Advertisement

ನಗರದ ಹೊಟೇಲ್‌ಗ‌ಳಲ್ಲಿ ಇನ್ನು ಕಾಗದದ ತಟ್ಟೆ, ಲೋಟ

11:22 PM Jul 08, 2020 | Sriram |

ಕುಂದಾಪುರ: ಕೋವಿಡ್‌ ಹಿನ್ನೆಲೆಯಲ್ಲಿ ನಗರದ ಹೊಟೇಲ್‌ಗ‌ಳಲ್ಲಿ ಸ್ಟೀಲ್‌ ಲೋಟ, ತಟ್ಟೆಗೆ ಗುಡ್‌ ಬೈ ಹೇಳಿ ಉಪಯೋಗಿಸಿ ಬಿಸಾಡುವ ಪರಿಕರಗಳಿಗೆ ಆದ್ಯತೆ ನೀಡಲಾಗುತ್ತಿದೆ.

Advertisement

ಬದಲಿ ಬಳಕೆ
ಕೋವಿಡ್‌ ಸೋಂಕು ಒಂದೊಂದು ವಸ್ತುವಿನಲ್ಲಿ ಒಂದೊಂದು ರೀತಿಯ ಅವಧಿಯಷ್ಟು ಕಾಲ ಬದುಕಿರುತ್ತದೆ. ಸ್ಟೀಲ್‌ ವಸ್ತುಗಳಲ್ಲಿ ಗರಿಷ್ಠ ಅವಧಿಯಲ್ಲಿ ಇರುತ್ತದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಹೊಟೇಲ್‌ಗ‌ಳು ಈ ಕ್ರಮ ಕೈಗೊಂಡಿವೆ. ಕೆಲವು ಹೊಟೇಲ್‌ಗ‌ಳಲ್ಲಿ ಸ್ಟೀಲ್‌ ತಟ್ಟೆಯ ಮೇಲೆ ಬಾಳೆ ಎಲೆ ಹಾಕಿ ಅದರಲ್ಲಿ ತಿಂಡಿಯನ್ನು ನೀಡಲಾಗುತ್ತದೆ. ಇನ್ನು ಅನೇಕ ಹೊಟೇಲ್‌ಗ‌ಳಲ್ಲಿ ಕಾಗದದ ತಟ್ಟೆ , ಲೋಟ ಬಳಸಲಾಗುತ್ತಿದೆ. ಸಪ್ಲಯರ್‌, ಕ್ಲೀನರ್‌, ಕ್ಯಾಶಿಯರ್‌ ಸೇರಿದಂತೆ ಗ್ರಾಹಕರ ಜತೆ ಸಂಪರ್ಕ ಹೊಂದುವ ಎಲ್ಲರೂ ಮಾಸ್ಕ್ ಧಾರಣೆ ಮಾಡುತ್ತಿದ್ದಾರೆ. ಒಂದು ಮೇಜಿಗೆ ಇಬ್ಬರೇ ಕೂರುವಂತೆ ಕುರ್ಚಿಗಳ ಸಂಖ್ಯೆ ಕಡಿತಗೊಳಿಸಲಾಗಿದೆ.

ಹೆಚ್ಚಿದ ಮುತುವರ್ಜಿ
ಹೊಟೇಲ್‌ಗ‌ಳ ಒಳಗೆ ಹೋಗುವವರೆಗಷ್ಟೇ ಮಾಸ್ಕ್ ಧರಿಸಬಹುದು. ತಿಂಡಿ ತಿನ್ನಲು, ಚಹಾ ಸೇವನೆಗೆ ಮಾಸ್ಕ್ ತೆಗೆಯಲೇಬೇಕು. ಇದರಿಂದಾಗಿ ಒಂದಷ್ಟು ಅನನುಕೂಲಗಳೂ ಆಗುತ್ತಿವೆ. ಹೊಟೇಲ್‌ ಕಾರ್ಮಿಕರ ಕುರಿತು ಮಾಲಕರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. 60 ದಾಟಿದ ಸಿಬಂದಿಯನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿಲ್ಲ.

