Advertisement

ಕಲ್ಪತರು ಕನಸಲ್ಲಿ ಪರಂ

11:01 AM Feb 20, 2018 | |

ಕಲ್ಪತರು ನಾಡಿನಲ್ಲಿ ರಾಜಕೀಯ ರಂಗೇರುತ್ತಿದೆ. ತವರಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌  ಅವರಿಗೆ ಪ್ರತಿಷ್ಠೆ ಯಾಗಿದೆ.  11 ವಿಧಾನಸಭಾ ಕ್ಷೇತ್ರ ಹೊಂದಿರುವ ಈ ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಈಗ  ಹಂತ ಹಂತವಾಗಿ ಜೆಡಿಎಸ್‌ ಪ್ರಾಬಲ್ಯ ಸಾಧಿಸುತ್ತಿದ್ದರೆ, ಬಿಜೆಪಿಯೂ ಗೆಲುವಿಗೆ ತಂತ್ರ ರೂಪಿಸುತ್ತಿದೆ. ಜಿಲ್ಲೆಯಲ್ಲಿ ಒಕ್ಕಲಿಗರು, ವೀರಶೈವರು, ಅಲ್ಪಸಂಖ್ಯಾತರು ಪ್ರಬಲರಾಗಿದ್ದಾರೆ. ಉಳಿದಂತೆ ದಲಿತ, ಹಿಂದುಳಿದ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.

Advertisement

ಪಾವಗಡ: ಮೀಸಲು ಕ್ಷೇತ್ರವಾಗಿರುವ ಪಾವಗಡ,  ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ. ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆಯೇ ಇಲ್ಲಿ ನೇರಸ್ಪರ್ಧೆ. ಹಾಲಿ ಜೆಡಿಎಸ್‌ ಶಾಸಕ ಕೆ.ಎಂ. ತಿಮ್ಮರಾಯಪ್ಪ ಈ ಬಾರಿಯೂ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ವೆಂಕರಮಣಪ್ಪಮತ್ತು ಅವರ ಪುತ್ರ ಜಿ.ಪಂ. ಸದಸ್ಯ ಎಚ್‌.ವಿ. ವೆಂಕಟೇಶ್‌ ಹಾಗೂ ಎಂಡಿ ಬಲರಾಮ್‌ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಯಲ್ಲಿ ಡಿ. ಶಿವಕುಮಾರ್‌ ಸಾಕೇಲ, ರಾಮಕೃಷ್ಣ, ಜನಾರ್ದನ ಸ್ವಾಮಿ ಆಕಾಂಕ್ಷಿಗಳಾಗಿದ್ದಾರೆ.

ಕೊರಟಗೆರೆ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸ್ಪರ್ಧಿಸಲಿರುವ ಈ ಮೀಸಲು ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಗೆಲ್ಲಲೇಬೇಕೆಂದು ಪಣತೊಟ್ಟು ಪ್ರಚಾರಕ್ಕಿಳಿದಿದ್ದಾರೆ ಪರಮೇಶ್ವರ್‌. ಕಳೆದ ಬಾರಿ ಜೆಡಿಎಸ್‌ನ ಸುಧಾಕರ ಲಾಲ್‌ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರೇ ಸ್ಪರ್ಧಿ. 
ಬಿಜೆಪಿಯಿಂದ ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವೈ.ಹೆಚ್‌ ಹುಚ್ಚಯ್ಯ, ಡಾ. ಲಕ್ಷಿಕಾಂತ್‌, ಬೆಂಗಳೂರಿನ ಆರತಿ ಟಿಕೆಟ್‌ ಕೇಳುತ್ತಿದ್ದಾರೆ.

