Advertisement

Para Olympics ಶಾಟ್‌ಪುಟ್‌: ರವಿಗೆ ಕೈತಪ್ಪಿದ ಪದಕ

12:56 AM Sep 02, 2024 | Team Udayavani |

ಪ್ಯಾರಿಸ್‌: ಪುರುಷರ ಎಫ್40 ಶಾಟ್‌ಪುಟ್‌ ಫೈನಲ್‌ನಲ್ಲಿ ಭಾರತದ ರವಿ ರೊಂಗಾಲಿ 5ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತರಾದರು.

Advertisement

ಕಳೆದ ವರ್ಷದ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ರವಿ, 10.63 ಮೀಟರ್‌ಗಳ ವೈಯಕ್ತಿಕ ಶ್ರೇಷ್ಠ ದೂರ ದಾಖಲಿಸಿದರೂ ಪದಕದಿಂದ ದೂರವೇ ಉಳಿದರು. ಪೋರ್ಚುಗಲ್‌ನ ವಿಶ್ವದಾಖಲೆಯ ವೀರ ಮಿಗ್ಯುಯೆಲ್‌ ಮೊಂತೆರೊ 11.21 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು. ಬೆಳ್ಳಿ ಮಂಗೋಲಿಯಾದ ಬಟ್ಟುಲ್ಗ ಸೆಮಿಡ್‌ ಪಾಲಾಯಿತು (11.09 ಮೀ.). ಹಾಲಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಚಾಂಪಿಯನ್‌ ಆಗಿರುವ ಇರಾಕ್‌ನ ಗರಾಹ್‌ ನೈಶ ಕಂಚು ಗೆದ್ದರು (11.03 ಮೀ.).

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಚಾಂಪಿಯನ್‌, ಡೆನಿಸ್‌ ಗೆಝಿಲೋವ್‌ 4ನೇ ಸ್ಥಾನಕ್ಕೆ ಇಳಿದರು (10.80 ಮೀ.). ರಷ್ಯಾದವರಾದ ಗೆಝಿಲೋವ್‌ ಇಲ್ಲಿ ತಟಸ್ಥ ಪ್ಯಾರಾಲಿಂಪಿಯನ್‌ ಆಗಿ ಸ್ಪರ್ಧೆಗೆ ಇಳಿದಿದ್ದರು.

ಎಫ್40 ವಿಭಾಗ ಸಣ್ಣ ಗಾತ್ರದ ಪ್ಯಾರಾ ಆ್ಯತ್ಲೀಟ್‌ಗಳಿಗಾಗಿ ಇರುವ ಸ್ಪರ್ಧೆ.

ಹಿಂದುಳಿದ ರಕ್ಷಿತಾ ರಾಜು

Advertisement

1,500 ಮೀಟರ್‌ ಟಿ11 ಆ್ಯತ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಕರ್ನಾಟಕದ ರಕ್ಷಿತಾ ರಾಜು ಹೀಟ್ಸ್‌ನಲ್ಲಿ ಹಿಂದುಳಿದು ಹೊರಬಿದ್ದರು. 23 ವರ್ಷದ ರಕ್ಷಿತಾ ರಾಜು 4 ಓಟಗಾರ್ತಿಯರ ಹೀಟ್‌-3 ಸುತ್ತಿನಲ್ಲಿ 5 ನಿಮಿಷ, 29.92 ಸೆಕೆಂಡ್‌ಗಳ ಸಮಯ ದಾಖಲಿಸಿ ಕೊನೆಯ ಸ್ಥಾನಿಯಾದರು.
ಚೀನದ ಶಾನ್‌ಶಾನ್‌ ಹಿ ಅಗ್ರಸ್ಥಾನಿಯಾದರೆ (4:44.66), ದಕ್ಷಿಣ ಆಫ್ರಿಕಾದ ಲೂಜಾನ್‌ ಕೋಟಿj ದ್ವಿತೀಯ ಸ್ಥಾನಿಯಾದರು (4:45.25). 3 ಹೀಟ್‌ಗಳಲ್ಲಿ ಇಬ್ಬರು ಫೈನಲ್‌ ಅರ್ಹತೆ ಪಡೆಯುತ್ತಾರೆ.

