Advertisement

ರಾಜಕೀಯ ಶಕ್ತಿಯಿಂದ ಸಮಾಜ ಪರಿವರ್ತನೆ

07:42 PM Nov 03, 2020 | Suhan S |

ಹೊಸದುರ್ಗ: ಸಮಾಜ ಪರಿವರ್ತನೆಗೆ ರಾಜಕೀಯ ಶಕ್ತಿಯ ಕೊಡುಗೆ ಬಹಳ ಮುಖ್ಯ. ರಾಜಕೀಯ ಸಿದ್ಧಾಂತಗಳ ಬದಲಾವಣೆಯಲ್ಲಿ ಸಾಮಾಜಿಕ, ಧಾರ್ಮಿಕ ನೇತಾರರ ಆಶೋತ್ತರಗಳೂ ಸೇರಿರುತ್ತವೆ. ಅವು ಸಮಾನಾಂತರ ರೇಖೆಯಲ್ಲಿ ಸಾಗಿದಾಗ ಸಮಾಜದಲ್ಲಿ ಅದ್ಭುತ ಬದಲಾವಣೆ ಕಾಣಬಹುದು ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಸಾಣೇಹಳ್ಳಿಯ ತರಳಬಾಳು ಜಗದ್ಗುರು ಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಪ್ರಸ್ತುತ ಪಕ್ಷಾಧಾರಿತ ಆಡಳಿತದ ಕಾರಣದಿಂದ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ತೆಗೆದುಕೊಂಡ ನಿಲುವುಗಳು ಅದು ಜಾರಿಯಾಗುವ ಮೊದಲೇ ಮತ್ತೂಂದು ಪಕ್ಷದ ಸರ್ಕಾರ ಆಡಳಿತಕ್ಕೆ ಬಂದಿರುತ್ತದೆ. ಆಗ ಹಿಂದಿನ ಸರ್ಕಾರದ ನಿಲುವನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಹೀಗಾಗಿ ಪಕ್ಷ ರಾಜಕಾರಣದಿಂದಾಗಿ ಸಮಾಜದಲ್ಲಿ ಪ್ರಗತಿ ನಿಂತ ನೀರಿನಂತಾಗುತ್ತಿದೆ. ಸಮಾಜದಲ್ಲಿನ ಸಂಘಟನಾ ಶಕ್ತಿ ಕೊರತೆಯಿಂದ ರಾಜಕೀಯ ಶಕ್ತಿಯ ಕೈ ಮೇಲಾಗಿದೆ. ಇವತ್ತು ಸಾಮಾಜಿಕ ಹೊಣೆಗಾರಿಕೆ ಯಾರಿಗೆ ಇದೆ ಎನ್ನುವುದು ಪ್ರಶ್ನಾರ್ಹ. ಅದನ್ನು ಕಟ್ಟಿಕೊಂಡು ನನಗೇನಾಗಬೇಕಾಗಿದೆ, ನಾನು ಹೇಗೋ ಬದುಕಿದರಾಯ್ತು ಎನ್ನುವ ಪಲಾಯನವಾದ ಸಮಾಜದಲ್ಲಿ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಪಕ್ಷಾಧಾರಿತ ರಾಜಕಾರಣ ಸಮಾಜವನ್ನು ನಿಯಂತ್ರಿಸುತ್ತಿದೆ. ಎಲ್ಲ ಪಕ್ಷಗಳು ಧರ್ಮಾತೀತ,ಜಾತ್ಯತೀತ ಎಂದು ಹೇಳಿದರೂ ಮೂಲದಲ್ಲಿ ಅವು ಹಾಗಿಲ್ಲ. ಅವೆಲ್ಲ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಚಲಿತ ರಾಜಕಾರಣದಿಂದಾಗಿ ಸಮಾಜ ನಿಷ್ಕ್ರಿಯವಾಗಿದೆ ಎಂದರು.

“ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರ’ ವಿಷಯದ ಕುರಿತು ನವದೆಹಲಿಯ ಜವಾಹರಲಾಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ವೆಂಕಟಾಚಲ ಹೆಗಡೆ ಮಾತನಾಡಿದರು. ಪಂಡಿತಾರಾಧ್ಯ ಶ್ರೀಗಳ “ಸಂಸ್ಕಾರ’ ಕೃತಿಯನ್ನು ಬೆಂಗಳೂರಿನ ಮುಕ್ತಾ ಬಿ. ಕಾಗಲಿ ಲೋಕಾರ್ಪಣೆ ಮಾಡಿದರು.

ಅಸಹಾಯಕರಿಗೆ ಸಹಾಯವಾಗಲಿ ಎಂದು ಸರ್ಕಾರ ಸೌಲಭ್ಯಗಳನ್ನು ನೀಡಿದರೆ ಆ ಸೌಲಭ್ಯ ನಮಗೂ ಬೇಕು ಎಂದು ಕೈ ಒಡ್ಡುವ, ಪ್ರತಿಭಟಿಸುವ ಜನರೂ ಇದ್ದಾರೆ. ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲೇ ಅನೇಕ ದೋಷಗಳಿವೆ. ರಾಜಕೀಯ ಪ್ರವೇಶದಲ್ಲಿ ಜನಸೇವೆಗಿಂತ ಸ್ವಾರ್ಥ ಭಾವನೆಯೇ ಹೆಚ್ಚಾಗಿದೆ. -ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Advertisement
Advertisement

Udayavani is now on Telegram. Click here to join our channel and stay updated with the latest news.

Next