Advertisement

ವೆನ್ಲಾಕ್‌ನಲ್ಲಿ ಪ್ಯಾರಾ ಮೆಡಿಕಲ್‌ ಶಿಕ್ಷಣ

07:10 AM Aug 31, 2017 | |

ಮಂಗಳೂರು: ಚಿಕಿತ್ಸೆ ಹಾಗೂ ಸೌಲಭ್ಯಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಜಿಲ್ಲಾ ವೆನ್ಲಾಕ್‌ ಸರಕಾರಿ ಆಸ್ಪತ್ರೆಯಲ್ಲಿ ಇದೇ ಪ್ರಥಮವಾಗಿ ಅರೆ ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳು ಆರಂಭಗೊಳ್ಳುತ್ತಿವೆ.

Advertisement

ವೆನ್ಲಾಕ್‌  ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾರಾ ಮೆಡಿಕಲ್‌ ಹೆಸರಿನಲ್ಲಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಆರಂಭ ಗೊಳ್ಳುತ್ತಿರುವ ಅರೆ ವೈದ್ಯಕೀಯ ಶಿಕ್ಷಣದಲ್ಲಿ ಒಟ್ಟು 7 ಕೋರ್ಸು ಗಳಲ್ಲಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ಗಳು ಒಳಗೊಂಡಿದ್ದು ಸೆ. 1ರಿಂದ ಕಾರ್ಯಾರಂಭಗೊಳ್ಳುತ್ತಿದೆ. ಪ್ರತಿಯೊಂದು ಕೋರ್ಸ್‌ನಲ್ಲಿ ತಲಾ20 ವಿದ್ಯಾರ್ಥಿಗಳಂತೆ ಒಟ್ಟು 140 ಮಂದಿಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

ಕೋರ್ಸ್‌ಗಳು
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ 3 ವರ್ಷಗಳ ಸರ್ಟಿಫಿಕೇಟ್‌ ಕೋರ್ಸ್‌ಗಳು ಹಾಗೂ ಪಿಯುಸಿ ಉತ್ತೀರ್ಣರಾದವರಿಗೆ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ರೇಡಿಯಾಲಜಿ ಟೆಕ್ನಿಶಿಯನ್‌ ಮೆಡಿಕಲ್‌ಲ್ಯಾಬ್‌ ಟೆಕ್ನಿಶಿಯನ್‌, ಡಯಾಲಿಸೀಸ್‌ ಟ್ರೀಟ್‌ಮೆಂಟ್‌, ಮೆಡಿಕಲ್‌ರೆಕಾರ್ಡ್‌ ನಿರ್ವಹಣೆ, ಆರೋಗ್ಯ ನಿರೀಕ್ಷಕರು, ಆಪರೇಶನ್‌ ಥಿಯೇಟರ್‌ ಟೆಕ್ನೀಶಿಯನ್‌ ಸೇರಿದಂತೆ 7 ಕೋರ್ಸ್‌ಗಳನ್ನು ಒಳಗೊಂಡಿದೆ. ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕಾರ ಆರಂಭಗೊಂಡಿದ್ದು 84 ಅರ್ಜಿಗಳು ಬಂದಿವೆ.

ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಕ್ಲಿನಿಕಲ್‌ ಸೌಲಭ್ಯ ಕಲ್ಪಿಸಲಾಗುತ್ತದೆ.  ಥಿಯರಿ ಕ್ಲಾಸ್‌ಗಳನ್ನು ಆಸ್ಪತ್ರೆಯ ಪಿಜಿ ಲೆಕ್ಚರ್‌ ಹಾಲ್‌ ಹಾಗೂ ಆರ್‌ಎಪಿಸಿ ಹಾಲ್‌ನಲ್ಲಿ ನೀಡಲಾಗುವುದು.

ಫಿಸಿಕ್ಸ್‌, ಕೆಮಿಸ್ಟ್ರಿ ಸೇರಿದಂತೆ ಮೂಲ ವಿಜ್ಞಾನ ಕ್ಲಾಸ್‌ಗಳನ್ನು ನೀಡಲು ಖಾಸಗಿ ಶಿಕ್ಷಣ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ.

