ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗುವ ಮೂಲಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಭೆಗಳಿಂದ ಅಂತರ ಕಾಯ್ದು ಕೊಳ್ಳುವ ಯತ್ನ ಮುಂದುವರಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯಗೆ ಸಂದೇಶ ರವಾನೆ ಮಾಡಿದ್ದಾರೆ.
ಪ್ರತಿಪಕ್ಷ ನಾಯಕನ ಆಯ್ಕೆ ಕುರಿತಂತೆ ಮಂಗಳವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದ ಪರಮೇಶ್ವರ್, ಬುಧವಾರವೂ ದೆಹಲಿ ಯಲ್ಲಿಯೇ ಉಳಿದುಕೊಂಡಿರುವುದು ಕುತೂಹಲಕ್ಕೆ ಕಾರಣ ವಾಗಿದೆ. ಪಕ್ಷದಲ್ಲಿ ಎಲ್ಲವೂ ಸಿದ್ದರಾಮಯ್ಯ ಅಣತಿಯಂತೆ ನಡೆಯುತ್ತಿದ್ದು, ದಿನೇಶ್ ಗುಂಡೂರಾವ್ ಕೂಡ ಸಿದ್ದರಾಮಯ್ಯ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ಪರಮೇಶ್ವರ್ ಕೂಡ ಅದೇ ಕಾರಣಕ್ಕೆ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಿಸಿಎಂ ಸ್ಥಾನದಿಂದ ಪರಮೇಶ್ವರ್ ಕೆಳಗಿಳಿದ ನಂತರ ಬೆಂಗಳೂರಿನಲ್ಲಿಯೇ ಇದ್ದರೂ, 17 ಕ್ಷೇತ್ರಗಳಿಗೆ ಉಪ ಚುನಾವಣೆ ಸಿದ್ಧತೆ ಕುರಿತು ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗಳಿಗೆ ಹಾಜರಾಗದೇ ದೂರ ಉಳಿದಿದ್ದರು.
ಪಕ್ಷದ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರತಿಪಕ್ಷ ನಾಯಕ ಕುರಿತಂತೆಯೂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡು ರಾವ್ ಮಾತ್ರ ಪ್ರತ್ಯೇಕವಾಗಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಅನುಮೋದನೆ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಅವರಿಗೆ ಸೋನಿಯಾ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ದೆಹಲಿಗೆ ತೆರಳಿದ ನಾಲ್ಕೇ ದಿನದಲ್ಲಿ ಪರಮೇಶ್ವರ್ ಏಕಾಂಗಿಯಾಗಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅನರ್ಹ ಶಾಸಕರ ಕ್ಷೇತ್ರಗಳ ಚುನಾವಣೆ ಕುರಿತಂತೆಯೇ ಚರ್ಚಿಸಲು ದೆಹಲಿಯಿಂದ ಸಿದ್ದರಾಮಯ್ಯ ಹಾಗೂ ದಿನೇಶ್ ವಾಪಸ್ ಬಂದಿದ್ದರು. ಆದರೆ, ಅಧಿಕೃತ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರೂ, ದೆಹಲಿಯಲ್ಲಿಯೇ ಉಳಿದು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹೈಕಮಾಂಡ್ ನಾಯಕರ ಭೇಟಿಯ ನಂತರ ಮಾಧ್ಯಮಗ ಳೊಂದಿಗೆ ಮಾತನಾಡಿದ ಅವರು, ಒಂದು ವರ್ಷದಿಂದ ಸೋನಿಯಾ ಅವರನ್ನು ಭೇಟಿ ಮಾಡಿರಲಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ನಡೆಸಿದ್ದೇನೆ. ಪಕ್ಷವನ್ನು ಯಾವ ರೀತಿ ಮತ್ತೆ ಸಂಘಟಿಸಬೇಕು. ಮಧ್ಯಂತರ ಚುನಾವಣೆ ನಡೆದರೆ ಪಕ್ಷವನ್ನು ಯಾವ ರೀತಿ ಮುನ್ನಡೆಸಬೇಕು ಎನ್ನುವ ಕುರಿತು ಚರ್ಚೆ ನಡೆಸಿದ್ದೇವೆ. ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಸೋನಿಯಾ ಗಾಂಧಿ ಜೊತೆಗೆ ಚರ್ಚೆ ನಡೆಸಿಲ್ಲ ಎಂದರು.
ಪರಮೇಶ್ವರ್ ಅವರು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ. ನಾನು ಭೇಟಿ ಮಾಡಬೇಡಿ ಅಂತ ಹೇಳಲು ಆಗುತ್ತದೆಯೇ? ನಾವು ಭೇಟಿ ಮಾಡಲು ಹೋದಾಗ ಅವರು ಬೇರೆ ಕೆಲಸದಲ್ಲಿ ಬಿಜಿಯಾಗಿ ದ್ದರು. ಸದ್ಯಕ್ಕೆ ನಾನು ದೆಹಲಿಗೆ ಹೊಗುತ್ತಿಲ್ಲ.
-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