ಚೇಳೂರು: ಚೇಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಚೇಳೂರಿನ ಪಾಪಾಗ್ನಿ ನದಿ ಉಕ್ಕಿ ಹರಿಯುತ್ತಿದೆ. ಚೇಳೂರು ಪಟ್ಟಣಕ್ಕೆ ಚಿಂತಾಮಣಿ ತಾಲೂಕಿನಿಂದ ಹೋಗಿಬರಲು ಸಂಪರ್ಕವನ್ನು ಸ್ಥಗಿತಗೊಳಿಸುವಂತೆ ಮಾಡುತ್ತಿದೆ.
ಕಳೆದ ವರ್ಷದ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಸುರಿದ ಭಾರೀಮಳೆಗೆ ನೂತನ ತಾಲೂಕಾದ್ಯಂತ ಕೆರೆ ಕುಂಟೆಗಳು ತುಂಬಿ ಕೋಡಿ ಹರಿದಿತ್ತು. ಅದರ ಭಾಗ ಎಂಬಂತೆ ತಿಂಗಳಿಂದ ಲೂ ಮತ್ತೆ ಮಳೆ ಬೀಳುತ್ತಿದೆ. ಸಣ್ಣದಾಗಿ ಹರಿಯುತ್ತಿದ್ದ ಪಾಪಾಗ್ನಿ ನದಿಯಲ್ಲಿ ಶುಕ್ರವಾರ ಪ್ರವಾಹ ಕಂಡುಬಂದಿದೆ. ಜನ ಮತ್ತು ವಾಹನ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿತ್ತು.
ಪಾಪಾಗ್ನಿ ನದಿ ಪ್ರದೇಶಗಳ ಒತ್ತುವರಿಯಾಗಿರುವುದನ್ನು ಪಾಪಾಗ್ನಿ ತನ್ನಷ್ಟಕ್ಕೆ ತಾನೇ ತೆರವುಮಾಡಿಕೊಂಡು ಪ್ರಕೃತಿಯ ವಿರುದ್ಧ ನಡೆದುಕೊಂಡರೆ ಹುಷಾರ್ ಎಂದು ಎಚ್ಚರಿಕೆ ನೀಡಿದೆ. ಪಟ್ಟಣದ ಅನೇಕ ಪ್ರದೇಶಗಳಲ್ಲಿ ಮನೆ ಅಂಗಡಿ ಮತ್ತಿತರ ತಗ್ಗು ಪ್ರದೇಶದ ಸ್ಥಳಗಳಿಗೆ ನೀರು ಹರಿದು ಬಂದಿತ್ತು. ಸುದ್ದಿ ತಿಳಿದೊಡನೇ ಚೇಳೂರು ರೆವಿನ್ಯೂ ಇನ್‌ಸ್ಪೇಕ್ಟರ್ ವಿ.ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ವೈ.ವೆಂಕಟೇಶ್, ಪಿಡಿಓ ಗೌಸ್‌ಪೀರ್, ಪೋಲಿಸ್ ಇಲಾಖೆ ಯ ಮುಖ್ಯ ಪೇದೆ ಪ್ರಭಾಕರ್, ಆಡಳಿತ ಮಂಡಳಿಯ ಜಿ.ವಿ.ಸುರೇದ್ರ, ಜೆ.ಎನ್.ಜಾಲಾರಿ, ತಾಲೂಕು ಅಭಿವೃದ್ಧಿ ಹೋರಾಟ ಸಮತಿ ಸದಸ್ಯ ಗುನ್ನಾ ಪಾಪಿರೆಡ್ಡಿ, ವೈ.ಶಂಕರ್ ಭೇಟಿ ನೀಡಿ ಮುಜಾಗ್ರತಾ ಕ್ರಮ ಕೈಗೊಳ್ಳಲು ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಬಸವಣ್ಣನ ಕಟ್ಟೆಯ ಪಕ್ಕದಲ್ಲಿ ಹರಿಯುತ್ತಿದ್ದ ಪಾಪಾಗ್ನಿ ನದಿ ಸೌಂದರ್ಯ ನೋಡಲು ಜನರು ಆಗಮಿಸುತ್ತಿದ್ದರು.
ಚೇಳೂರಿಗೆ ಸಂರ್ಪಕ ಕಟ್
ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಚೇಳೂರಿನಿಂದ ಚಿಂತಾಮಣಿಗೆ ಹೋಗಲು ಮತ್ತೆ ಅತ್ತ ಕಡೆಯಿಂದ ಬರಲು ಯಾವುದೇ ವಾಹನ ಸಂಚರಿಸಲು ಅವಕಾಶವಿರಲಿಲ್ಲ. ಮುಂಜಾನೆ ಪ್ರವಾಹದಂತೆ ಹರಿಯುತ್ತಿದ್ದ ನದಿ ನೀರು ನಂತರ ನಿಧಾನವಾಗಿ ಹರಿಯತೊಡಗಿತು. ದ್ವಿಚಕ್ರವಾಹನ ಕಾರು -ಬಸ್‌ಗಳು ಬೆಳಗ್ಗೆಯಿಂದ ಮಧ್ಯಾಹ್ನದ ತನಕ ರಸ್ತೆಯಲ್ಲಿ ಸಂಚರಿಸಲಾಗದೆ ಏನಿಗದಲೆ- ತುಳುವನೂರು ಟಿ. ಗೊಲ್ಲಹಳ್ಳಿ ಗ್ರಾಮಗಳ ಮೂಲಕ ಸಂಚಾರ ನಡೆಸಿದವು.