ಬೆಂಗಳೂರು: ಜೆಡಿಎಸ್‌ನೊಂದಿಗೆ ಸೀಟು ಹಂಚಿಕೆ ವಿಷಯದಲ್ಲಿ ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟಿರುವುದರಿಂದ ಮುನಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಕೆಪಿಸಿಸಿ ರಾಜ್ಯ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟು ಕೊಡಬಾರದು ಎಂದು ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ತೀರ್ಮಾನವಾಗಿದ್ದರೂ, ಕೊನೇ ಕ್ಷಣದಲ್ಲಿ ಹಾಲಿ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ತಮಗೆ ಅನ್ಯಾಯ ಮಾಡಲಾಗಿದೆ ಎಂದು ಪರಮೇಶ್ವರ್ ತಮ್ಮ ಆಪ್ತರೆದುರು ಅಸಮಾಧಾನ ಹೊರಹಾಕಿದ್ದರು.
ಆದರೂ, ತಮ್ಮ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಅವರು ಮುನಿಸಿಕೊಂಡು ಅಂತರ ಕಾಯ್ದುಕೊಂಡರೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎನ್ನುವ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪರಮೇಶ್ವರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ತುಮಕೂರು ಕ್ಷೇತ್ರವನ್ನು ಜೆಡಿಎಸ್‌ನಿಂದ ವಾಪಸ್ ಪಡೆಯಲು ರಾಜ್ಯದ ಎಲ್ಲ ನಾಯಕರೂ ಹೈಕಮಾಂಡ್ ಮೂಲಕ ಜೆಡಿಎಸ್ ಮೇಲೆ ಒತ್ತಡ ಹೇರುವ ಬಗ್ಗೆ ಪರಮೇಶ್ವರ್‌ಗೆ ಮನವರಿಕೆ ಮಾಡಿ, ಸೋಮವಾರ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪರಿವರ್ತನಾ ಯಾತ್ರೆ ಯಶಸ್ವಿಗೊಳಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಆದರೂ, ರಾಹುಲ್ ಗಾಂಧಿಯಾತ್ರೆ ಮಾಡಲು ದೊಡ್ಡ ನಾಯಕರಿದ್ದಾರೆ. ನಾನೇಕೆ ಬೇಕು ನನ್ನನ್ನು ಒಂದು ಜಿಲ್ಲೆಯ ನಾಯಕ ಎಂದು ಪರಿಗಣಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಪರಮೇಶ್ವರ್ ನಮ್ಮ ನಾಯಕರು. ಚುನಾವಣಾ ಸಿದ್ದತೆ ಕುರಿತು ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಕೇವಲ ತುಮಕೂರು ಜಿಲ್ಲೆಗೆ ಸೀಮಿತವಾದ ನಾಯಕರಲ್ಲ. ತುಮಕೂರು ಕ್ಷೇತ್ರವನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ಎರಡೂ ಪಕ್ಷದ ನಾಯಕರು ಕುಳಿತು ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಏನಾದರೂ ಆಗಬಹುದು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ರಾಜ್ಯ ಅಧ್ಯಕ್ಷ