ಹೊಸದಿಲ್ಲಿ : ‘ಪಪ್ಪು ಈಗ ಪರಮ ಪೂಜ್ಯ; ರಾಷ್ಟ್ರ ಮಟ್ಟದಲ್ಲಿ ಅವರ ನಾಯಕತ್ವ ಸ್ವೀಕಾರಾರ್ಹವಾಗುವುದನ್ನು ನೀವಿನ್ನು ನೋಡಲಿರುವಿರಿ’ ಎಂದು ಹೇಳುವ ಮೂಲಕ ಪಂಚರಾಜ್ಯ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಬಿಜೆಪಿಗೆ ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ ಮುಖ್ಯಸ್ಥ ರಾಜ್ ಠಾಕ್ರೆ ಟಾಂಗ್ ನೀಡಿದೆ.
”ರಾಜಸ್ಥಾನ, ಛತ್ತೀಸ್‌ಗಢವನ್ನು ಜಯಿಸಿ ಈಗಷ್ಟೆ ಮಧ್ಯ ಪ್ರದೇಶವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತ್‌ನಲ್ಲಿ, ಕರ್ನಾಟಕದಲ್ಲಿ ಒಂಟಿಯಾಗಿದ್ದರು. ತನ್ನ ಅವಿರತ ಫಲಪ್ರದ ಶ್ರಮದಿಂದ ಅವರೀಗ ಪರಮ ಪೂಜ್ಯರಾಗಿದ್ದಾರೆ” ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಿಜೆಪಿಗೆ ಚಾಟಿ ಬೀಸಿದ್ದಾರೆ.
”ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಕಂಡಿರುವ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ದರ್ಪದ ವರ್ತನೆಯೇ ಕಾರಣ; ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿ ಸೋತದ್ದಲ್ಲ” ಎಂದು ರಾಜ್ ಠಾಕ್ರೆ ಹೇಳಿದರು.
”ಈ ಬಾರಿಯ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತವೇ ಇತ್ತು; ಏಕೆಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಡೆದುಕೊಂಡ ರೀತಿಯೇ ದರ್ಪದ್ದಾಗಿತ್ತು. ದೇಶದ ಜನರಿಗೆ ಈ ನಾಯಕರು ಎಲ್ಲ ರಂಗಗಳಲ್ಲಿ ಸೋತಿರುವುದು ಸ್ಪಷ್ಟವಾಗಿ ತಿಳಿದಿತ್ತು…”
”…ಅದಕ್ಕೋಸ್ಕರ ಇವರು ರಾಮಮಂದಿರ ವನ್ನು ಮತ್ತೆ ಚುನಾವಣಾ ವಿಷಯವನ್ನಾಗಿ ಮಾಡುತ್ತಿದ್ದಾರೆ ಎಂಬುದು ತಿಳಿದಿತ್ತು. ಆದರೆ ಜನರು ತಾವೀಗ ಬುದ್ಧಿವಂತರಾಗಿದ್ದೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ; ಜನರಿಗೆ ಇಂದು ಬೇಕಿರುವುದು ರಾಮ ಮಂದಿರವಲ್ಲ; ರಾಮ ರಾಜ್ಯ ಎನ್ನುವುದನ್ನು ಕೂಡ ಮತದಾರರು ತೋರಿಸಿಕೊಟ್ಟಿದ್ದಾರೆ ಎಂದು ಠಾಕ್ರೆ ಹೇಳಿದರು.