Advertisement

ಶಾಲೆಯ ಸ್ಥಾಪಕರು ಪತ್ನಿಯ ಚಿನ್ನವನ್ನೇ ಅಡವಿಟ್ಟು ಕಟ್ಟಡ ಕಟ್ಟಿದ್ದರು

10:26 AM Dec 08, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1913 ಶಾಲೆ ಸ್ಥಾಪನೆ
ಮನೆಯ ಹೆಬ್ಟಾಗಿಲಿನಲ್ಲಿ ಆರಂಭಗೊಂಡ ಶಾಲೆ

ಕೋಟ: ಶತಮಾನದ ಹಿಂದೆ ಪಾರಂಪಳ್ಳಿ-ಪಡುಕರೆಯ ಮಕ್ಕಳು ದೋಣಿಯ ಮೂಲಕ ಹೊಳೆ ದಾಟಿ ದೂರದ ಕಾರ್ಕಡ ಶಾಲೆಗೆ ಬರಬೇಕಿತ್ತು. ಈ ಕಾರಣಕ್ಕಾಗಿ ಸಾಕಷ್ಟು ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಿದ್ದರು. ತನ್ನೂರಿನ ಮಕ್ಕಳು ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸಬೇಕು, ಊರಲ್ಲೊಂದು ಶಿಕ್ಷಣ ಸಂಸ್ಥೆ ತೆರೆಯಬೇಕು ಎನ್ನುವ ನಿರ್ಧಾರಕ್ಕೆ ಬಂದ ಶಿಕ್ಷಕ ಪಾರಂಪಳ್ಳಿ ಕೃಷ್ಣ ಉಪಾಧ್ಯರು 1913 ಜೂನ್‌ 13ರಲ್ಲಿ ತನ್ನ ಮನೆ ಹೆಬ್ಟಾಗಿಲಿನಲ್ಲೇ ಪಾರಂಪಳ್ಳಿ- ಪಡುಕರೆ ಖಾಸಗಿ ಅ.ಹಿ.ಪ್ರಾ. ಶಾಲೆ ಆರಂಭಿಸಿದ್ದರು. 1ರಿಂದ 4ನೇ ತರಗತಿ ತನಕ ಡಿಸ್ಟಿಕ್‌ ಬೋರ್ಡ್‌ ನ ಅನುಮತಿ ಪಡೆಯಲು ಯಶಸ್ವಿಯಾದರು. ಉಪಾಧ್ಯರೇ ಸ್ಥಾಪಕ ಶಿಕ್ಷಕರಾಗಿ ಹಾಗೂ ನರಸಿಂಹ ಹಂದೆ ಸಹಾಯಕರಾಗಿ ಅಂದು ಸೇವೆ ಸಲ್ಲಿಸಿದ್ದರು. ಒಂದು ವರ್ಷ ಕಳೆಯುವಾಗಲೇ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಳವಾಗಿತ್ತು. ಸುತ್ತಲಿನ ಕೋಡಿ ಕನ್ಯಾಣ, ಪಡುಕರೆ ಮುಂತಾದ ಕಡೆಗಳಿಂದ ಮಕ್ಕಳು ವಿದ್ಯಾರ್ಜನೆಗಾಗಿ ಬರತೊಡಗಿದರು.

ಕಟ್ಟಡ ನಿರ್ಮಾಣ
ಮಕ್ಕಳ ಸಂಖ್ಯೆ ಹೆಚ್ಚಳ ಕಂಡು ಸ್ಥಾಪಕರು ತನ್ನ ಮನೆ ಸಮೀಪ 1.5 ಎಕ್ರೆ ವಿಸ್ತೀರ್ಣದ ಸ್ವಂತ ಜಾಗ ಮತ್ತು ಸ್ವಂತ ಹಣದಿಂದ ಶಾಲೆಗೆ ಕಟ್ಟಡವೊಂದನ್ನು ನಿರ್ಮಿಸಿದ್ದರು. ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಿದ್ದರಿಂದ 1936ರಲ್ಲಿ ಕಟ್ಟಡವನ್ನು ಮತ್ತೆ ವಿಸ್ತರಿಸಲು ಮುಂದಾದರು. ಆದರೆ ಹಣ ಸಾಲದೆ ಕೆಲಸ ಅರ್ಧಕ್ಕೆ ಸ್ಥಗಿತಗೊಳ್ಳುವ ಹಂತ ತಲುಪಿತು. ಆಗ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪತ್ನಿಯ ಚಿನ್ನವನ್ನು ಅಡವಿರಿಸಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿದ್ದರು. 1962ರಲ್ಲಿ ಈ ಶಾಲೆ 1-7ನೇ ತರಗತಿ ತನಕ ಮೇಲ್ದರ್ಜೆಗೇರಿತು. 300ರ ತನಕ ವಿದ್ಯಾರ್ಥಿಗಳಿದ್ದರು. ಕೃಷ್ಣ ಉಪಾಧ್ಯರ ಕಾಲಾನಂತರ ಸುಬ್ರಹ್ಮಣ್ಯ ಉಪಾಧ್ಯರು ಆಡಳಿತ ಮಂಡಳಿಯ ಸಂಚಾಲಕರಾಗಿ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಸದಿಯ ಉಪಾಧ್ಯ, ಮಹಾಬಲ ಉಪಾಧ್ಯ, ಯಜ್ಞನಾರಾಯಣ ಐತಾಳ, ರಾಧಾಕೃಷ್ಣ ಹಂದೆ, ಶಾರದಾ, ಶೇಷ ಐತಾಳ ಮುಂತಾದವರು ಮತ್ತು ಪ್ರಸ್ತುತ ರಾಘವೇಂದ್ರ ಹೊಳ್ಳರು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2013ರಲ್ಲಿ ಇಲ್ಲಿನ ಸುವರ್ಣ ಮಹೋತ್ಸವ ನಡೆದಿತ್ತು.

