇತುವೆ ಬಳಿ ಸುರಕ್ಷತೆಗಳೂ ಇಲ್ಲ. ಸೇತುವೆ ಬಳಿ ಎಚ್ಚರಿಕೆ ವಹಿಸುವ ನಾಮಫ‌ಲಕಗಳು ಇಲ್ಲ. ದ್ವಿಚಕ್ರ ಸವಾರರು ಸಹಿತ ಲಘು, ಘನ ವಾಹನಗಳು ವೇಗವಾಗಿ ತೆರಳುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಘನ ವಾಹನಗಳ ಓಡಾಟ
ಕುಕ್ಕುಂದೂರು, ನಕ್ರೆ, ರಂಗನ್‌ಪಲ್ಕೆ ಪರಿಸರದಲ್ಲಿ ಬೃಹತ್‌ ಗಾತ್ರದ ಕಲ್ಲಿನ ಕೋರೆ, ಕ್ರಶರ್‌, ಕ್ಯಾಶ್ಯೂ ಫ್ಯಾಕ್ಟರಿ ಹೀಗೆ ಹತ್ತಾರು ಉದ್ಯಮಗಳು ತಲೆ ಎತ್ತಿವೆ. ದಿನನಿತ್ಯ ಘನ ವಾಹನಗಳು ಈ ರಸ್ತೆಯಲ್ಲಿ ಭಾರ ತುಂಬಿಕೊಂಡು ಸೇತುವೆ ಮೇಲಿಂದ ಹಾದು ಹೋಗುತ್ತವೆ. 22 ಚಕ್ರಗಳ ಬೃಹತ್‌ ಗಾತ್ರದ ಲಾರಿಗಳು ಭಾರ ಹೊತ್ತು ತೆರಳುವುದರಿಂದ ಸೇತುವೆಗೆ ಹಾನಿಯಾಗುತ್ತಿದೆ.

ಪ್ರಸ್ತಾವ ಸಲ್ಲಿಕೆ
ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲ್ಪಟ್ಟಿದೆ. ಇದುವರೆಗೆ ಯಾವ ಯೋಜನೆಗೂ ಸೇರಿಲ್ಲ. ಶೀಘ್ರ ಸೇರುವ ಸಂಭವವಿದೆ. ಹಣಕಾಸಿನ ನಿರೀಕ್ಷೆಯಲ್ಲಿದ್ದೇವೆ.
-ಸುಂದರ, ಹಿರಿಯ ಅಭಿಯಂತ, ಪಿಡಬ್ಲ್ಯುಡಿ ಇಲಾಖೆ

ಶೀಘ್ರ ಮೇಲ್ದರ್ಜೆಗೇರಲಿ
ಸೇತುವೆ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಸಂಭವವಿದೆ. ಪ್ರಮುಖ ರಸ್ತೆ ಸಂಪರ್ಕ ಕಡಿದುಕೊಳ್ಳುವ ಭೀತಿಯಿದೆ. ಆದಷ್ಟು ಬೇಗ ಮೇಲ್ದರ್ಜೆಗೇರಿಸುವ ಕೆಲಸವಾಗಬೇಕು.
-ರಾಜೇಶ್‌ ರಾವ್‌ ಮಾಜಿ ಅಧ್ಯಕ್ಷರು, ಗ್ರಾ.ಪಂ. ಕುಕ್ಕುಂದೂರು

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next