ವಿಜಯರಾಘವೇಂದ್ರ ಮೊನ್ನೆಯಷ್ಟೇ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ಅಂದರೆ, “ಕಿಸ್ಮತ್’ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಂಡು ಕೊಂಚ ಮಟ್ಟಿಗೆ ಸೈ ಎನಿಸಿಕೊಂಡಿದ್ದರು. ಈಗ ಮತ್ತೂಂದು “ಅದೃಷ್ಟ’ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಹೌದು, “ಕಿಸ್ಮತ್’ ನಂತರ ಅವರು ಅಭಿನಯಿಸಿರುವ “ಪರದೇಸಿ ಕೇರಾಫ್ ಲಂಡನ್’ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ರಾಜಶೇಖರ್ ನಿರ್ದೇಶನದ ಈ ಚಿತ್ರ ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಅಂತ್ಯದಲ್ಲಿ ತೆರೆಗೆ ಬರಲಿದೆ.
ಚಿತ್ರದ ಶೀರ್ಷಿಕೆ ಕೇಳಿದರೆ, ಇದೊಂದು ಫ್ಯಾಮಿಲಿ ಡ್ರಾಮಾ ಎನಿಸುವುದುಂಟು. ಅದರೊಂದಿಗೆ ಪಕ್ಕಾ ಮಾಸ್ ಮತ್ತು ಕ್ಲಾಸ್ ಅಂಶಗಳೂ ಚಿತ್ರದಲ್ಲಿವೆ. ಜೊತೆಗೆ ಆರಂಭದಿಂದ ಅಂತ್ಯದವರೆಗೂ ಹಾಸ್ಯದೊಂದಿಗೆ ಚಿತ್ರದ ಕಥೆ ಸಾಗಲಿದೆ. ಕೊನೆಗೊಂದು ತಿರುವು ಬರಲಿದ್ದು, ಅದೇ ಚಿತ್ರದ ಜೀವಾಳ ಎಂಬುದು ಚಿತ್ರತಂಡದ ಮಾತು. ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಗೆ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ಚಿತ್ರತಂಡ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.
ಶೀರ್ಷಿಕೆ ಕೇಳಿದವರಿಗೆ, ಇದು ಜರ್ನಿಯ ಕಥೆ ಇರಬಹುದು ಅಂತೆನಿಸಿದರೂ ಇಲ್ಲೊಂದು ಪಕ್ಕಾ ಸೆಂಟಿಮೆಂಟ್ ಇದೆ. ನಾಯಕ ಇಲ್ಲಿ ಪರದೇಸಿಯಾಗಿರುತ್ತಾನಾ? ಅವನು ಲಂಡನ್‌ನಿಂದ ಬಂದು ಪ್ರೀತಿಗೆ ಬೀಳ್ತಾನಾ, ಆ ಪ್ರೀತಿ ಮೂಲಕ ಏನೆಲ್ಲಾ ಮಾಡುತ್ತಾನೆ, ಎಷ್ಟೆಲ್ಲಾ ಪರದಾಟಕ್ಕೆ ಸಿಲುಕುತ್ತಾನೆ ಎಂಬುದು ಸಸ್ಪೆನ್ಸ್. ಈ ಚಿತ್ರವನ್ನು ಬದರಿನಾರಾಯಣ ನಿರ್ಮಿಸಿದ್ದಾರೆ.
ಇದು ಅವರ ಮೊದಲ ಚಿತ್ರ. ಕಥೆ ಮೇಲಿನ ನಂಬಿಕೆಯಿಂದ ನಿರ್ಮಾಪಕರು ಹಣ ಹಾಕಿದ್ದಾರಂತೆ. ಚಿತ್ರ ಮೂಡಿಬಂದಿರುವ ರೀತಿ ಕಂಡು ಖುಷಿಗೊಂಡಿರುವ ನಿರ್ಮಾಪಕರು ಚಿತ್ರವನ್ನು ಬಿಡುಗಡೆ ಮಾಡಲು ಉತ್ಸಾಹದಲ್ಲಿದ್ದಾರೆ. ಈ ಚಿತ್ರದಲ್ಲಿ ರಾಶಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ತಬಲಾನಾಣಿ, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತವಿದೆ. ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ ಭಟ್, ಶಿವು ಬೆರಗಿ ಗೀತೆ ಬರೆದಿದ್ದಾರೆ. ಶಶಾಂಕ್ ಶೇಷಗಿರಿ, ವಿಜಯಪ್ರಕಾಶ್, ರವೀಂದ್ರ ಸೊರಗಾವಿ, ಶಮಿತಾ ಮಲಾ°ಡ್, ಅನುರಾಧ ಭಟ್, ಹೇಮಂತ್, ಹೊಸ ಪ್ರತಿಭೆ ಗಂಗಮ್ಮ ಹಾಡಿದ್ದಾರೆ. ಚಿದಾನಂದ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಸಿರಗುಪ್ಪ ಸೇರಿದಂತೆ ಇತರೆ ಕಡೆ ಚಿತ್ರೀಕರಿಸಲಾಗಿದೆ.