Advertisement

ಮಹಿಳಾ ಪೊಲೀಸರಿಗೂ ಪ್ಯಾಂಟ್‌ ಕಡ್ಡಾಯ

06:00 AM Aug 11, 2018 | Team Udayavani |

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿಗೂ ಅಧಿಕಾರಿ ಶ್ರೇಣಿಯ ಸ್ಥಾನಮಾನ ನೀಡುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಮತ್ತೂಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

Advertisement

ಈಗಾಗಲೇ ಪೇದೆಗಳ ಸೌಚ್‌ ಕ್ಯಾಪ್‌ ಬದಲಿಗೆ ಪೀಕ್‌-ಕ್ಯಾಪ್‌ ಶಿರವೇರಿಸಲು ತೀರ್ಮಾನಿಸಿರುವ ಪೊಲೀಸ್‌ ಇಲಾಖೆ, ಮಹಿಳಾ ಪೊಲೀಸ್‌ ಸಿಬ್ಬಂದಿ ಸೀರೆ ಬದಲಿಗೆ ಪ್ಯಾಂಟ್‌ ಸಮವಸ್ತ್ರ ಕಡ್ಡಾಯ ಮಾಡಲು ನಿರ್ಧಾರಕೈಗೊಂಡಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಡಾ. ಜಿ.ಪರಮೇಶ್ವರ ಕೂಡ ಮಹಿಳಾ ಸಿಬ್ಬಂದಿ ಇನ್ಮುಂದೆ ಸೀರೆ ಬದಲಿಗೆ ಪ್ಯಾಂಟ್‌ ಕಡ್ಡಾಯ ಕುರಿತು ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ಪೊಲೀಸ್‌ ಕಾಯ್ದೆ ಪ್ರಕಾರ ಪ್ರತಿಯೊಬ್ಬ ಮಹಿಳಾ ಸಿಬ್ಬಂದಿ ವಿಶೇಷ ಸಂದರ್ಭ ಹೊರತು ಪಡಿಸಿ ಕಡ್ಡಾಯವಾಗಿ ಪ್ಯಾಂಟ್‌ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನಿಯವಿದೆ. ಆದರೆ, ಕೆಲ ಸಿಬ್ಬಂದಿ ದೈಹಿಕವಾಗಿ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ಸೀರೆ ತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೀರೆ ಬದಲು ಪ್ಯಾಂಟ್‌ ಬದಲಾವಣೆ ಮಾಡುವುದರಿಂದ ಮಹಿಳಾ ಸಿಬ್ಬಂದಿ ತಮ್ಮ ದೈಹಿಕ ಸದೃಢತೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಜತೆಗೆ ಪೊಲೀಸ್‌ ಕಾರ್ಯಾಚರಣೆ ವೇಳೆ (ಗಲಾಟೆ, ಆರೋಪಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ) ಉಪಯೋಗವಾಗುತ್ತದೆ ಎಂಬ ಉದ್ದೇಶದಿಂದ ಈ ನಿರ್ಧಾರಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಸದ್ಯ ಇಲಾಖೆಯಲ್ಲಿ ಪೇದೆ, ಎಎಸ್‌ಐ, ಪಿಎಸ್‌ಐ (ಗ್ರಾಮೀಣ ಭಾಗದಲ್ಲಿ) ಹಂತದ ಮಹಿಳಾ ಸಿಬ್ಬಂದಿ ಹೆಚ್ಚು ಸೀರೆ ತೊಟ್ಟು ಕರ್ತವ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಕಾರ್ಯಾಚರಣೆ ವೇಳೆ ಅಡಚಣೆ ಉಂಟಾಗಿದೆ ಎಂದು ಹೇಳಲಾಗಿದೆ.