ಮಧುಗಿರಿ: ಕಳೆದ  ಬಾರಿ ರಾಜ್ಯ ಅಪೆಕ್ಸ್‌ ಬ್ಯಾಕ್‌ ಮತ್ತು  ಡಿಸಿಸಿ ಬ್ಯಾಂಕ್‌ ಅಧ್ಯಕ್ಷ  ಕೆ.ಎನ್‌. ರಾಜಣ್ಣ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ಈ ಬಾರಿಯೂ ಅವರೇ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್‌ನಿಂದ ಐಎಎಸ್‌ ಅಧಿಕಾರಿ ಎಂ.ವಿ. ವೀರಭದ್ರಯ್ಯ  ಸ್ಪರ್ಧಿಸುತ್ತಿದ್ದಾರೆ.  ಬಿಜೆಪಿಯಿಂದ  ರಮೇಶ್‌ ರೆಡ್ಡಿ, ಸುರಕ್ಷ ಮಂಜುನಾಥ್‌ ಆಕಾಂಕ್ಷಿಗಳಾಗಿದ್ದಾರೆ. 

ಶಿರಾ: ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ  ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.  ಜೆಡಿಎಸ್‌ನಿಂದ ಬಿ. ಸತ್ಯನಾರಾಯಣ್‌ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿಯಿಂದ  ಬಿ.ಕೆ. ಮಂಜುನಾಥ್‌, ಎಸ್‌.ಆರ್‌.ಗೌಡ, ಸಿ.ಎಂ.ನಾಗರಾಜ್‌ಆಕಾಂಕ್ಷಿಗಳು. 

Advertisement

ಚಿಕ್ಕನಾಯಕನಹಳ್ಳಿ: ಕಾಂಗ್ರೆಸ್‌ ಹಳೆ ಭದ್ರ ಕೋಟೆ ಯಲ್ಲಿ 2ನೇ ಬಾರಿಗೆ ಶಾಸಕರಾಗಿರು ವ ಜೆಡಿಎಸ್‌ನ ಸಿ.ಬಿ.ಸುರೇಶ್‌ಬಾಬು ಅವರಿಗೇ ಟಿಕೆಟ್‌ ಘೋಷಣೆ ಆಗಿದೆ. ಬಿಜೆಪಿಯಲ್ಲಿ ಜೆ.ಸಿ.ಮಾದುಸ್ವಾಮಿ, ಕೆ.ಎಸ್‌. ಕಿರಣ್‌ ಕುಮಾರ್‌,  ಸಿ.ಎಂ. ಮಂಜುಳ ನಾಗರಾಜ್‌ ಟಿಕೆಟ್‌ ಕನಸಿನಲ್ಲಿ ದ್ದಾರೆ. ಕಾಂಗ್ರೆಸ್‌ನಿಂದ ವೈ.ಸಿ. ಸಿದ್ಧರಾಮಯ್ಯ, ಸಾಸಲು ಸತೀಶ್‌, ತು.ಬಿ. ಮಲ್ಲೇಶ್‌,  ಜಯಚಂದ್ರ ಪುತ್ರ  ಸಂತೋಷ್‌ ಜಯಚಂದ್ರಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. 

ಗುಬ್ಬಿ: ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಜೆಡಿಎಸ್‌ನ ಎಸ್‌.ಆರ್‌. ಶ್ರೀನಿವಾಸ್‌ ಅವರಿಗೇ ಈ ಬಾರಿಯೂ ಟಿಕೆಟ್‌ ನೀಡಲಾಗಿದೆ.  ಬೆಟ್ಟಸ್ವಾಮಿ ಗೌಡ, ರಾಮಾಂಜಿನಪ್ಪ, ದಿಲೀಪ್‌ಕುಮಾರ್‌, ಚಂದ್ರಶೇಖರ್‌ಬಾಬು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು. ಕಾಂಗ್ರೆಸ್‌ನಿಂದ ಬಾಲಾಜಿ ಕೆ. ಕುಮಾರ್‌, ಜಿ.ಎಸ್‌. ಪ್ರಸನ್ನ ಕುಮಾರ್‌, ಆರ್‌. ನಾರಾಯಣ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ತಿಪಟೂರು: ಇಲ್ಲಿ  ಕಾಂಗ್ರೆಸ್‌ ಶಾಸಕ ಕೆ. ಷಡಕ್ಷರಿ ಅವರಿಗೇ ಟಿಕೆಟ್‌ ನೀಡುವ ಸಾಧ್ಯತೆಗಳಿವೆ. ಜೆಡಿಎಸ್‌ನಿಂದ ಲೋಕೇಶ್ವರ್‌ಗೆ ಟಿಕೆಟ್‌ ದೊರಕಿದೆ. ಜೆಡಿಎಸ್‌ನ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿ. ನಂಜಾಮರಿ ಪಕ್ಷೇತರವಾಗಿ ನಿಲ್ಲುವ ಸಾಧ್ಯತೆ ಇದೆ. ಬಿಜೆಪಿಯಿಂದ ಮಾಜಿ ಶಾಸಕ ಬಿ.ಸಿ. ನಾಗೇಶ್‌ ಅವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆ ಇದೆ.

ಕುಣಿಗಲ್‌: ಶಾಸಕ ಜೆಡಿಎಸ್‌ನ  ಡಿ. ನಾಗರಾಜಯ್ಯ ಈ ಬಾರಿಯೂ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಡಿ. ಕೃಷ್ಣಕುಮಾರ್‌ ಸ್ಪರ್ಧೆ ಖಚಿತ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಬಿ.ವಿ ರಾಮಸ್ವಾಮಿ ಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಡಾ.  ಎಚ್‌.ಡಿ.ರಂಗನಾಥ್‌ಗೆ ಟಿಕೆಟ್‌ ಕೊಟ್ಟರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ರಾಮಸ್ವಾಮಿ ಗೌಡ ನಿರ್ಧರಿಸಿದ್ದಾರೆ.

ತುರುವೇಕೆರೆ: ಸತತ 2 ಬಾರಿ ಶಾಸಕರಾಗಿರುವ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ  ಹ್ಯಾಟ್ರಿಕ್‌ ಕನಸಿನಲ್ಲಿದ್ದಾರೆ. ಅವರಿಗೆ ಟಿಕೆಟ್‌ ಪ್ರಕಟವಾಗಿದೆ. ಕಾಂಗ್ರೆಸ್‌ನಿಂದ ಮಂಜುನಾಥ ಅದ್ದೆ, ವಸಂತ್‌ ಕುಮಾರ್‌, ಗೀತಾರಾಜಣ್ಣ, ಕೆ. ಮಂಜು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮಸಾಲೆ ಜಯರಾಮ್‌ ಸ್ಪರ್ಧಿಸಲಿದ್ದಾರೆ.

ತುಮಕೂರು ನಗರ: ಕಾಂಗ್ರೆಸ್‌ ಪಕ್ಷದ ಡಾ . ಎಸ್‌. ರಫೀಕ್‌ ಅಹಮದ್‌ ಹಾಲಿ ಶಾಸಕ. ಕಾಂಗ್ರೆಸ್‌ನಲ್ಲಿ  ಅವರಿಗೆ  ಅತೀಕ್‌ ಅಹಮದ್‌ ಟಿಕೆಟ್‌ಗಾಗಿ ಸ್ಪರ್ಧೆಯೊಡ್ಡಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಮಾಜಿ ಸಚಿವ ಸೊಗಡು ತಮಗೆ ಬಿಜೆಪಿ ಟಿಕೆಟ್‌ ನೀಡದಿದ್ದರೆ ಬಂಡಾಯ ಏಳುವ ಸುಳಿವು ನೀಡಿದ್ದಾರೆ. ಯಡಿಯೂರಪ್ಪ  ಅವರ ಒಲವು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ. ಜ್ಯೋತಿ ಗಣೇಶ್‌ರತ್ತ ಇದೆ. ಜೆಡಿಎಸ್‌ನಲ್ಲಿ ಗೋವಿಂದರಾಜ್‌ಗೆ  ಟಿಕೆಟ್‌ ಘೋಷಣೆಯಾಗಿದೆ. ನಗರ ಜೆಡಿಎಸ್‌ ಅಧ್ಯಕ್ಷ ನರಸೇಗೌಡ ಮುನಿಸಿಕೊಂಡಿದ್ದಾರೆ.

