Advertisement
ಕಳೆದ ಜನವರಿಯಲ್ಲಿ ನಡೆದಿದ್ದ ಸಬ್ ಇನ್‌ಸ್ಪೆಕ್ಟರ್ ನೇರ ನೇಮಕಾತಿ ವೇಳೆಯೂ ಶಿವಕುಮಾರಯ್ಯ ಮತ್ತು ಆತನ ತಂಡ ಸಕ್ರಿಯವಾಗಿದ್ದು, ಕೆಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪ ಕೇಳಿ ಬಂದಿದೆ. ಅದಕ್ಕೆ ಪುಷ್ಟಿ ನೀಡುವಂತೆ ನೆಲಮಂಗಲ ನಿವಾಸಿ ನಟರಾಜ್ ಎಂಬವರು ಶಿವಕುಮಾರ ಮತ್ತು ಆತನ ಸಹ ಚರ ಚಂದ್ರಶೇಖರ್ ವಿರುದ್ಧ 50 ಲ.ರೂ. ವಂಚಿಸಿದ ಸಂಬಂಧ ಕೋರ್ಟ್‌ಗೆ ದೂರು ನೀಡಿದ್ದು, ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವಕುಮಾರ್ ಅಲಿಯಾಸ್ ಗುರೂಜಿ ಆರಂಭದಲ್ಲಿ ಟ್ಯುಟೋರಿಯಲ್ ಸಂಸ್ಥೆ ನಡೆಸುತ್ತಿದ್ದ. ಅಲ್ಲಿನ ಪಿಯು ವಿದ್ಯಾ ರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಹಣ ಗಳಿಸುತ್ತಿದ್ದ. ಹೀಗೆ ಸುಮಾರು 15 ವರ್ಷಗಳಿಂದ ಪಿಯುಸಿ, ಎಸೆಸೆಲ್ಸಿ ಹಾಗೂ ಕೆಪಿಎಸ್‌ಸಿ, ವೈದ್ಯಕೀಯ, ಎಂಜಿನಿಯರ್ ಸಹಿತ ಹಲವಾರು ಹುದ್ದೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿದ್ದ. ರಾಜ್ಯಾದ್ಯಂತ ನೂರಾರು ಸಹಚರರನ್ನು ಹೊಂದಿರುವ ಈತ, ಸರಕಾರದ ಪ್ರತಿಯೊಂದು ಇಲಾಖೆಯಲ್ಲೂ ನೇಮಕಾತಿ ಕೊಡಿಸುವುದು ಮತ್ತು ಪರೀಕ್ಷೆಗಳಲ್ಲಿ ಉತ್ತೀರ್ಣ ಮಾಡಿಸುವಷ್ಟು ಪ್ರಭಾವಿಯಾಗಿದ್ದಾನೆ. ಶಿವಕುಮಾರಯ್ಯನ ಕುಟುಂಬದ ಕೆಲವರೂ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರಿದ್ದರು. ಬಿಡುಗಡೆಯಾದ ಬಳಿಕ ಮತ್ತೆ ಹಿಂದಿನ ದಂಧೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಈತನ ತಂಡದ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 25ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
ಈತ ಶಿವಕುಮಾರಸ್ವಾಮಿ “ಗುರೂಜಿ’ ಎಂದೇ ಗುರುತಿಸಿಕೊಂಡಿದ್ದು, 2008ರಲ್ಲಿ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ನೂರಾರು ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ. ಸಂಪಾದಿಸಿದ್ದ. ಅನಂತರ 2011, 2012, 2013ರಲ್ಲೂ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಜೈಲು ಸೇರಿದ್ದ. 2016ರ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಸಿಐಡಿ ಅಧಿಕಾರಿಗಳು ಶಿವಕುಮಾರ್ ಮತ್ತು ಈತನ ಸಹಚರರ ವಿರುದ್ಧ “ಕೋಕಾ’ ಕಾಯ್ದೆ ಅಡಿಯಲ್ಲಿ ಜೈಲಿಗಟ್ಟಿದ್ದರು.
Advertisement
2018ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ನಂಬಿಸಿ ಮಡಿಕೇರಿಯ ಕಲ್ಮಠದಲ್ಲಿ 120 ಮಂದಿಯೊಂದಿಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. 2019ರಲ್ಲೂ ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಸಿದ್ಧತೆ ನಡೆಸಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಸಿಸಿಬಿ ಪೊಲೀಸರು ಈತ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದರು. 2020ರಲ್ಲೂ ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಚು ರೂಪಿಸಲಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ.
ನಟರಾಜ್ ದೂರಿನಲ್ಲೇನಿದೆ?ಕೆಲವು ತಿಂಗಳ ಹಿಂದೆ ಪರಿಚಯವಾದ ಶಿವಕುಮಾರ್, ತನಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಈ ವೇಳೆ ಚಂದ್ರಶೇಖರ್ ಎಂಬಾತನನ್ನೂ° ಪರಿಚಯಿಸಿದ್ದು, ಆತನ ಮೂಲಕವೂ ಕೆಲವು ಭರವಸೆ ನೀಡಿದ್ದ ಎಂದು ನಟರಾಜ್ ಹೇಳಿದ್ದಾರೆ. ಅನಂತರ ಜ.2ರಂದು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿಗೆ ಬಂದಿದ್ದ ಶಿವಕುಮಾರ್ ಮತ್ತು ಚಂದ್ರಶೇಖರ್, ಇಲಾಖೆಯ ನೇಮಕಾತಿಯೊಂದಕ್ಕೆ 1 ಕೋ. ರೂ. ಹಣ ಬೇಕಿದೆ. ಜ. 10ರೊಳಗೆ ಹಣ ವಾಪಸ್ ಕೊಡುವುದಾಗಿ ತನ್ನಲ್ಲಿ ಕೋರಿಕೊಂಡಿದ್ದರು. ಆರಂಭದಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದು, ಬಳಿಕ ಅವರ ಒತ್ತಾಯದ ಹಿನ್ನೆಲೆಯಲ್ಲಿ ಜ.3ರಂದು 50 ಲ. ರೂ. ನೀಡಿ ವಂಚನೆಗೊಳಗಾಗಿದ್ದೇನೆ ಎಂದು ನಟರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಮೋಹನ್ ಭದ್ರಾವತಿ