ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದ ಹಿನ್ನೆಲೆಯಲ್ಲಿ ಗೃಹ ಸಚಿವ ಸ್ಥಾನಕ್ಕೆ ಡಾ. ಜಿ. ಪರಮೇಶ್ವರ್ ನೀಡಿದ್ದ ರಾಜಿನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅಂಗೀಕರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಕಳಿಸಿಕೊಟ್ಟಿದ್ದ ಪರಮೇಶ್ವರ್ ಅವರ ರಾಜಿನಾಮೆ ಪತ್ರಕ್ಕೆ ರಾಜ್ಯಪಾಲರು ಶನಿವಾರ ಅಂಗೀಕಾರ ನೀಡಿದ್ದಾರೆ. ಇದೀಗ ಗೃಹ ಖಾತೆ ಹೊಣೆಗಾರಿಕೆಯೂ ಮುಖ್ಯಮಂತ್ರಿಯವರ ಹೆಗಲಿಗೇರಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಮರು ನೇಮಕಗೊಂಡ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಜೂ.1ಕ್ಕೆ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದರು. ಆದರೆ, ವಿಧಾನಮಂಡಲದ ಮುಂಗಾರು ಅಧಿವೇಶನ ಮುಗಿಯುವವರೆಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವಂತೆ ಮುಖ್ಯಮಂತ್ರಿಯವರು ಪರಮೇಶ್ವರ್ ಅವರಿಗೆ ಸೂಚನೆ ನೀಡಿದ್ದರು.
ಜೂನ್ 21ಕ್ಕೆ ಅಧಿವೇಶನ ಮುಗಿದರೂ, ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಕಳಿಸಿಕೊಟ್ಟಿರಲ್ಲಿಲ್ಲ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಪರಮೇಶ್ವರ್ ಅವರು ಸರ್ಕಾರದ ಅಧಿಕೃತ ವಾಹನ ಬಿಟ್ಟು, ಕೆಪಿಸಿಸಿ ಕಾರಿನಲ್ಲಿ ತೆರಳಿ ರಾಜೀನಾಮೆ ಅಂಗೀಕಾರವಾಗದ ಬಗ್ಗೆ ಅತೃಪ್ತಿ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಸಂಜೆ ವೇಳೆ ರಾಜಿನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳಿಸಿಕೊಡಲಾಗಿತ್ತು.
ಮೂರು ಸ್ಥಾನ ಖಾಲಿ
ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆ ಅಂಗೀಕಾರದಿಂದ ಸಿದ್ದರಾಮಯ್ಯ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಉಳಿದಂತಾಗಿದೆ. ಈ ಹಿಂದೆ ಎಚ್.ಎಸ್.ಮಹದೇವಪ್ರಸಾದ್ ನಿಧನದಿಂದ ಒಂದು ಸ್ಥಾನ ತೆರವಾಗಿತ್ತು. ಎಚ್.ವೈ. ಮೇಟಿ ರಾಜೀನಾಮೆಯಿಂದ ಒಂದು ಸ್ಥಾನ ತೆರವಾಗಿತ್ತು.
ಮೂರೂ ಸ್ಥಾನ ಭರ್ತಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದ್ದು, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಹೈಕಮಾಂಡ್ ಭೇಟಿ ನಂತರ ಪ್ರಮಾಣ ವಚನ ಸಮಯ ನಿಗದಿಯಾಗಲಿದೆ. ಮೂರು ಸಚಿವ ಸ್ಥಾನಕ್ಕೆ ಒಂದು ಡಜನ್ ಆಕಾಂಕ್ಷಿಗಳು ಲಾಬಿಯಲ್ಲಿ ತೊಡಗಿದ್ದಾರೆ.