ಕೊರಟಗೆರೆ: ”ಡಾ.ಜಿ.ಪರಮೇಶ್ವರ್ ಅವರರನ್ನು ಸೋಲಿಸಿದ್ದು ಕಾಂಗ್ರೆಸ್‌ನವರೆ ಎಂದು ಅವರ ಪಕ್ಷದವರೇ ಮಾತನಾಡಿಕೊಳ್ಳುತ್ತಾರೆ, ಅವರು ಪಕ್ಷದ ಅಧ್ಯಕ್ಷರಾಗಿದ್ದಾಗಲೆ ಮುಖ್ಯಮಂತ್ರಿ ಮಾಡಲಿಲ್ಲ ಈಗ ಮಾಡುತ್ತಾರೆಯೇ? ನನ್ನ ಸರಕಾರಕ್ಕೆ ನನ್ನ ಅಭ್ಯರ್ಥಿ ಸುಧಾಕರಲಾಲ್ ಗೆಲುವು ಮುಖ್ಯ” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕೊರಟಗೆರೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸರಕಾರಿ ಅಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯವಾಗುತ್ತಿದೆ. ವೈದ್ಯರು ತಪ್ಪುಮಾಡಿ ಜನರ ಜೀವ ತೆಗೆದಾಗ ಅವರನ್ನು2 ತಿಂಗಳು ಅಮಾನತ್ತುಗೊಳಿಸಿ ಮತ್ತೆ ಸೇವೆಗೆ ತೆಗೆದುಕೊಂಡರೆ ಮತ್ತೆ ಅದೇ ಕಥೆ, ವೈದ್ಯರು ರೋಗಿಗಳನ್ನು ದೇವರಂತೆ ಕಂಡು ಸೇವೆ ಮಾಡಬೇಕು ಆದರೆ ಹಾಗಾಗುತ್ತಿಲ್ಲ. ಇದನ್ನು ಆರೋಗ್ಯ ಸಚಿವರು ಗಂಭೀರವಾಗಿ ಪರಿಗಣಿಸಿ ವೈದ್ಯರ ಸಭೆ ಕರೆದು ಎಚ್ಚರಿಸಿ ಸಾಮಾನ್ಯ ಜನರ ಪ್ರಾಣದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ರಥ ಯಾತ್ರೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ, ಪಂಚರತ್ನ ಯಾತ್ರೆಯ ಉದ್ದೇಶ ರಾಜ್ಯದಲ್ಲಿ 2023 ರಲ್ಲಿ ಜೆಡಿಎಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು.ಜನತೆಗೆ ಪಂಚರತ್ನ ಯೋಜನೆ ಜಾರಿಗೆ ತರಲಾಗುವುದು, ಈ ಭೂಮಿಯ ಮೇಲೆ ಪಂಚಭೂತಗಳು ಎಷ್ಟು ಮುಖ್ಯವೊ, ಮನುಷ್ಯನಿಗೆ ಪಂಚೇಂದ್ರಿಯಗಳು ಎಷ್ಟು ಪ್ರಾಮುಖ್ಯವೋ, ರಾಜ್ಯದಲ್ಲಿ ಬಡಜನರ ನೆಮ್ಮದಿ ಬದುಕಿಗೆ ನಮ್ಮ ಪಂಚರತ್ನ ರಥಯಾತ್ರೆ ಮುಖಾಂತರ ಯೋಜನೆಗಳು ಅಷ್ಟೇ ಪ್ರಾಮುಖ್ಯತೆ ಪಡೆದಿವೆ ಎಂದರು.
ಈ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಬೃಹತ್ ಆಸ್ಪತ್ರೆ, ವೃದ್ದರಿಗೆ ತಿಂಗಳಿಗೆ 1ನೇ ತಾರೀಕಿಗೆ ಸರಿಯಾಗಿ 5000 ರೂ., ವಿಧವೆಯರಿಗೆ 2500 ಪಿಂಚಣಿ, ಸ್ರೀ ಶಕ್ತಿ ಸಂಘಗಳಿಗೆ ಸರ್ಕಾರದಿಂದ ನೇರ ಉತ್ತೇಜನ ಹಣ, ಗ್ರಾಮಾಂತರ ಮಕ್ಕಳಿಗೆ ಖಾಸಗಿ ಶಾಲೆ ರೀತಿ ಸರಕಾರಿ ಶಾಲೆ, ರೈತರಿಗೆ ಸಂಪೂರ್ಣ ಸಾಲ ಮನ್ನಾ, ಯುವಕರಿಗೆ ಉದೋಗ್ಯ ಉತ್ತೇಜನ, ಮಹಿಳೆಯರಿಗೆ ಸ್ವಯಂ ಉದ್ಯೋಗ, ಎಲ್ಲರಿಗೂ ವಸತಿ ಯೋಜನೆ, ಸೇರಿದಂತೆ ಬಡವರಿಗೆ ನಾನು ಈ ಕಾರ್ಯಕ್ರಮ ನೀಡಬೇಕಾದರೆ ನನಗೆ ಶಕ್ತಿ ತುಂಬಿ ಸಂಪೂರ್ಣ ಬೆಂಬಲದ ಸರ್ಕಾರ ಕೊಡಿ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ, ಹಣವನ್ನು ಇಲ್ಲದ ಕಾರ್ಯಕ್ರಮದ ಹೆಸರಿನಲ್ಲಿ ಜನರ ಹಣ ಲೂಟಿಯಾಗುತ್ತಿದೆ ನಮ್ಮ ಪಕ್ಷ ಬಂದರೆ ಬಡವರ ಕಲ್ಯಾಣವೆ ಗುರಿ ಎಂದರು.
ಕಳೆದ ಚುನಾವಣೆಯಲ್ಲಿ ಲೋಪ ದೋಷಗಳಿಂದ ಸುಧಾಕರ ಲಾಲ್ ಸೋತಿದ್ದಾರೆ,ಆದರೆ ಈ ಬಾರಿ ಹಾಗೆ ಅಗುವುದಿಲ್ಲ ಎಂದರು.
ಮಾಜಿ ಶಾಸಕ ಸುಧಾಕರಲಾಲ್ ಕ್ಷೇತ್ರಕ್ಕೆ ಕುಮಾರಸ್ವಾಮಿಯವರ ಆಗಮನವನ್ನು ಅದ್ದೂರಿ ಸ್ವಾಗತ ಮಾಡಿದ ಕಾರ್ಯಕರ್ತರಿಗೆ ಮತದಾರರಿಗೆ ಧನ್ಯವಾದ ತಿಳಿಸಿದರು.
ಈ ಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಂಜಿನಪ್ಪ, ಕಾರ್ಯಾಧ್ಯಕ್ಷ ಮಹಾಲಿಂಗಪ್ಪ, ಮಾಜಿ ಜಿ.ಪಂ ಸದಸ್ಯ ಶಿವರಾಮಯ್ಯ, ತಿಮ್ಮಯ್ಯ, ಕ್ಷೇತ್ರದ ಕಾರ್ಯಾಧ್ಯಕ್ಷ ನರಸಿಂಹರಾಜು, ಸಿದ್ದಮಲ್ಲಯ್ಯ ಸೇರಿದಂತೆ ಇತರರು ಹಾಜರಿದ್ದರು.