Advertisement

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಿಜ!

05:17 PM Jun 22, 2022 | Team Udayavani |

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ಹೈ-ಫೈ ಜೀವನ ಶೈಲಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮುರುಗನ್‌ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ 500 ಪುಟಗಳ ವರದಿ ಸಲ್ಲಿಸಿದೆ.

Advertisement

ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ಐಷಾರಾಮಿ ಸೌಲಭ್ಯ, ಡ್ರಗ್ಸ್‌, ಮದ್ಯ ಪೂರೈಕೆ ಸೇರಿ ಹಲವು ಸೌಕರ್ಯ ನೀಡಿರುವ ಬಗ್ಗೆ ಐದಾರು ತಿಂಗಳ ಹಿಂದಷ್ಟೇ ವಿಡಿಯೋಗಳು ಹರಿದಾಡಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ವಿಡಿಯೋ ಆಧರಿಸಿ ತನಿಖೆ ನಡೆಸಲು ಎಡಿಜಿಪಿ ಮುರುಗನ್‌ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಿತ್ತು. ಈ ತಂಡ ಜೈಲಿಗೆ ಭೇಟಿ ನೀಡಿ, ಅಲ್ಲಿನ ಕೈದಿಗಳು, ಸಿಬ್ಬಂದಿ ವಿಚಾರಣೆ ನಡೆಸಿತ್ತು. ಈ ವೇಳೆ ಅಕ್ರಮಕ್ಕೆ ಪೂರಕವಾಗಿ ಕೆಲವೊಂದು ಮಾಹಿತಿ ಸಿಕ್ಕಿತ್ತು. ಈ ಆಧಾರದ ಮೇಲೆ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ತನಿಖೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಜತೆಗೆ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜೈಲಿನ ಇಬ್ಬರು ಅಧಿಕಾರಿಗಳು ಸೇರಿ 10 ಮಂದಿ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ಜೈಲಿನ ಸುಧಾರಣೆಗೆ ಇನ್ನಷ್ಟು ಕ್ರಮಕೈಗೊಳ್ಳಬೇಕಿದೆ ಎಂದು ಸಹ ಸಲಹೆ ನೀಡಿದೆ.

ಜೈಲಿನ 7 ಸಿಬ್ಬಂದಿ ವರ್ಗಾವಣೆ: ಅಕ್ರಮ ಸಂಬಂಧ ಎಡಿಜಿಪಿ ಎಸ್‌.ಮುರುಗನ್‌ ವರದಿ ಆಧರಿಸಿ ಕಾರಾಗೃಹ ಇಲಾಖೆ ಅಕ್ರಮಕ್ಕೆ ಸಹಕಾರ ನೀಡಿದ ಜೈಲಿನ ಏಳು ಮಂದಿ ಸಿಬ್ಬಂದಿ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಿದ್ದು, ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಕಾರಾಗೃಹ ಸಿಬ್ಬಂದಿ: ಜೈಲಿನಲ್ಲಿ ಮುಖ್ಯ ವೀಕ್ಷಕರಾಗಿರುವ ಎನ್‌.ಅಶೋಕ್‌ (ವಿಜಯಪುರ), ಎಸ್‌.ಎನ್‌.ರಮೇಶ್‌ (ಬಳ್ಳಾರಿ), ಶಿವಾನಂದ ಕೆ.ಗಾಣಿಗೇರ್‌ (ಬೆಳಗಾವಿ), ಉಮೇಶ್‌ ಆರ್‌.ದೊಡ್ಡಮನಿ (ಮೈಸೂರು), ಲೋಕೆಶ್‌ ಪಿ. (ಧಾರವಾಡ), ಭೀಮಣ್ಣ, ದೇವಪ್ಪ ನೆದಲಗಿ (ಶಿವಮೊಗ್ಗ) ಹಾಗೂ ಮಹೇಶ್‌ ಸಿದ್ದನಗೌಡ ಪಾಟೀಲ್‌ ಕಲಬುರಗಿ ಜೈಲಿಗೆ ವರ್ಗಾವಣೆ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next