ಶಿವಮೊಗ್ಗ: ಆಷಾಢ ಮಾಸದ ನಂತರ ಹಬ್ಬಗಳ ಸಾಲು ಶುರುವಾಗಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ರೌಡಿಗಳ ಪರೇಡ್‌ನಡೆಸಿದರು.ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಮೈದಾನದಲ್ಲಿ ಭಾನುವಾರ ಶಿವಮೊಗ್ಗ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ದೊಡ್ಡಪೇಟೆ, ಕೋಟೆ, ವಿನೋಬನಗರ, ಜಯನಗರ, ತುಂಗಾ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ 800 ರೌಡಿಗಳಲ್ಲಿ 175 ಜನರನ್ನು ಕರೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ಅವರು ಖಡಕ್ ಎಚ್ಚರಿಕೆ ನೀಡಿದರು.
ಪರೇಡ್‌ನಲ್ಲಿ ಪಾಲ್ಗೊಂಡಿದ್ದ 175 ರೌಡಿಗಳ ಬಗ್ಗೆ ಮಾಹಿತಿ ಪಡೆದ ಎಸ್‌ಪಿ, ಪ್ರತಿಯೊಬ್ಬ ರೌಡಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಪರೇಡ್‌ನಲ್ಲಿ ಪಾಲ್ಗೊಂಡ ಕೆಲವರು ಈಗಾಗಲೇ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಅಂತಹವರ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ. ಡಿಸೆಂಬರ್‌ವರೆಗೆ ಅವರ ಮೇಲೆ ತೀವ್ರ ನಿಗಾ ಇಡಲಾಗುವುದು. ಇವರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡದಿದ್ದರೆ ರೌಡಿಶೀಟ್‌ನಿಂದ ಹೊರಗಿಡಲಾಗುವುದು ಎಂದರು.
ರೌಡಿ ಪರೇಡ್‌ನಲ್ಲಿರುವ ಕೆಲವರಲ್ಲಿ ಗಾಂಜಾ ಸೇವನೆ ಮಾಡುವ ಬಗ್ಗೆ ಶಂಕೆ ಇದೆ. ಅಂತಹವರ ಮೇಲೆಯೂ ಕಣ್ಣಿಡಲಾಗಿದೆ. ಹಳಬರಿಗಿಂತ ಹೊಸಬರು ಸಣ್ಣ ಪ್ರಮಾಣದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಅಂತವರ ಮಾಹಿತಿ ಸಿಕ್ಕಿದೆ.
ಈಗಾಗಲೇ ಗಾಂಜಾ ನಿಗ್ರಹಿಸುವುದಕ್ಕಾಗಿ ಜಿಲ್ಲೆಯಲ್ಲಿ ನಾನಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ನಿರಂತರ ನಿಗಾ ಇಡಲಾಗುವುದು. ಅವರು ಯಾರೊಂದಿಗೆ ಸೇರುತ್ತಾರೆ. ಯಾವ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಲಾಗುವುದು. ಮನೆಗಳಿಗೆ ತೆರಳಿ ಪರಿಶೀಲನೆ ಕೂಡ ಮಾಡಲಾಗುವುದು. ಈ ವೇಳೆ ಯಾವುದೇ ಸುಳಿವು ಸಿಕ್ಕರೆ ಅಂತಹವರು ಪಟ್ಟಿಯಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಕಾನೂನು ಬಾಹಿರ ಚಟುವಟಿಕೆಗಳಿಂದ ಆಚೆ ಬಾರದ ವ್ಯಕ್ತಿಗಳನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ 9 ಮಂದಿಯ ಲಿಸ್ಟ್ ರೆಡಿಯಾಗಿದೆ ಎಂದರು. ಕಾನೂನು ಮೀರಿ ವರ್ತಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಪರೇಡ್ ವೇಳೆ ಆಯಾ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಸಾಲು- ಸಾಲು ಹಬ್ಬಗಳು ಬರಲಿದ್ದು, ರೌಡಿಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಬ್ರಕೀದ್ ಹಿನ್ನೆಲೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುವ ಸಾಧ್ಯತೆ ಇರುವುದರಿಂದ ಅಂತಹವರಿಗೆ ಎಚ್ಚರಿಕೆ ನೀಡಲಾಗಿದೆ. ಕೆಲವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಕಡೇಕಲ್ ಹಬೀಬ್ ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ಹಾಕಲು ಶಿಫಾರಸು ಮಾಡಲಾಗಿದೆ. ಜಿಲ್ಲಾದ್ಯಂತ 1400 ರೌಡಿಗಳಿದ್ದು, ಶಿವಮೊಗ್ಗ ಉಪ ವಿಭಾಗದಲ್ಲಿಯೇ 800 ಜನರಿದ್ದಾರೆ.
ಬಿ.ಎಂ.ಲಕ್ಷ್ಮಿಪ್ರಸಾದ್, ಎಸ್‌ಪಿ