ಬೀಜಿಂಗ್: ಚೀನದಲ್ಲಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೊನಾ ವೈರಸ್‌ನ ಬಿಸಿ ಭಾರತದ ಔಷಧ ಮಾರುಕಟ್ಟೆಗೂ ತಟ್ಟಿದೆ. ಬಹುತೇಕ ಮಂದಿ ಜ್ವರ ಹಾಗೂ ನೋವು ನಿವಾರಕವಾಗಿ ಬಳಸುವ ಪ್ಯಾರಾಸಿಟಮಾಲ್ ಮಾತ್ರೆಯ ದರ ಭಾರತದಲ್ಲಿ ಶೇ. 40ರಷ್ಟು ಏರಿಕೆಯಾಗಿದೆ.
ಬ್ಯಾಕ್ಟೀರಿಯಾದಿಂದ ಬರುವ ಸೋಂಕುಗಳಿಗೆ ಆ್ಯಂಟಿಬಯಾಟಿಕ್ ಆಗಿ ಬಳಸಲಾಗುವ ಅಝಿತ್ರೋಮೈಸಿನ್ ಮಾತ್ರೆಯ ದರ ಶೇ.70ರಷ್ಟು ಹೆಚ್ಚಳವಾಗಿದೆ ಎಂದು ಝೈಡಸ್ ಕ್ಯಾಡಿಲಾ ಮುಖ್ಯಸ್ಥ ಪಂಕಜ್ ಆರ್. ಪಟೇಲ್ ತಿಳಿಸಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಔಷಧಿಗಳ ಪೂರೈಕೆ ಹೆಚ್ಚಿಸದೇ ಇದ್ದರೆ, ಔಷಧಗಳ ತೀವ್ರ ಕೊರತೆ ಎದುರಾಗಲಿದೆ ಎಂದೂ ಅವರು ಹೇಳಿದ್ದಾರೆ. ಕೊರೊನಾದಿಂದಾಗಿ ಚೀನದ ಹಲವು ಕಂಪೆನಿಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿರುವುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಚೀನದ ವುಹಾನ್‌ನ ಬಳಿಕ ಅತಿದೊಡ್ಡ ಕೊರೊನಾ ಸೋಂಕಿತರ ತಾಣವಾಗಿರುವ ಜಪಾನ್‌ನ ಕ್ರೂಸ್ ನೌಕೆಯಲ್ಲಿ ಸೋಮವಾರ ಮತ್ತೆ 99 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 454ಕ್ಕೇರಿಕೆಯಾಗಿದೆ. ಈ ನಡುವೆ, ಜಪಾನ್ ಸರಕಾರವು ಹಡಗಿನಲ್ಲಿರುವವರಿಗೆ 2 ಸಾವಿರ ಐಫೋನ್‌ಗಳನ್ನು ಉಚಿತವಾಗಿ ವಿತರಿಸಿದೆ. ವೈದ್ಯ ರೊಂದಿಗೆ ಸಂಪರ್ಕ ಸಾಧಿಸಲು, ಅಪಾಯಿಂಟ್‌ಮೆಂಟ್ ಬುಕ್ ಮಾಡಲು, ಔಷಧಗಳಿಗೆ ಆರ್ಡರ್ ಮಾಡಲು ಈ ಐಫೋನ್‌ಗಳನ್ನು ನೀಡಲಾಗಿದೆ. ಕೊರೊನಾ ಸೋಂಕು ತಗುಲಿರುವ ನಾಲ್ವರು ಭಾರತೀಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇತ್ತೀಚೆಗಷ್ಟೇ ಚೀನದಿಂದ ಭಾರತೀಯರನ್ನು ವಾಪಸ್ ಕರೆತಂದ ಏರ್‌ಇಂಡಿಯಾದ ಎಲ್ಲ ಸಿಬಂದಿಗೂ ಪ್ರಧಾನಿ ಮೋದಿ ಅವರ ಸಹಿ ಇರುವ ಶ್ಲಾಘನೆ ಪತ್ರಗಳನ್ನು ವಿತರಿಸಲಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ದೇಶವೇ ನಿಮ್ಮ ಜತೆಗಿರುತ್ತದೆ ಎಂಬ ಸಂದೇಶವನ್ನು ಜಗತ್ತಿನಾದ್ಯಂತ ಇರುವ ಆನಿವಾಸಿ ಭಾರತೀಯರಿಗೆ ನೀವು ಸಾರಿ ಹೇಳಿದ್ದೀರಿ ಎಂದು ಅದರಲ್ಲಿ ಬರೆಯಲಾಗಿದೆ.
1,770 ಮಂದಿ ಸಾವು: ಚೀನದಲ್ಲಿ ಕೊರೊನಾಗೆ ಈವರೆಗೆ 1,770 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ.ಕಾದಂಬರಿಯಲ್ಲಿ ‘ಕೊರೊನಾ’! 40 ವರ್ಷಗಳ ಹಿಂದೆ ಅಂದರೆ 1981ರಲ್ಲಿ ಡೀನ್ ಕೂನ್l ಎಂಬವರು ಬರೆದ “ದಿ ಅಯ್ಸ ಆಫ್ ಡಾರ್ಕ್‌ನೆಸ್’ ಎಂಬ ಥ್ರಿಲ್ಲರ್ ಕಾದಂಬರಿಯಲ್ಲಿ ಕೊರೊನಾ ವೈರಸ್ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂಬ ಅಚ್ಚರಿಯ ಅಂಶ ಈಗ ಬೆಳಕಿಗೆ ಬಂದಿದೆ. ಕಾದಂಬರಿಯ ಒಂದು ಪುಟದಲ್ಲಿ “ವುಹಾನ್ -400′ ಎಂಬ ವೈರಸ್ ಬಗ್ಗೆ ಪ್ರಸ್ತಾಪವಿದೆ. ಅಲ್ಲದೆ, ಇದನ್ನು ಪ್ರಯೋಗಾಲಯದಲ್ಲಿ ಒಂದು ಜೈವಿಕ ಅಸ್ತ್ರವಾಗಿ ಸೃಷ್ಟಿಸಲಾಗಿದೆ ಎಂದೂ ಬರೆಯಲಾಗಿದೆ.