ದಶಕಗಳಿಂದ ಸೀರೆ ತೊಡುವ ಮಹಿಳಾ ಸಿಬ್ಬಂದಿಗೆ ಗೃಹ ಸಚಿವರ ಈ ಹೇಳಿಕೆ ಒಂದು ರೀತಿಯ ಶಾಕ್‌ ನೀಡಿದೆ. ಪ್ಯಾಂಟ್‌ ಧರಿಸುವುದು ನಮ್ಮ ಸಂಸ್ಕೃತಿ ಅಲ್ಲ. ಮದುವೆ‌ ಬಳಿಕ ಅಥವಾ 40-45 ವರ್ಷವಾಗುತ್ತಿದ್ದಂತೆ ಮಹಿಳಾ ಸಿಬ್ಬಂದಿಯಲ್ಲಿ ಕೆಲವರು ದಪ್ಪ ಆಗುತ್ತಾರೆ. ಆಗ ಪ್ಯಾಂಟ್‌ ಅಷ್ಟು ಸೂಕ್ತವಾಗುವುದಿಲ್ಲ, ಹೀಗಾಗಿ ಸೀರೆ ತೊಡುವುದು ಸೂಕ್ತ. ಕಡ್ಡಾಯ ಮಾಡುವ ಬದಲು 45 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಸೀರೆ ಧರಿಸಲು ರಿಯಾಯಿತಿ ನೀಡಬೇಕು. ಈ ಕುರಿತು ಈ ಹಿಂದೆ ಮೌಖೀಕವಾಗಿ ಆದೇಶ ಇತ್ತು ಎಂದು  ಮಹಿಳಾ ಸಿಬ್ಬಂದಿ ಹೇಳುತ್ತಾರೆ.

Advertisement

ಪ್ಯಾಂಟ್‌ ಸೂಕ್ತ
ಆರೋಪಿ ಬೆನ್ನಟ್ಟುವ ವೇಳೆ ಹಾಗೂ ಗಲಾಟೆ ಸಂದರ್ಭದಲ್ಲಿ ಪ್ಯಾಂಟ್‌ ಸೂಕ್ತವಾಗಿದೆ. ಗಲಾಟೆ, ದೊಂಬಿ ವೇಳೆ ಸೀರೆ ಧರಿಸುವುದರಿಂದ ಕೆಲವೊಮ್ಮೆ ಕಿಡಿಗೇಡಿಗಳು ಸೀರೆ ಎಳೆಯುವುದು ಅಥವಾ ಕೆಲ ಕಡೆ ಸೀರೆ ಸಿಲುಕಿಕೊಳ್ಳಬಹುದು. ಹೀಗಾಗಿ ಪ್ಯಾಂಟ್‌ ಧರಿಸುವುದರಿಂದ ಸಹಾಯವಾಗುತ್ತದೆ. ಅಲ್ಲದೆ, ಇತ್ತೀಚೆನ ಪೇದೆಗಳು ಧರಿಸುವ ಪ್ಯಾಂಟ್‌ ಹೆಚ್ಚು ಸೂಕ್ತವಾಗಿದ್ದು, ಔಟ್‌ಶರ್ಟ್‌ ಇರುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಮತ್ತೂಬ್ಬ ಮಹಿಳಾ ಸಿಬ್ಬಂದಿ ಅಭಿಪ್ರಾಯಪಟ್ಟರು.

ಪೊಲೀಸ್‌ ಇಲಾಖೆ ಶಿಸ್ತಿನ ಇಲಾಖೆ.ಹೀಗಾಗಿ ಮಹಿಳಾ ಸಿಬ್ಬಂದಿಯೂ ಸ್ಮಾ¾ರ್ಟ್‌ ಹಾಗೂ ದೈಹಿಕವಾಗಿ ಸದೃಢವಾಗಿ ಕಾಣಬೇಕು. ಪ್ಯಾಂಟ್‌ ಕಡ್ಡಾಯವಾಗಿ ಧರಿಸಬೇಕು ಎಂಬ ಉದ್ದೇಶದಿಂದ ನಿಯಮ ಜಾರಿಗೆ ತರುವ ಕುರಿತು ಚಿಂತನೆ ನಡೆದಿದೆ. ಆದರೆ, ಅಂತಿಮವಾಗಿ ಸರ್ಕಾರ ಆದೇಶ ಹೊರಡಿಸಬೇಕಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣೆ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next