Advertisement

ಆಸ್ಪತ್ರೆಯಲ್ಲಿ ದಿನವೊಂದಕ್ಕೆ ಸುಮಾರು 100 ಅಲ್ಟ್ರಾಸೌಂಡ್‌, 20ರಿಂದ 30 ಸಿ.ಟಿ.ಸ್ಕ್ಯಾನ್‌ಗಳು, 250ಕ್ಕೂ ಅಧಿಕ ಎಕ್ಸ್‌ರೇಗಳು, 5ಕ್ಕೂ ಹೆಚ್ಚು ಬೇರಿಯಂಸ್ಕೋಪಿ, 10ಕ್ಕೂ ಅಧಿಕ ಯುರೋಸ್ಕೋಪಿಗಳನ್ನು ಮಾಡಲಾಗುತ್ತಿದೆ. ಆದುದರಿಂದ ವಿದ್ಯಾರ್ಥಿಗಳಿಗೆ ಕ್ಲಿನಿಕಲ್‌ ಸೌಲಭ್ಯಗಳು ಆಸ್ಪತ್ರೆಯಲ್ಲಿ ಉತ್ತಮವಾಗಿದೆ ಎಂದವರು ವಿವರಿಸುತ್ತಾರೆ.

ಕಡಿಮೆ ಶುಲ್ಕ
ವೆನ್ಲಾಕ್‌ ಪ್ಯಾರಾಮೆಡಿಕಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೋರ್ಸ್‌ಗಳು ಅತೀ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಪ್ರತಿಯೊಂದು ಕೋರ್ಸ್‌ಗೆ 4,000 ರೂ. ಶುಲ್ಕವನ್ನು ಸರಕಾರ ನಿಗದಿಪಡಿಸಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖಾ ಹಾಸ್ಟೇಲ್‌ಗ‌ಳಲ್ಲಿ ನೊಂದಾಯಿಸಲಾಗಿದೆ ಎಂದು ಡಾ| ರಾಜೇಶ್ವರಿ ದೇವಿ ವಿವರಿಸಿದರು.

167 ವರ್ಷಗಳ ಇತಿಹಾಸವಿರುವ ವೆನ್ಲಾಕ್‌ ಆಸ್ಪತ್ರೆಯಲ್ಲಿ ಈಗಾಗಲೇ ಸರಕಾರಿ ನರ್ಸಿಂಗ್‌ ಶಿಕ್ಷಣ ಸಂಸ್ಥೆ ಕಾರ್ಯಾಚರಿಸುತ್ತಿದ್ದು ಇದಕ್ಕೂ 100 ವರ್ಷಗಳ ಇತಿಹಾಸವಿದೆ.

ವೆನ್ಲಾಕ್‌ನಲ್ಲಿ ಸರಕಾರದ ವತಿಯಿಂದ ಪ್ಯಾರಾ ಮೆಡಿಕಲ್‌ ಕೋರ್ಸ್‌ಗಳು ಆರಂಭಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೋರ್ಸ್‌ ಸೆ.1 ರಿಂದ ಆರಂಭಿಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ವೆನ್ಲಾಕ್‌ನಲ್ಲಿ ಉತ್ತಮ ಕ್ಲಿನಿಕಲ್‌ ಸೌಲಭ್ಯ ಹಾಗೂ ವೈದ್ಯರಿದ್ದು ಉತ್ತಮ ಬೋಧನೆ ದೊರೆಯಲಿರುವುದು. ಇದನ್ನು ಒಂದು ಉತ್ತಮ ಪ್ಯಾರಾಮೆಡಿಕಲ್‌ ಶಿಕ್ಷಣ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಿವೆ.
– ಡಾ| ರಾಜೇಶ್ವರಿ ದೇವಿ, ಜಿಲ್ಲಾ ವೈದ್ಯಕೀಯ ಅಧಿಕಾರಿ, ವೆನ್ಲಾಕ್‌ ಆಸ್ಪತ್ರೆ 

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next