Advertisement

ನನಸಾಗುತ್ತಿದೆ ಪಾರಂಪಳ್ಳಿ-ಪಡುಕರೆ ನಿವಾಸಿಗಳ ದಶಕಗಳ ಕನಸು

10:44 PM Mar 31, 2021 | Team Udayavani |

ಕೋಟ:  ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಪಾರಂಪಳ್ಳಿ ಹಾಗೂ ಹೆಗ್ಗಡ್ತಿಮಕ್ಕಿ ವಾರ್ಡ್‌ಗೆ ಹೊಂದಿಕೊಂಡಿರುವ  ಸೀತಾನದಿಯ ಉಪನದಿಯಲ್ಲಿ  ನಾಯ್ಕನ್‌ಬೈಲು ಎನ್ನುವಲ್ಲಿ ಮರದ ಸೇತುವೆ ಇದ್ದು ಇಲ್ಲಿ  ಶಾಶ್ವತ ಸೇತುವೆ ನಿರ್ಮಿಸಬೇಕು ಎನ್ನುವುದು ಇಲ್ಲಿನ ಜನರ ಹಲವು ದಶಕಗಳ ಬೇಡಿಕೆಯಾಗಿದೆ.

Advertisement

ಇದೀಗ ಈ ಮರದ ಸೇತುವೆಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದ್ದು  ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಸ್ತಾವನೆ ಮೇರೆಗೆ ಪಿ.ಡಬ್ಲ್ಯು.ಡಿ. ಇಲಾಖೆಯಿಂದ 4 ಕೋಟಿ ರೂ. ಅನುದಾನ ಹೊಸ ಸೇತುವೆಗಾಗಿ ಬಿಡುಗಡೆಯಾಗಿದ್ದು ಟೆಂಡರ್‌ ಹಂತದಲ್ಲಿದೆ.

ಪ್ರತೀ ಬಾರಿ ಚುನಾವಣೆಗಳು ಬಂದಾಗ ಈ ಎರಡು ವಾರ್ಡ್‌ಗಳಲ್ಲಿ  ಸೇತುವೆ ವಿಚಾರ ಪ್ರಮುಖವಾಗಿ ಚರ್ಚೆಯಾಗುತ್ತಿತ್ತು. ಸ್ಥಳೀಯಾಡಳಿತದ  ಪ.ಪಂ.ನಿಂದ ಹಿಡಿದು  ಲೋಕಸಭಾ ತನಕದ ಹತ್ತಾರು ಚುನಾವಣೆಗೆ ಸೇತುವೆ  ಪ್ರಮುಖ ಪ್ರಚಾರದ ಸರಕಾಗುತಿತ್ತು.  ಮಳೆಗಾಲದಲ್ಲಿ ಮರದ ಸೇತುವೆ  ಶಿಥಿಲಗೊಳ್ಳುವುದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿತ್ತು ಮತ್ತು  ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ರೈತರು, ಮೀನುಗಾರರು, ಕೂಲಿ ಕಾರ್ಮಿಕರು  ಸಾಕಷ್ಟು ಸಮಸ್ಯೆ ಎದುರಿಸು ತ್ತಿದ್ದರು.

ಹೀಗಾಗಿ ಅಗತ್ಯ ವಾಗಿ ಇಲ್ಲೊಂದು ಸೇತುವೆ ನಿರ್ಮಾಣ ವಾಗಬೇಕು ಎನ್ನುವ ಕೂಗು ಕೇಳಿ ಬರುತ್ತಿತ್ತು. ಇತ್ತೀಚೆಗೆ ಪಾರಂಪಳ್ಳಿ  ವಾರ್ಡ್‌ ಸದಸ್ಯರಾದ  ರೇಖಾ ಕೇಶವ್‌, ಪಟ್ಟಣ ಪಂಚಾಯ ತ್‌ ಸದಸ್ಯ ರಾಜು ಪೂಜಾರಿ ಕಾರ್ಕಡ, ಹೆಗ್ಗಡ್ತಿಮಕ್ಕಿ ವಾರ್ಡ್‌ ಮಾಜಿ ಸದಸ್ಯ ಕರುಣಾಕರ ಶಾಸಕರಲ್ಲಿ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದರು.

