Advertisement
ಗದಗ ಜಿಲ್ಲೆಯಲ್ಲಿ ಯಾವುದೇ ನದಿ, ಜಲಾಶಯಗಳಿಲ್ಲ. ಹಾಗಾಗಿ, ಕೇವಲ ಅಂತರ್ಜಲ ಬಳಸಿಕೊಂಡು ನರೇಗಲ್ಲ ಹೋಬಳಿ ಸುತ್ತಮುತ್ತ ರೈತರು ತೋಟಗಾರಿಕಾ ಬೆಳೆಗಳ ಮೊರೆ ಹೋಗಿದ್ದಾರೆ. ಇವರೆಲ್ಲರಿಗಿಂತ ಭಿನ್ನವಾಗಿ ಅಬ್ಬಿಗೇರಿಯ ಗ್ರಾ.ಪಂ ಸದಸ್ಯ ಕಂ ಕೃಷಿಕನಾಗಿರುವ ಬಸವರಾಜ ತಳವಾರ ಕಲ್ಲಂಗಡಿ, ಪಪ್ಪಾಯಿಂದಲೇ ಲಾಭ ಮಾಡುತ್ತಿದ್ದಾರೆ. ಹೀಗಾಗಿ, ಸುತ್ತಮುತ್ತಲಿನ ರೈತರು ಇವರ ಕಡೆ ತಿರುಗುವಂತಾಗಿದೆ.
ಬಸವರಾಜರದ್ದು ಮೂರು ಎಕರೆ ಜಮೀನಿದೆ. ಇದಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿ ಹೊಲ ಹದ ಮಾಡಿಕೊಂಡರು. ಒಂದು ತೈವಾನ್ ಜಾತಿಯ ಸಸಿಗೆ 14 ರೂ. ನಂತೆ ಖರೀದಿಸಿ ಎಕರೆಗೆ 1,300 ಸಸಿಗಳನ್ನು ಆರು ಅಡಿಗಳ ಅಂತರದಲ್ಲಿ, ತಲಾ ಒಂದರಂತೆ ನೆಟ್ಟಿದ್ದಾರೆ. ಮೂರು ಎಕರೆಯಲ್ಲಿ 3900 ಪಪ್ಪಾಯ ಗಿಡಗಳನ್ನು ನೆಟ್ಟು ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದಾರೆ. ಇದೀಗ ಸಮೃದ್ಧವಾಗಿ ಬೆಳೆ ಬಂದಿದೆ. ನಾಟಿ ಮಾಡಿದ 11 ತಿಂಗಳಿಗೆ ಕೊಯ್ಲಿಗೆ ಬರುವ ಈ ತಳಿಯ ಪಪ್ಪಾಯ ಒಂದು ವರ್ಷದ ಕಾಲ ಫಸಲು ನೀಡುತ್ತದೆ. 9 ತಿಂಗಳಿಗೆ ಕಟಾವಿಗೆ ಬರುವ ರೆಡ್‌ಲೇಡಿ ಹೆಚ್ಚು ಎತ್ತರ ಬೆಳೆಯುವುದಿಲ್ಲ, ಅಕ್ಕಪಕ್ಕ ರಂಬೆ ಕೊಂಬೆ ಹರಡುವುದಿಲ್ಲ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸಮೃದ್ಧ ಹಣ್ಣುಗಳಿಂದ ತುಂಬಿರುತ್ತದೆ. ಹೀಗಾಗಿ, ಕಟಾವಿಗೂ ಅನುಕೂಲವಾಗುತ್ತದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಗಿಡಗಳನ್ನು ನಾಟಿ ಮಾಡಬಹುದಾಗಿದೆ. ಸರ್ಕಾರ ಸಮಗ್ರ ತೋಟಗಾರಿಕಾ ಯೋಜನೆ (ಸಿಎಚ್‌ಡಿ) 1 ಹೆಕ್ಟೇರ್ ಪಪ್ಪಾಯಿ ಬೆಳೆಗೆ ರೂ. 86 ಸಾವಿರ ಸಹಾಯಧನ ನೀಡುತ್ತಿದೆ. ಪ್ರಾರಂಭದಲ್ಲಿ ರೋಗಮುಕ್ತ ಗಿಡಗಳನ್ನು ನಾಟಿ ಮಾಡುವ ಬಗ್ಗೆ ಜಾಗ್ರತೆ ವಹಿಸಬೇಕು. ಮಧ್ಯೆ ಉಂಗುರಚುಕ್ಕೆ ನಂಜುರೋಗ ಕಾಣಿಸಿಕೊಂಡಾಗ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇದೆಲ್ಲವನ್ನು ಬಸವರಾಜ್ ಬಹಳ ಮುತುವರ್ಜಿಯಿಂದ ಮಾಡಿದ್ದರಿಂದಲೇ ಈಗ ಲಾಭದ ಮುಖ ನೋಡುತ್ತಿರುವುದು.
Related Articles
Advertisement
ಸಿಕಂದರ್ ಎಂ. ಆರಿ