ಡಬ್ಲಿನ್: ಪಾದ್ರಿಗಳ ಲೈಂಗಿಕ ಹಗರಣಗಳನ್ನು ನಿಗ್ರಹಿಸುವಲ್ಲಿ ಕ್ಯಾಥೋಲಿಕ್ ಚರ್ಚ್‌ಗಳು ವಿಫಲವಾಗಿದ್ದು, ಮುಜುಗರದಿಂದ ತಲೆತಗ್ಗಿಸುವಂತಾಗಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಪಾದ್ರಿಗಳ ಕಾಮಲೋಲುಪತೆಯ ವಿರುದ್ಧ ಎದ್ದಿರುವ ಜಾಗತಿಕ ಧ್ವನಿಗೆ ಸ್ಪಂದಿಸಿರುವ ಪೋಪ್ ಅವರು, ಈ ಅಪರಾಧಗಳನ್ನು ನಿಗ್ರಹಿಸುವಲ್ಲಿ ಬಿಷಪ್‌ಗ್ಳು, ಪಾದ್ರಿಗಳು ಹಾಗೂ ಇತರೆ ಚರ್ಚ್‌ನ ಅಧಿಕಾರಿಗಳಿಂದಾದ ವೈಫಲ್ಯವೇ ಇದರ ವಿರುದ್ಧ ಧ್ವನಿ ಏಳಲು ಕಾರಣವಾಗಿದೆ. ಇದು ಕ್ಯಾಥೋಲಿಕ್ ಸಮುದಾಯಕ್ಕೆ ನೋವಿನ ಹಾಗೂ ಮುಜುಗರದ ಸಂಗತಿ ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಐರ್ಲೆಂಡ್ ಪ್ರವಾಸದ ಮೊದಲ ದಿನವೇ ಪಾದ್ರಿಗಳ ಲೈಂಗಿಕ ಹಗರಣದ ಕುರಿತು ಮಾತನಾಡಿದ್ದು ಪ್ರಾಮುಖ್ಯತೆ ಪಡೆದುಕೊಂಡಿದೆ. ಇಲ್ಲಿನ ಸಂತ್ರಸ್ತ ಬಾಲಕಿಯರೊಂದಿಗೂ ಪೋಪ್ ಮಾತನಾಡುವ ನಿರೀಕ್ಷೆಯಿದೆ.
ಇತ್ತೀಚೆಗಷ್ಟೇ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಹಾಗೂ ಅದನ್ನು ಮುಚ್ಚಿಟ್ಟ ಪಾದ್ರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಪ್ ಅವರಿಗೆ ಐರಿಷ್ ಪ್ರಧಾನಿ ಆಗ್ರಹಿಸಿದ್ದರು. ಚರ್ಚುಗಳು ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಸಾವಿರಾರು ಮಕ್ಕಳ ಮೇಲೆ ಪಾದ್ರಿಗಳು ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಎಸೆದಿರುವ ಪ್ರಕರಣಗಳು ಇಲ್ಲಿ ಬೆಳಕಿಗೆ ಬಂದಿದ್ದವು. ಜೊತೆಗೆ, ಇಂಥ ಪ್ರಕರಣಗಳನ್ನು ಮುಚ್ಚಿಹಾಕಲು ಬಿಷಪ್‌ಗ್ಳು ಯತ್ನಿಸಿರುವುದೂ ಬಹಿರಂಗವಾಗಿತ್ತು. ಇದೇ ವೇಳೆ, ಭಾರತದ ಕೇರಳದಲ್ಲೂ ಇತ್ತೀಚೆಗೆ ಪಾದ್ರಿಗಳ ಲೈಂಗಿಕ ಹಗರಣಗಳು ಬೆಳಕಿಗೆ ಬಂದಿದ್ದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪೋಪ್‌ರ ಹೇಳಿಕೆ ಮಹತ್ವ ಪಡೆದಿದೆ.