Advertisement

ಪರಮಾನಂದ ಭಾರತೀ ಸ್ವಾಮೀಜಿ ವಿಧಿವಶ

11:52 PM Jul 29, 2019 | Team Udayavani |

ಶೃಂಗೇರಿ/ಸಿದ್ದಾಪುರ: ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಕಳೆದ 35 ವರ್ಷದ ಹಿಂದೆ ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಸನ್ಯಾಸ ಸ್ವೀಕರಿಸಿದ್ದ ಶ್ರೀ ಪರಮಾನಂದ ಭಾರತೀ ಸ್ವಾಮೀಜಿಗಳು (86) ಭಾನುವಾರ ರಾತ್ರಿ ಬೆಂಗಳೂರಿನ ಗಿರಿನಗರದಲ್ಲಿ ಮುಕ್ತರಾಗಿದ್ದಾರೆ.

Advertisement

ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಿದ್ದ ಇವರ ಪೂರ್ವಾಶ್ರಮದ ಹೆಸರು ಟಿ.ಎಸ್‌. ಶಂಕರ್‌. ಚೆನ್ನೈನ ಐಐಟಿಯಲ್ಲಿ ಗಣಿತ ಪ್ರಾಧ್ಯಾಪಕ ಹಾಗೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಇವರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.

ಬೆಂಗಳೂರಿನ ವೇದಾಂತ ಸುಬ್ಬಯ್ಯ ಹಾಗೂ ಶಾರದಮ್ಮ ದಂಪತಿಗಳ ಪುತ್ರರಾದ ಇವರು ಧರ್ಮ ಜಾಗೃತಿ, ಅಧ್ಯಾತ್ಮವನ್ನೇ ಜೀವನದ ಪರಮ ಧ್ಯೇಯವಾಗಿಸಿಕೊಂಡಿದ್ದರು. ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದಲ್ಲಿ ಅಧ್ಯಾತ್ಮಿಕ ಜಾಗೃತಿಗಾಗಿ ಲಲಿತಾ ಸಹಸ್ರನಾಮವನ್ನು ಪ್ರಚುರಪಡಿಸಿದ್ದರು. ಬೆಂಗಳೂರಿನಲ್ಲಿ ಕೋಟಿ ಗಾಯತ್ರಿ ಜಪ ಯಜ್ಞ ಮತ್ತು ಶಂಕರ ಮಠದಲ್ಲಿ ಲಲಿತಾ ಸಹಸ್ರನಾಮ ಕೋಟಿ ಅರ್ಚನೆ ಕಾರ್ಯಕ್ರಮ ಆಯೋಜಿಸಿದ್ದರು.

ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಉಪನ್ಯಾಸ ನೀಡುವ ಮೂಲಕ ಜಿಜ್ಞಾಸುಗಳಿಗೆ ಪರಿಹಾರ ಸೂಚಿಸಿದ್ದರು. ವಾಕ್ಯಾರ್ಥ ಗೋಷ್ಠಿ ನಡೆಸಿ ವಿದ್ವಾಂಸರನ್ನು ಪುರಸ್ಕರಿಸಿದ ಹಿರಿಮೆ ಶ್ರೀ ಪರಮಾನಂದ ಭಾರತೀ ಶ್ರೀಗಳಿಗೆ ಸಲ್ಲುತ್ತದೆ. ವೇದಾಂತ ಪ್ರಬೋ ಧಿನಿ, ತದ್ದಜಲಾನ್‌, ಶ್ರೇಯಸ್ಕರಿ, ಮಹಾಪರಿವಾಜ್ರಕ, ಸಂಶಯಾಗ್ನಿ, ಕಾಸಾಲಿಟಿ ಎನ್ನುವ ಕೃತಿಗಳನ್ನು ರಚಿಸಿದ್ದರು.

ಪರಮಾನಂದ ಭಾರತೀ ಸ್ವಾಮೀಜಿಗಳ ಸಮಾಧಿ ವಿಧಿ ವಿಧಾನಗಳನ್ನು ಸೋಮವಾರ ಅವರ ಪೂರ್ವಾಶ್ರಮದ ಸಹೋದರ ಗೀತಪ್ರಭು ಸಿದ್ದಾಪುರ ತಾಲೂಕಿನ ಶಿರಳಗಿಯ ರಾಜಾರಾಮ ಕ್ಷೇತ್ರದಲ್ಲಿ ವೈದಿಕ ವೆಂಕಟೇಶ ಶಾಸ್ತ್ರಿ ಮತ್ತಿತರರ ಮಾರ್ಗದರ್ಶನದಲ್ಲಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.