ಪಾರಂಪಳ್ಳಿಗೆ ಕೋಟ-ಸಾಲಿಗ್ರಾಮ ಇನ್ನೂ ಹತ್ತಿರ  :

Advertisement

ಪಾರಂಪಳ್ಳಿ-ಪಡುಕರೆಯ  ನಿವಾಸಿಗಳು ಸಾಲಿಗ್ರಾಮ ಹಾಗೂ ಕೋಟ ತಲುಪಬೇಕಾದರೆ 8 ಕಿ.ಮೀ. ಸುತ್ತುವರಿದು ಸಂಚರಿಸಬೇಕಿತ್ತು. ಆದರೆ ಈ ಮರದ ಸೇತುವೆ ಮೂಲಕ ಕೇವಲ 2-3 ಕಿ.ಮೀ. ಪ್ರಯಾಣಿಸಿ ಈ ಪ್ರದೇಶಗಳನ್ನು ತಲುಪಬಹುದು. ಸೇತುವೆಯ ಎರಡು ಕಡೆ  ಮುಖ್ಯ ರಸ್ತೆ ತನಕ ಹಲವು ವರ್ಷದ ಹಿಂದೆಯೇ ರಸ್ತೆ ನಿರ್ಮಾಣಗೊಂಡಿದ್ದು ಕೇವಲ ಸೇತುವೆ ನಿರ್ಮಾಣವಾಗುವುದು ಮಾತ್ರ ಬಾಕಿ ಇತ್ತು.  ಹೀಗಾಗಿ  ಶಾಶ್ವತ ಸೇತುವೆಯಾದ ಮೇಲೆ ಈ ಭಾಗದ ಜನರು ಬಹಳಷ್ಟು ಹತ್ತಿರದಲ್ಲಿ ಸಾಲಿಗ್ರಾಮ, ಕೋಟವನ್ನು ಸಂಪರ್ಕಿಸಬಹುದಾಗಿದೆ.

ಹಲವು  ಬಾರಿ ವರದಿ  :

ಸೇತುವೆ ಸಮಸ್ಯೆ ಬಗ್ಗೆ ಉದಯವಾಣಿ ಹಲವು ಬಾರಿ ವಿಸ್ತೃತ ವರದಿಗಳ ನ್ನು ಪ್ರಕಟಿಸಿ ಜನ ಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದಿತ್ತು.ಪಾರಂಪಳ್ಳಿಯ ನಾಯ್ಕನ್‌ಬೈಲು ಮರದ ಸೇತುವೆ ಬಳಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ವರ್ಷದಿಂದ ಬೇಡಿಕೆ ಇದ್ದು ಇದೀಗ ಪಿ.ಡಬ್ಲ್ಯು. ಡಿ. ಇಲಾಖೆಯಿಂದ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳು ಸೇತುವೆಯ ನೀಲನಕ್ಷೆ ಸಿದ್ಧಪಡಿಸಿ ಅನುಮೋದನೆಗಾಗಿ ಕಳುಹಿಸಿದ್ದಾರೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲೆ  ಶೀಘ್ರವಾಗಿ ಟೆಂಡರ್‌ ನಡೆಯಲಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ,   ಶಾಸಕರು ಕುಂದಾಪುರ ಕ್ಷೇತ್ರ

ಪಾರಂಪಳ್ಳಿ ಪಡುಕರೆಯ ಜನರು ಹಲವು ದಶಕಗಳಿಂದ ಈ ಸೇತುವೆಯ ಕಸನು ಕಾಣುತ್ತಿದ್ದರು. ಚುನಾವಣೆ ಸಂದರ್ಭ ಜನರಿಗೆ ನೀಡಿದ ಭರವಸೆಯಂತೆ ಈ ಕಾಮಗಾರಿಯನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದ್ದೆ. ಅವರ ಶಿಫಾರಸಿನ ಮೇರೆಗೆ ಹೊಸ ಸೇತುವೆ ನಿರ್ಮಾಣಕ್ಕೆ  ಇದೀಗ ಅನುದಾನ ಮಂಜೂರಾಗಿರುವುದು ತುಂಬಾ ಖುಷಿ ತಂದಿದ್ದು  ಊರಿನ ಜನರ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.ರೇಖಾ ಕೇಶವ್‌,  ಪಾರಂಪಳ್ಳಿ  ವಾರ್ಡ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next