ಬೆಂಗಳೂರು: ಒಂದು ವೇಳೆ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ’ ಲಖನೌಗೆ ಸ್ಥಳಾಂತರಗೊಂಡರೆ, ಅದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕನ್ನಡಿಗರಿಗೆ ಮಾಡಿದ ದೊಡ್ಡ ಅವಮಾನ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವೈಮಾನಿಕ ಪ್ರದರ್ಶನವು ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರಗೊಂಡ ಬಗ್ಗೆ ರಾಜ್ಯ ಸರ್ಕಾರಕ್ಕೆ ಇದುವರೆಗೆ ಯಾವುದೇ ನಿಖರ ಮಾಹಿತಿ ಇಲ್ಲ. ಹಾಗೊಂದು ವೇಳೆ ಇದು ನಿಜವಾಗಿದ್ದರೆ, ಕರ್ನಾಟಕಂದಲೇ ರಾಜ್ಯಸಭೆಗೆ ನೇಮಕಗೊಂಡು ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಕನ್ನಡಿಗರಿಗೆ ಮಾಡಿದ ದೊಡ್ಡ ಅವಮಾನ’ ಎಂದು ದೂರಿದರು.
ಕಳೆದ 22 ವರ್ಷಗಳಿಂದ ವೈಮಾನಿಕ ಪ್ರದರ್ಶನ ಇಲ್ಲಿ ನಡೆಯುತ್ತಿದ್ದು, ದೇಶಕ್ಕೇ ಗೌರವ ಮತ್ತು ಹೆಮ್ಮೆ ತಂದುಕೊಡುತ್ತಿದೆ. ಈ ಹಿಂದಿನ ಸರ್ಕಾರಗಳು ಇದಕ್ಕೆ ಸಹಕಾರ ನೀಡುತ್ತಾ ಬಂದಿವೆ. ಅದೇ ರೀತಿ, ಹೊಸ ಸರ್ಕಾರ ಕೂಡ ಇದಕ್ಕೆ ಸಹಕಾರ ನೀಡುತ್ತಿದೆ. ಹಾಗಿದ್ದರೆ, ಯಾವ ಕಾರಣಕ್ಕೆ ಇಲ್ಲಿಂದ ಸ್ಥಳಾಂತರ ಮಾಡುತ್ತಾರೆ? ಮೂಲಸೌಕರ್ಯಗಳಿಲ್ಲವೇ? ಸ್ಥಳಾಂತರ ಮಾಡಿದರೆ, ಇದನ್ನು ತೀವ್ರವಾಗಿ ಖಂಡಿಸಲಾಗುವುದು ಎಂದು ಹೇಳಿದರು.
ರಾಜಕೀಯ ಕಾರಣ ಇದರ ಹಿಂದೆ ಇದೆಯೇ ಎಂಬ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ಸ್ಥಳಾಂತರ ಮಾಡುತ್ತಿರುವುದು ನಿಜವಾದರೆ, ರಾಜಕೀಯವಲ್ಲದೆ ಬೇರೆ ಯಾವ ಕಾರಣವೂ ಇಲ್ಲ ಎಂದು ತಿಳಿಯಬೇಕಾಗುತ್ತದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋಲಿಗೆ ತಾವು ಕಾರಣ ತಾವೇ ಎಂದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ, “ಈಶ್ವರಪ್ಪ ಅವರ ಮಾನಸಿಕ ಸಮತೋಲನ ಸರಿಯಾಗಿದೆ ಎಂದುಕೊಂಡಿದ್ದೆ. ಆದರೆ ಇತ್ತೀಚಿನ ಅವರ ಹೇಳಿಕೆಗಳನ್ನು ನೋಡಿದರೆ, ಅದು ಏರುಪೇರು ಆಗಿದೆ ಎನಿಸುತ್ತಿದೆ’ ಎಂದು ತಿರುಗೇಟು ನೀಡಿದರು.