Advertisement
ವಿಶೇಷವೇನೆಂದರೆ, ವಿಪ್ರೋ, ಇನ್ಫೋಸಿಸ್ ಮತ್ತು ಇನ್ನೊಂದಷ್ಟು ಎಂಎನ್‌ಸಿಗಳ ನೌಕರರೇ ಈ ಹೋಟೆಲ್‌ನ ಕಾಯಂ ಗ್ರಾಹಕರು. ಶನಿವಾರ ಹಾಗೂ ಭಾನುವಾರಗಳಂದು ಕಾರ್ಪೊರೇಟ್ ಕಂಪನಿಗಳಿಗೆ ರಜೆ ಇರುತ್ತದೆ. ಹಾಗಿದ್ದರೂ, ಪರೋಟಾ ತಿನ್ನಬೇಕೆಂಬ ಒಂದೇ ಉದ್ದೇಶದಿಂದ ಹಲವರು ಶನಿವಾರ ಹಾಗೂ ಭಾನುವಾರದಂದು ಈ ಹೋಟೆಲ್‌ಗೆ ಬರುತ್ತಾರೆ! ಈ ಹೋಟೆಲ್‌ನ ಓನರ್ ಕಂ ಮ್ಯಾನೇಜರ್ ಆಗಿರುವವರು ದೇವೇಂದ್ರ. ರಾಜಾಸ್ಥಾನ ಮೂಲದ ಅವರು ಈ ಮೊದಲು ಮನೆಯಲ್ಲಿಯೇ ಪರೋಟಾ ಮಾಡಿ ಅದನ್ನು ಬಾಕ್ಸ್‌ಗಳಲ್ಲಿ ತುಂಬಿಕೊಂಡು ಹೋಗಿ ಕಾರ್ಪೊರೇಟ್ ಕಂಪನಿಗಳಲ್ಲಿ ಮಾರುತ್ತಿದ್ದರಂತೆ. ಕ್ರಮೇಣ ಪರೋಟಾಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಒಂದು ಚಿಕ್ಕ ಜಾಗವನ್ನು ಬಾಡಿಗೆಗೆ ಹಿಡಿದು ಅಲ್ಲಿ “ಪರಾಠ ವಾಲಿ ಗಲಿ’ ಹೋಟೆಲ್ ಅನ್ನು ಆರಂಭಿಸಿದ್ದಾರೆ.
ಚಿಲ್ಲರೆ ಇಲ್ಲ ಅನ್ನೋದು ಈಗ ಎಲ್ಲ ಹೋಟೆಲ್ ಗಳಲ್ಲೂ ಮಾಮೂಲಿ ಆಗಿರುವ ಸಮಸ್ಯೆ. ಪರಾಠಾ ವಾಲಿ ಗಲಿ ಹೋಟೆಲ್‌ನಲ್ಲಿ ಈ ಸಮಸ್ಯೆಗೂ ಪರಿಹಾರ ಕಂಡುಕೊಂಡಿದ್ದಾರೆ. ಪೇಟಿಎಂ, ಫೋನ್ ಪೇ, ತೇಜ್ ಆ್ಯಪ್ ಹಾಗೂ ಆನ್‌ಲೈನ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಈ ಹೋಟೆಲಿನಲ್ಲಿದೆ
Related Articles
ಈ ಹೋಟೆಲ್‌ನಲ್ಲಿ ಒಂದೆರಡಲ್ಲ, ಬರೋಬ್ಬರಿ 50 ಬಗೆಯ ಪರೋಟಾಗಳು ಸಿಗುತ್ತವೆ. ಅವುಗಳ ಬೆಲೆ, ಒಂದಕ್ಕೆ 30 ರೂ.ನಿಂದ ಶುರುವಾಗಿ 150 ರೂ.ವರೆಗೂ ಇದೆ. ಉತ್ತರಭಾರತದಲ್ಲಿ, ಅದರಲ್ಲೂ ದೆಹಲಿ ಹಾಗೂ ರಾಜಾಸ್ಥಾನ ಸೀಮೆಯ ಎಲ್ಲ ಪರೋಟಾಗಳನ್ನು ನಾವು ತಯಾರಿಸುತ್ತೇವೆ. ಅಮೃತ್‌ಸರಿ ಪರೋಟಾಕ್ಕೆ ಬೇಡಿಕೆ ಹೆಚ್ಚು. ಒಂದು ದಿನಕ್ಕೆ 1,200ರಿಂದ 1,500 ರವರೆಗೂ ಪರೋಟಾಗಳು ಮಾರಾಟವಾಗುತ್ತವೆ ಎನ್ನುತ್ತಾರೆ ದೇವೇಂದ್ರ. “ಈ ಹೋಟೆಲ್‌ನಲ್ಲಿ ಬರೀ ಪರೋಟಾ ಮಾತ್ರ ಸಿಗೋದಾ? ಅದು ಇಷ್ಟವಿಲ್ಲ ಅನ್ನುವವರು ಏನ್ಮಾಡ್ಬೇಕು?’ ಎಂಬ ಚಿಂತೆ ಬೇಡ. ಬಿಸಿಬೇಳೆಬಾತ್, ಪೊಂಗಲ್, ವಾಂಗೀಬಾತ್, ಪಪ್ಸ್, ಸಮೋಸಾ ಹಾಗೂ ಕಚೋರಿ ಕೂಡ ಇಲ್ಲಿ ಲಭ್ಯ. ಡ್ರೈಫೂÅಟ್ಸ್‌ಗಳಿಂದ ತಯಾರಿಸಲಾಗುವ ಮಹಾರಾಜ ಲಸ್ಸಿ ಈ ಹೋಟೆಲ್‌ನ ಇನ್ನೊಂದು ಆಕರ್ಷಣೆ. ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಈ ಹೋಟೆಲ್ ತೆರೆದಿರುತ್ತದೆ.
Advertisement