ಟಿ11 ವಿಭಾಗ ದೃಷ್ಟಿಮಾಂದ್ಯರಿಗಾಗಿ ಇರುವ ಸ್ಪರ್ಧೆ. ಬೆಳಕನ್ನು ಗ್ರಹಿಸಲು ಸಾಧ್ಯವಾದರೂ ಯಾವುದೇ ದೂರದಲ್ಲಿ ಕೈಯ ಆಕಾರವನ್ನು ನೋಡುವ ಸಾಮರ್ಥ್ಯ ಹೊಂದಿಲ್ಲದವರು ಇಲ್ಲಿ ಗೈಡ್‌ ನೆರವಿನಿಂದ ಓಡುತ್ತಾರೆ.

ಶೂಟರ್‌ಗಳ ಫೈನಲ್‌ ಹಾದಿ ಬಂದ್‌
ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಈವರೆಗೆ ಶೂಟಿಂಗ್‌ನಲ್ಲೇ ಗರಿಷ್ಠ ಸಂಖ್ಯೆಯ ಪದಕಗಳನ್ನು ಗೆದ್ದ ಭಾರತಕ್ಕೆ ರವಿವಾರ ನಿರಾಸೆಯ ದಿನವಾಗಿತ್ತು. ಭರವಸೆಯ ಶೂಟರ್‌ಗಳಾದ ಅವನಿ ಲೇಖರಾ, ಸಿದ್ಧಾರ್ಥ ಬಾಬು ಮತ್ತು ಶ್ರೀಹರ್ಷ ದೇವರೆಡ್ಡಿ ರಾಮಕೃಷ್ಣ ತಮ್ಮ ತಮ್ಮ ವಿಭಾಗಗಳ ಸ್ಪರ್ಧೆಗಳಲ್ಲಿ ಫೈನಲ್‌ ತಲುಪಲು ವಿಫ‌ಲರಾದರು.

ಭಾರತದ ಚಿನ್ನದ ಖಾತೆಯನ್ನು ತೆರೆದ ಅವನಿ ಲೇಖರಾ ಮತ್ತು ಸಿದ್ಧಾರ್ಥ ಬಾಬು ಎಸ್‌ಎಚ್‌1 10 ಮೀ. ಏರ್‌ ರೈಫ‌ಲ್‌ ಪ್ರೋನ್‌ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 11ನೇ ಹಾಗೂ 28ನೇ ಸ್ಥಾನಿಯಾದರು. ಆರ್‌5 ಮಿಕ್ಸೆಡ್‌ ಮಿಶ್ರ 10 ಮೀ. ಏರ್‌ ರೈಫ‌ಲ್‌ ಪ್ರೋನ್‌ ಎಸ್‌ಎಚ್‌2 ಅರ್ಹತಾ ಸುತ್ತಿನಲ್ಲಿ ಧಾರವಾಡದವರಾದ ಶ್ರೀಹರ್ಷ ದೇವರೆಡ್ಡಿ ರಾಮಕೃಷ್ಣ 630.2 ಅಂಕಗಳೊಂದಿಗೆ 26ನೇ ಸ್ಥಾನಕ್ಕೆ ಕುಸಿದರು.

ಎಸ್‌ಎಚ್‌1 10 ಮೀ. ಏರ್‌ ರೈಫ‌ಲ್‌ ಸ್ಟಾಂಡಿಂಗ್‌ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿ ಬಂಗಾರವನ್ನು ಉಳಿಸಿಕೊಂಡು ಇತಿಹಾಸ ನಿರ್ಮಿಸಿದ್ದ ಅವನಿ ಲೇಖರಾ, ಮಿಶ್ರ ವಿಭಾಗದಲ್ಲಿ ಇದೇ ಸಾಧನೆಯನ್ನು ಪುನರಾವರ್ತಿಸಲು ವಿಫ‌ಲರಾದರು. 6 ಸರಣಿಗಳಲ್ಲಿ ಅವರು 632.8 ಅಂಕ ಗಳಿಸಿದರು. ಸಿದ್ಧಾರ್ಥ ಬಾಬು ಗಳಿಕೆ 628.3 ಅಂಕ. ಅಗ್ರ 8 ಶೂಟರ್‌ಗಳಷ್ಟೇ ಫೈನಲ್‌ ಅರ್ಹತೆ ಪಡೆಯುತ್ತಾರೆ. ಎಸ್‌ಎಚ್‌1 ವಿಭಾಗದಲ್ಲಿ ಶೂಟರ್ ನಿಂತು ಅಥವಾ ವೀಲ್‌ಚೇರ್‌ನಲ್ಲಿ ಕುಳಿತು ಸ್ಪರ್ಧಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next