ಜಾಗರೂಕತೆ
ಸಾರ್ವಜನಿಕರು ಕೂಡ ಈ ಕುರಿತು ಎಚ್ಚರಿಕೆ ವಹಿಸಬೇಕಾದ ಅವಶ್ಯವಿದೆ.ಕೆಲ ದಿನಗಳ ಹಿಂದೆ ದಿಢೀರ್‌ ಭೇಟಿ ನೀಡಿದ್ದ ಲೋಕಾಯುಕ್ತ ಡಿವೈಎಸ್‌ಪಿ ಅವರು ಕೂಡ ಹೊಟೇಲ್‌ಗ‌ಳಲ್ಲಿ ಸ್ಟೀಲ್‌ ಲೋಟ, ತಟ್ಟೆ ಬಳಸದಂತೆ ಸೂಚಿಸಿದ್ದರು.

ಹೆಚ್ಚಿದ ಖರ್ಚು
ತೊಳೆದು ಬಳಸುವ ಪ್ಲೇಟ್‌ಗಳಿಗಿಂತ ಮರು ಬಳಸಲಾಗದ ತಟ್ಟೆ, ಲೋಟ ಬಳಕೆಯಿಂದ ಗ್ರಾಹಕರಿಗೆ ಸೌಖ್ಯ ಹೌದು. ಆದರೆ ಮಾಲಕರಿಗೆ ಸಂಕಷ್ಟ ಬಂದಿದೆ. ಖರ್ಚಿನಲ್ಲಿ ಏರಿಕೆಯಾಗು ತ್ತಿದೆ. ಇದನ್ನು ಗ್ರಾಹಕರ ತಲೆಗೆ ವರ್ಗಾಯಿಸುವಂತಿಲ್ಲ. ದರ ಏರಿಸಿದರೆ ಗ್ರಾಹಕರ ಮುನಿಸಿಗೆ ಕಾರಣವಾಗ ಬೇಕಾಗುತ್ತದೆ. ಮೊದಲೇ ಗ್ರಾಹಕರ ಸಂಖ್ಯೆಯಲ್ಲಿ ಇಳಿತವಾಗಿದೆ. ಹೊಟೇಲ್‌ ಉದ್ಯಮ ಚೇತರಿಕೆ ಹಾದಿಯಲ್ಲಷ್ಟೇ ಇದೆ. ಹಾಗಿರುವಾಗ ದರ ಏರಿಕೆ ಬಿಸಿ ಮುಟ್ಟಿದರೆ ಇನ್ನಷ್ಟು ಕಠಿನ ಸಮಸ್ಯೆಯಾದೀತು ಎಂಬ ಆತಂಕ ಮಾಲಕರದ್ದು.

Advertisement

ಮಾಹಿತಿ ನೀಡಲಾಗಿದೆ
ನಗರದ ಹೊಟೇಲ್‌ ಮಾಲಕರನ್ನು ಕರೆದು ಪ್ರತಿ 15 ದಿನಗಳಿಗೊಮ್ಮೆ ಮೀಟಿಂಗ್‌ ನಡೆಸಲಾಗುತ್ತಿದೆ. ಪ್ರತಿದಿನ ಕೆಲವು ಹೊಟೇಲ್‌ಗ‌ಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪುರಸಭೆ ವತಿಯಿಂದ ಹೊಟೇಲ್‌ನವರ ವಾಟ್ಸಾéಪ್‌ ಗ್ರೂಪ್‌ ರಚಿಸಿ ಮಾಹಿತಿ ನೀಡಲಾಗುತ್ತಿದೆ. ಎಲ್ಲ ಎಚ್ಚರಿಕೆ ಕೈಗೊಳ್ಳಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next