Advertisement

ಪನ್ವೇಲ್‌ ನಾದೋಪಾಸನ ಸಂಗೀತ ಸಂಸ್ಥೆ: ಪುರಂದರದಾಸರ ಆರಾಧನೆ

01:34 PM Mar 08, 2019 | Team Udayavani |

ಮುಂಬಯಿ: ನಗರದ ಕರ್ನಾಟಕ ಸಂಗೀತ ವಿದುಷಿ, ಡಾ| ಶ್ಯಾಮಲಾ ಪ್ರಕಾಶ್‌ ಅವರ ಸಂಚಾಲಕತ್ವದ ನಾದೋಪಾಸನ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಸಂಗೀತ ಪಿತಾಮಹ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವವು ಮಾ. 4 ರಂದು ಪನ್ವೇಲ್‌ನ ಕರ್ನಾಟಕ ಸಂಘದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಪನ್ವೇಲ್‌ ಕರ್ನಾಟಕ ಸಂಘದ ಪದಾಧಿಕಾರಿಗಳು, ಸದಸ್ಯರು ಗಳೆಲ್ಲರೂ ನಾದೋಪಾಸನ ಸಂಸ್ಥೆಯ ಕಾರ್ಯಕ್ರಮದೊಂದಿಗೆ ಸಹಭಾಗಿಗಳಾಗಿದ್ದರು. ಪನ್ವೇಲ್‌ನ ನಗರಾಧ್ಯಕ್ಷ, ಕನ್ನಡಿಗ ಸಂತೋಷ್‌ ಶೆಟ್ಟಿ ಮತ್ತು ಶ್ವೇತಾ ಶೆಟ್ಟಿ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಶ್ರೀ ವೃಂದಾವನ ಬಾಬಾ ಭಜನಾ ಮಂಡಳಿ  ಇವರಿಂದ 1ಗಂಟೆಯ ಕಾಲ ಭಜನಾ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು.

ಆನಂತರ ಸುಮಾರು 2 ಗಂಟೆಗಳ ಕಾಲ ನಾದೋಪಾಸನದ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳು ಕೃತಿ, ವರ್ಣ, ಮನೋಧರ್ಮ ಸಂಗೀತದೊಂದಿಗೆ ಅನೇಕ ದಾಸರ ಕೃತಿಗಳನ್ನು ಹಾಡಿ ಶ್ರೋತೃಗಳ ಮನರಂಜಿಸಿದರು. ಐದು ವರ್ಷದಿಂದ ಐವತ್ತು ವರ್ಷ ವಯೋಮಾನದ ಎಲ್ಲಾ ಭಾಷಿಕ ವರ್ಗದ ವಿದ್ಯಾರ್ಥಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದರು.

ಮುಖ್ಯ ಅತಿಥಿಯಾಗಿ ವಿದುಷಿ ಶ್ಯಾಮಲಾ ರಾಧೇಶ್‌ ರವರು ಆಗಮಿಸಿದ್ದರು. ಕರ್ನಾಟಕ ಸರಕಾರ ಪ್ರೌಢ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಸಂಗೀತ ಪರೀಕ್ಷೆಗಳಲ್ಲಿ ಈ ಬಾರಿ ಮುಂಬಯಿ ವಲಯದ ಮೊದಲ ಮೂರು ರ್‍ಯಾಂಕ್‌ಗಳೂ ನಾದೋಪಾಸನದ ವಿದ್ಯಾರ್ಥಿಗಳಿಗೆ ಲಭಿಸಿದ್ದು, ಅವರನ್ನು ಗಣ್ಯರು ಗೌರವಿಸಿದರು.  ಕಾರ್ಯಕ್ರಮದಲ್ಲಿ ಡಾ| ಶ್ಯಾಮಲಾ ಪ್ರಕಾಶ್‌ ಅವರ ಮಾತಾ-ಪಿತರಾದ ಜಿ. ಕೆ. ಮಂಜುನಾಥ್‌ ಮತ್ತು  ಸೀತಾಲಕ್ಷ್ಮಿ ಮಂಜುನಾಥ್‌ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಗುರು ಡಾ| ಶ್ಯಾಮಲಾ ಪ್ರಕಾಶ್‌ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಮಂಗಳ ಗಾನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಪದಾಧಿಕಾರಿಗಳಾದ ಕೊಲ್ಪೆ ಧನಂಜಯ ಶೆಟ್ಟಿ, ಸತೀಶ್‌ ಕುತ್ಯಾರ್‌, ಗುರು ಶೆಟ್ಟಿ, ಭಾಸ್ಕರ್‌ ಶೆಟ್ಟಿ, ಶಬುನಾ ಸತೀಶ್‌, ಸುಧಾರಾವ್‌, ರೋಹಿಣಿ ಮಧ್ಯಸ್ಥ, ಬೇಟರಾಯ ದಂಪತಿ ಮತ್ತು ಅನೇಕ ಹಿರಿಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಕ್ಕಳ ವಿಕಸನಕ್ಕಾಗಿ ನಾದೋಪಾಸನ ಸಂಗೀತ ವಿದ್ಯಾಲಯವು ಪ್ರತಿ ವರ್ಷವೂ ತನ್ನ ವಾರ್ಷಿಕ ಮಹೋತ್ಸವವನ್ನು ಪುರಂದರದಾಸರ ಆರಾಧನಾ ಮಹೋತ್ಸವ ಎಂದೇ ಆಚರಿಸಿಕೊಂಡು ಬರುತ್ತಿದೆ. ಈ ವಿದ್ಯಾಲಯದಲ್ಲಿ ಕರ್ನಾಟಕ ಸಂಗೀತ, ದಾಸರ ಕೃತಿಗಳು, ಗಮಕ ಪಾಠಗಳನ್ನು ಆಸಕ್ತರಿಗೆ ಕಲಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next