Advertisement

ಸ್ವಂತ ಕಾರಿನಲ್ಲೇ ಮಕ್ಕಳನ್ನು ಕರೆತರುವ ಮುಖ್ಯ ಶಿಕ್ಷಕ
ಅಕ್ಕ-ಪಕ್ಕದ ಶಾಲೆಯಲ್ಲಿ ವಾಹನದ ವ್ಯವಸ್ಥೆ ಇರುವುದರಿಂದ ಇಲ್ಲಿಗೆ ದಾಖಲಾಗುವ ಮಕ್ಕಳ ಸಂಖ್ಯೆ ವರ್ಷದಿಂದ ಕುಸಿಯತೊಡಗಿದೆ. ಇದನ್ನು ಮನಗಂಡ ಪ್ರಸ್ತುತ ಮುಖ್ಯ ಶಿಕ್ಷಕ ರಾಘವೇಂದ್ರ ಹೊಳ್ಳ ಅವರು ತನ್ನ ಸ್ವಂತ ಕಾರಿನಲ್ಲಿ ತಾನೇ ಡ್ರೈವ್‌ ಮಾಡಿಕೊಂಡು ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಮಕ್ಕಳನ್ನು ಕರೆತರುವ, ಬಿಟ್ಟು ಬರುವ ಕಾಯಕವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದಾರೆ.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಖ್ಯಾತ ಯಕ್ಷಗಾನ ಕಲಾವಿದ, ಏಕ ವ್ಯಕ್ತಿ ಯಕ್ಷಗಾನದ ಮೂಲಕ ಹೆಸರು ಗಳಿಸಿದ ಮಂಟಪ ಪ್ರಭಾಕರ ಉಪಾಧ್ಯ, ಕೋಟ ವಿವೇಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯ, ಕರ್ಣಾಟಕ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಕೋಡಿ ಚಂದ್ರಶೇಖರ ನಾವುಡ, ಖ್ಯಾತ ವೈದ್ಯ ಡಾ| ಮಧುಸೂದನ್‌ ಉಪಾಧ್ಯ, ರಾಧಾಕೃಷ್ಣ ಹಂದೆ ಮುಂತಾದವರು ಇಲ್ಲಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

ಪ್ರಸ್ತುತ ಚಿತ್ರಣ
ಶಾಲೆಯಲ್ಲಿ ಪ್ರಸ್ತುತ 18 ಮಕ್ಕಳಿದ್ದು, ಓರ್ವ ಖಾಯಂ ಶಿಕ್ಷಕ ಮತ್ತು 4 ಮಂದಿ ಗೌರವ ಶಿಕ್ಷಕರಿದ್ದಾರೆ. ಕಂಪ್ಯೂಟರ್‌ ಶಿಕ್ಷಣ, ವಾಹನ ಸೌಲಭ್ಯ, ಪ್ರಯೋಗಾಲಯ ಮುಂತಾದ ಸೌಕರ್ಯಗಳು ಇಲ್ಲಿವೆ.

ಶಾಲೆಗೆ ಶತಮಾನೋತ್ಸವ ಕಳೆದಿದೆ. ಪ್ರಸ್ತುತ ನಾನು ಏಕೋಪಾಧ್ಯಾಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಶಾಲೆಯ ಉಳಿವಿಗಾಗಿ ಊರಿನವರ, ಸ್ಥಳೀಯ ಸಂಘ-ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯವರ ಜತೆ ಸೇರಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ.
-ರಾಘವೇಂದ್ರ ಹೊಳ್ಳ, ಮುಖ್ಯಶಿಕ್ಷಕರು

ಆರೇಳು ದಶಕಗಳ ಹಿಂದೆ ಶಿಕ್ಷಣದೊಂದಿಗೆ ವೃತ್ತಿ ತರಬೇತಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಶಿಷ್ಯರಿಗೆ ಗುರುಗಳ ಬಗ್ಗೆ ವಿಶೇಷ ಗೌರವ, ಭಕ್ತಿ ಇತ್ತು. ಜೀವನಕ್ಕೆ ಬೇಕಾಗುವ ಎಲ್ಲ ವಿಚಾರವನ್ನು ಶಾಲೆ ಹೇಳಿಕೊಡುತ್ತಿತ್ತು.
-ಸುಬ್ರಹ್ಮಣ್ಯ ಉಪಾಧ್ಯ,  ಶಾಲಾ ಸಂಚಾಲಕರು(ಹಳೆ ವಿದ್ಯಾರ್ಥಿ)

  ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next