Advertisement

ಮುನಿದ ವರುಣನ ಕೃಪೆಗೆ ಪರ್ಜನ್ಯ ಹೋಮ

01:03 AM Jun 07, 2019 | Sriram |

ಬೆಂಗಳೂರು/ಹುಬ್ಬಳ್ಳಿ: ಬರದ ಹೊಡೆತಕ್ಕೆ ತತ್ತರಿಸಿದ ಬೆನ್ನಲ್ಲೇ ಕಂಗಾಲಾಗಿರುವ ರಾಜ್ಯ ಸರ್ಕಾರ ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದೆ. ಗುರುವಾರ ಮುಜರಾಯಿ ಇಲಾಖೆ ವ್ಯಾಪ್ತಿಯ ಎ, ಬಿ ಮತ್ತು ಸಿ ಶ್ರೇಣಿಯ ವಿವಿಧ ದೇಗುಲಗಳಲ್ಲಿ ಪರ್ಜನ್ಯ ಹೋಮ ಹಾಗೂ ಜಪ ಆಯೋಜಿಸಿ ಉತ್ತಮ ಮಳೆ ಹಾಗೂ ಬೆಳೆಗಾಗಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಲಾಗಿದೆ.

Advertisement

ಮಳೆ ದೇವರು ಎಂದೇ ಕರೆಯಲ್ಪಡುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಿಗ್ಗಾ ಗ್ರಾಮದ ಶ್ರೀ ಋಷ್ಯ ಶೃಂಗೇಶ್ವರ ದೇವಾಲಯದಲ್ಲಿ ಪುರೋಹಿತರಾದ ವಿಶ್ವನಾಥ ಭಟ್ಟ ಮತ್ತು ಶಿವರಾಂ ಭಟ್ಟ ನೇತೃತ್ವದಲ್ಲಿ 20 ಋತ್ವಿಜರ ತಂಡದಿಂದ ನಡೆದ ಪರ್ಜನ್ಯ ಹೋಮದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್‌, ಶಾಸಕ ಟಿ.ಡಿ.ರಾಜೇಗೌಡ ಪಾಲ್ಗೊಂಡು ಬರದಿಂದ ಮುಕ್ತಗೊಳಿಸಿ ಸಮೃದ್ಧ ಮಳೆ ಹಾಗೂ ಬೆಳೆಗಾಗಿ ಬೇಡಿಕೊಂಡರು. ಅಲ್ಲದೇ ಕಳಸದ ಕಳಸೇಶ್ವರ ದೇವಾಲಯ, ಎನ್‌.ಆರ್‌.ಪುರ ಪಟ್ಟಣದ ಶ್ರೀ ಉಮಾಮಹೇಶ್ವರಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮ, ವಿಶೇಷ ಪೂಜೆಗಳು ಜರುಗಿದವು.

ಸತತ 6 ಗಂಟೆ ನೀರಲ್ಲೇ ಕುಳಿತರು!: ಕೊಪ್ಪಳದ ಪ್ರಸಿದ್ಧ ದೇವಸ್ಥಾನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಹರಿಹರ ಮೂಲದ ವಿದ್ಯಾನಂದ ಶಾಸ್ತ್ರಿ ಅವರ ಐವರು ಪುರೋಹಿತರ ನೇತೃತ್ವದಲ್ಲಿ ಸತತ ಆರು ಗಂಟೆಗಳ ಕಾಲ ನೀರಿನಲ್ಲೇ ಕುಳಿತು ವರು ಣನ ಕೃಪೆಗಾಗಿ ಜಪ, ಹೋಮ ನೆರವೇರಿಸ ಲಾಗಿದೆ. ಕನಕಗಿರಿಯ ಕನಕಾಚಲಪತಿ, ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ, ಪಂಪಾ ಸರೋವರದ ಶ್ರೀ ವಿಜಯಲಕ್ಷ್ಮೀ, ಹಿರೇಜಂತಗಲ್ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇಗುಲದಲ್ಲೂ ಒಂದೂವರೆ ಗಂಟೆ ನೀರಿನಲ್ಲೇ ನಿಂತು ಪೂಜೆ ಸಲ್ಲಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ, ಹೊಸೂರಿನ ಏಳು ಹೆಡೆ ನಾಗಪ್ಪ ಸ್ವಾಮಿ, ಹೊಸೂರಮ್ಮ ದೇವಿ, ಕೊಟ್ಟೂರಿನ ಕೊಟ್ಟೂರೇಶ್ವರ ಉಚ್ಚೆಂಗೆಮ್ಮ ದೇವಿ; ಚಿತ್ರದುರ್ಗ ದೇವಸ್ಥಾನದಲ್ಲಿ ಪರ್ಜನ್ಯ ಹೋಮ ಹಾಗೂ ಜಪ ನೆರವೇರಿಸಲಾಯಿತು.

ಕೆಲವೆಡೆ ಪೂಜೆಯೇ ಇಲ್ಲ!
ಮುಜರಾಯಿ ದೇಗುಲಗಳಲ್ಲಿ ವರುಣನ ಕೃಪೆಗೆ ಹೋಮ, ಜಪ ನಡೆಯುತ್ತಿದ್ದರೆ ಹುಬ್ಬಳ್ಳಿ-ಧಾರವಾಡ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ಕಲಬುರಗಿ, ಯಾದಗಿರಿ, ಬೀದರ್‌, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಮಳೆಗಾಗಿ ಯಾವುದೇ ಪೂಜೆ ಪುನಸ್ಕಾರ ನೆರವೇರಿಲ್ಲ.ರಾಯಚೂರು ಜಿಲ್ಲೆಯ ಎರಡು ಕಡೆ ಮಾತ್ರ ಪರ್ಜನ್ಯ ಹೋಮ ನೆರವೇರಿಸಲಾಗಿದೆ.

Advertisement

ಚಾಮುಂಡಿಗೆ ವಿಶೇಷ ಪೂಜೆ
ಮೈಸೂರು: ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಸ್ಥಾನ, ಮಹಾ ಬಲೇಶ್ವರ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ವಿನಾಯಕ ದೇವಸ್ಥಾನ, ತ್ರಿನೇಶ್ವರ ದೇವಸ್ಥಾನ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನ ಸೇರಿ 24 ಅರಮನೆ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ತಲಕಾಡು ದೇವಸ್ಥಾನಗಳಲ್ಲಿ ಮಳೆಗಾಗಿ ವಿಶೇಷ ಪೂಜೆ, ಪರ್ಜನ್ಯ ಜಪ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಶ್ರೀಚಾಮುಂಡೇಶ್ವರಿ ದೇವ ಸ್ಥಾನದಲ್ಲಿ ಮುಂಜಾನೆ 5 ರಿಂದ 7.30ರವರೆಗೆ ದೇವಿಗೆ ಅಭಿಷೇಕ, ಪಾರಾಯಣ, ಹೋಮ ಮೊದಲಾದ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ತಿರುಮಲೆ ರಂಗನಾಥಸ್ವಾಮಿಗೆ ಪುಷ್ಕರಣಿ ನೀರಲ್ಲಿ ಪರ್ಜನ್ಯ: ಮಾಗಡಿ ತಾಲೂಕಿನ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ಮತ್ತು ಸಾವನ ದುರ್ಗದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಆಗಮಿಕ ಪುರೋಹಿತರಿಂದ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ಶಾಸ್ತ್ರೋತ್ತವಾಗಿ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next