ಪೋರ್ಟ್ ಮೊರೆಸ್ಬಿ: ಈಸ್ಟ್ ಏಷ್ಯಾ – ಪ್ಯಾಸಿಫಿಕ್ ಕ್ವಾಲಿಫೈಯರ್ ಕೂಟದಲ್ಲಿ ಸತತ ಐದು ಪಂದ್ಯ ಗೆದ್ದು ಮೊದಲ ಸ್ಥಾನ ಪಡೆದ ಪಪುವಾ ನ್ಯೂಗಿನಿ ತಂಡವು 2024ರ ಟಿ20 ವಿಶ್ವಕಪ್ ಕೂಟಕ್ಕೆ ಅರ್ಹತೆ ಪಡೆದಿದೆ. ಪೋರ್ಟ್ ಮೊರೆಸ್ಬಿಯಲ್ಲಿ ನಡೆದ ಪಂದ್ಯದಲ್ಲಿ ಫಿಲಿಪೈನ್ಸ್ ವಿರುದ್ಧ 100 ರನ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ನ್ಯೂಗಿನಿ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 229 ರನ್ ಮಾಡಿದರೆ, ಫಿಲಿಪೈನ್ಸ್ ಕೇವಲ 129 ರನ್ ಮಾಡಲು ಶಕ್ತವಾಯಿತು. ಇದರಿಂದ ಪಪವಾ ನ್ಯೂಗಿನಿ 100 ರನ್ ಅಂತರದ ಭರ್ಜರಿ ಶತಕ ಬಾರಿಸಿತು.
ಪಪುವಾ ನ್ಯೂಗಿನಿ ಕೂಟದ ಇದುವರೆಗಿನ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದೆ. ಶನಿವಾರ ಜಪಾನ್ ವಿರುದ್ಧದ ಪಂದ್ಯದೊಂದಿಗೆ ತಮ್ಮ ಪಂದ್ಯಾವಳಿಯನ್ನು ಕೊನೆಗೊಳಿಸಲಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜಪಾನ್ ತಂಡವು ಇಂದು ದುರ್ಬಲ ವನೌತು ತಂಡದ ವಿರುದ್ಧ ಸೋತು ಮುಖ್ಯ ಕೂಟಕ್ಕೆ ಅರ್ಹತೆ ಪಡೆಯುವ ಅವಕಾಶದಿಂದ ವಂಚಿತವಾಯಿತು.
ಇದನ್ನೂ ಓದಿ:ನಕಲಿ ಬಿಲ್ಲಿಂಗ್ ಮೂಲಕ ಬರೋಬ್ಬರಿ 557 ಕೋಟಿ ರೂ. GST ವಂಚನೆ: ಮೂವರ ಬಂಧನ
2024ರ ಟಿ20 ವಿಶ್ವಕಪ್ ಕೂಟವು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಈ ಕೂಟದಲ್ಲಿ 20 ತಂಡಗಳು ಭಾಗಿಯಾಗಲಿದೆ. ಮೊದಲ ಸುತ್ತಿಗೆ ತಂಡಗಳನ್ನು ತಲಾ ಐದರಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ, ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ ತಲುಪುತ್ತವೆ.
ಹನ್ನೆರಡು ತಂಡಗಳು ನೇರವಾಗಿ ಮುಂದಿನ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದಿದ್ದವು. ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ, 2022 ರ ಟಿ 20 ವಿಶ್ವಕಪ್‌ನಲ್ಲಿ ಅಗ್ರ ಎಂಟು ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮತ್ತು ಟಿ20 ಶ್ರೇಯಾಂಕದ ಬಲದಿಂದ ಅರ್ಹತೆ ಪಡೆದ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಅರ್ಹತೆ ಪಡೆದಿವೆ.
ಇದೀಗ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಪಪುವಾ ನ್ಯೂಗಿನಿ ಅರ್ಹತೆ ಪಡೆದಿದೆ. ಇನ್ನು ಅಮೆರಿಕ ಕ್ವಾಲಿಫೈಯರ್ ಮೂಲಕ ಒಂದು ತಂಡ, ಏಷ್ಯಾ ಕ್ವಾಲಿಫೈಯರ್ ಮೂಲಕ ಎರಡು ತಂಡ ಮತ್ತು ಆಫ್ರಿಕಾ ಕ್ವಾಲಿಫೈಯರ್ ಮೂಲಕ ಎರಡು ತಂಡಗಳು ಮುಖ್ಯ ಕೂಟಕ್ಕೆ ಅರ್ಹತೆ ಪಡೆಯಲಿವೆ.