ಮುಜಫರಪುರ : ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಂದು ತಮ್ಮ ಮೇಲೆ ಭಾರತ್ ಬಂದ್ ಬೆಂಬಲಿಗರು ಮುಜಫರಪುರದಲ್ಲಿ ದಾಳಿ ನಡೆಸಿದರೆಂದು ಹೇಳಿಕೊಂಡಿದ್ದಾರೆ.
ಒಬ್ಬ ಸಂಸದನ ಗತಿ ಹೀಗಾದರೆ ಬಿಹಾರದಲ್ಲಿ ಸಾಮಾನ್ಯ ಜನರ ಸ್ಥಿತಿ ಹೇಗಿದ್ದೀತು ? ಎಂದು ಅವರು ಸಿಎಂ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಸಂಸದ ಪಪ್ಪು ಯಾದವ್ ಮೇಲಿನ ಹಲ್ಲೆಯ ಘಟನೆ ಮುಜಫರಪುರದ ಖಾಮ್ರಾ ಗ್ರಾಮದ ಸದರ್ ಪ್ರದೇಶದಲ್ಲಿ ನಡೆದಿದೆ.
“ನನ್ನನ್ನು ಪ್ರತಿಭಟನಕಾರರು ಅಮಾನುಷವಾಗಿ ಹೊಡೆದಿದ್ದಾರೆ; ನನ್ನ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪ್ರತಿಭಟನಕಾರರು ನನ್ನ ಮೇಲೆ ಮತ್ತು ಕಾರಿನಲ್ಲಿದ್ದ ಇತರರ ಮೇಲೆ ದಾಳಿ ಮಾಡುವ ಮುನ್ನ ನಮ್ಮ ಜಾತಿ ಯಾವುದೆಂದು ಕೇಳಿದರು. ನಾನೆಂದೂ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ; ನಿಮ್ಮ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿದ ಹೊರತಾಗಿಯೂ ಅವರು ನನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ಪಪ್ಪು ಯಾದವ್ ಮಾಧ್ಯಮದವರ ಮುಂದೆ ಅಲವತ್ತುಕೊಳ್ಳುತ್ತಾ ಕ್ಯಾಮೆರಾ ಮುಂದೆಯೇ ಅತ್ತು ಬಿಟ್ಟರು.
ಘಟನೆಯ ಹಿನ್ನೆಲೆಯಲ್ಲಿ ಪಪ್ಪು ಯಾದವ್ ಅವರು ಸಿಎಂ ನಿತೀಶ್ ಕುಮಾರ್ ಅವರ ಆಡಳಿತೆಯಲ್ಲಿ ಬಿಹಾರದಲ್ಲಿ ಕಾನೂನು ಮತ್ತು ಶಿಸ್ತೆಂಬುದು ಇದೆಯೇ ಎಂದು ಪ್ರಶ್ನಿಸಿದರು. ನಾನು ಸಿಎಂ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡಿದರೂ ಯಾರೂ ನನ್ನ ಕರೆಗೆ ಉತ್ತರಿಸಲಿಲ್ಲ ಎಂದು ಪಪ್ಪು ಹೇಳಿದರು.
ಎಸ್‌ಸಿ/ಎಸ್‌ಟಿ ಕಾಯಿದೆ ತಿದ್ದುಪಡಿಯನ್ನು ವಿರೋಧಿಸಿ ಬಿಹಾರದಲ್ಲಿ ಇಂದು ಗುರುವಾರ ಭಾರತ್ ಬಂದ್ ನಡೆಯುತ್ತಿದ್ದು ಪ್ರತಿಭಟನಕಾರರು ರೈಲುಗಳನ್ನು ತಡೆದಿದ್ದಾರೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಪ್ರತಿಭಟನಕಾರರು ಪ್ರತಿಕೃತಿಗಳನ್ನು ಸುಟ್ಟಿದ್ದಾರೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಗೆ ಈಚೆಗೆ ತಿದ್ದುಪಡಿ ತರಲಾಗಿರುವುದನ್ನು ಮೇಲ್ವರ್ಗದ ಸಮುದಾಯಗಳ ಸುಮಾರು 35 ಸಂಘಟನೆಗಳು ಜತೆಗೂಡಿ ಇಂದಿನ ಭಾರತ್ ಬಂದ್‌ಗೆ ಕರೆ ನೀಡಿವೆ.