ತುಮಕೂರು ಗ್ರಾಮಾಂತರ: ಶಾಸಕ ಬಿಜೆಪಿಯ ಬಿ. ಸುರೇಶ್‌ ಗೌಡ ಹ್ಯಾಟ್ರಿಕ್‌ ಸಾಧಿಸುವ ತವಕದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಕೆ.ಎನ್‌. ರಾಜಣ್ಣ ಪುತ್ರ ಆರ್‌. ರಾಜೇಂದ್ರ ರಾಜಣ್ಣ, ರಾಯಸಂದ್ರ ರವಿಕುಮಾರ್‌, ಕಲ್ಲಹಳ್ಳಿ ದೇವರಾಜು, ಆಕಾಂಕ್ಷಿಗಳು. ಜೆಡಿಎಸ್‌ನಿಂದ ಚನ್ನಿಗಪ್ಪ ಪುತ್ರ ಗೌರಿಶಂಕರ್‌ ಸ್ಪರ್ಧಿಸಲಿದ್ದು ಪ್ರಚಾರ ನಡೆಸುತ್ತಿದ್ದಾರೆ. 

ಸ್ವಕ್ಷೇತ್ರದಲ್ಲೇ ಸುತ್ತಾಟ: ಕಳೆದ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ರಾಗಿ ರಾಜ್ಯ ಗೆದ್ದರೂ ಸ್ವಕ್ಷೇತ್ರ ಕೊರಟಗೆರೆ ಯಲ್ಲಿ ಸೋಲು ಕಂಡು ಮುಖ್ಯಮಂತ್ರಿ ಸಾœನ ಕಳೆದುಕೊಂಡಿದ್ದರು ಪರಮೇಶ್ವರ್‌. ಈ ಬಾರಿಯೂ ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರು. ಆದರೆ ರಾಜ್ಯ ಸುತ್ತುವುದನ್ನು ಕಡಿಮೆ ಮಾಡಿ ಸ್ವಕ್ಷೇತ್ರದಲ್ಲೇ ಸುತ್ತಾಟ ನಡೆಸುತ್ತಿದ್ದಾರೆ.

ಈಗ ಮತ್ತೆ ಕಾಂಗ್ರೆಸ್‌  ಸರ್ಕಾರ ಬಂದರೆ ಸಿಎಂ ಆಗುತ್ತಾರೆ ಎಂದೇ ಅವರ ಅಭಿಮಾನಿಗಳು ಕೊರಟಗೆರೆ  ಕ್ಷೇತ್ರದಲ್ಲಿ ಬಿಂಬಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಕಾನೂನು ಸಂಸದೀಯ ವ್ಯವಹಾರಗಳ ಸಚಿವ  ಟಿ.ಬಿ. ಜಯಚಂದ್ರ ಕೂಡಾ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ, ಇದರ ಜೊತೆಗೆ  ಶಾಸಕ ಹಾಗೂ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಈ ಬಾರಿ ಮತ್ತೆ ಗೆದ್ದು ಸಚಿವರಾಗಲೇ ಬೇಕು ಎಂದು ಕನಸು ಕಂಡಿದ್ದಾರೆ.

ರಾಜ್ಯದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯವಹಿಸಿ, ಲೂಟಿ ಹೊಡೆಯುತ್ತಿರುವ ಈ ಸರ್ಕಾರದಿಂದ ಜನತೆ ಬೇಸತ್ತಿದ್ದಾರೆ. ಮರಳು ಮಾಫಿಯಾಗೆ ಸರ್ಕಾರವೇ ಮಾರಿಕೊಂಡಿದೆ. ಚುನಾವಣಾ ಹಿಂದೂ ರಾಹುಲ್‌ ಅವರ ತಾಳಕ್ಕೆ ಸಿಎಂ ಕುಣಿಯುತ್ತಿದ್ದಾರೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ 

ರಾಜ್ಯದಲ್ಲಿ ಬಿಜೆಪಿ ಭ್ರಷ್ಟರ ಕೂಟವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ. ಹಿಂದುತ್ವ ಉಳಿಸಿ, ಬೆಳೆಸಲು ಶಿವಸೇನೆಯನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ರಾಜ್ಯದ 50ಕ್ಕೂ ಹೆಚ್ಚು  ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. 
-ಪ್ರಮೋದ ಮುತಾಲಿಕ್‌, ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ

* ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next