Advertisement

ಇಂಗ್ಲೆಂಡ್‌ ವಿರುದ್ಧ ಪಂತ್‌/ಕಾರ್ತಿಕ್‌ ಕಣಕ್ಕೆ?

10:09 AM Jun 29, 2019 | Team Udayavani |

ಮ್ಯಾಂಚೆಸ್ಟರ್‌: ಈ ವಿಶ್ವಕಪ್‌ ಪಂದ್ಯಾವಳಿಯ ಏಕೈಕ ಅಜೇಯ ತಂಡವಾಗಿರುವ ಭಾರತವೀಗ ಸೆಮಿಫೈನಲ್‌ ಅಂಚಿಗೆ ಬಂದು ನಿಂತಿದೆ. ಉಳಿದ 3 ಪಂದ್ಯಗಳಲ್ಲಿ ಕೇವಲ ಒಂದಂಕ ಗಳಿಸಿದರೂ ಕೊಹ್ಲಿ ಪಡೆಯ ನಾಕೌಟ್‌ ಪ್ರವೇಶ ಅಧಿಕೃತಗೊಳ್ಳಲಿದೆ.

Advertisement

ಗುರುವಾರ ರಾತ್ರಿ ವೆಸ್ಟ್‌ ಇಂಡೀಸ್‌ ವಿರುದ್ಧ ಸಾಧಿಸಿದ 125 ರನ್‌ ಜಯಭೇರಿ ಭಾರತದ ಯಶಸ್ಸಿನ ಓಟಕ್ಕೆ ಸಾಕ್ಷಿ. ಅಂದಮಾತ್ರಕ್ಕೆ ಟೀಮ್‌ ಇಂಡಿಯಾದಲ್ಲಿ ಎಲ್ಲವೂ ಸುಸೂತ್ರವಾಗಿದೆ, ಯಾವುದೇ ಸಮಸ್ಯೆ ಇಲ್ಲ ಅಂದರೆ ತಪ್ಪಾದೀತು. ಇದಕ್ಕೆ 4ನೇ ಕ್ರಮಾಂಕದ ವೈಫ‌ಲ್ಯವೇ ಸಾಕ್ಷಿ.

ಮಿಡ್ಲ್ ಆರ್ಡರ್‌ ಅತ್ಯಂತ ದುರ್ಬಲ ಉಳಿದೆಲ್ಲ ತಂಡಗಳ 4ನೇ ಕ್ರಮಾಂಕವನ್ನು ಗಮನಿಸಿ… ಇಯಾನ್‌ ಮಾರ್ಗನ್‌, ಸ್ಟೀವನ್‌ ಸ್ಮಿತ್‌, ರಾಸ್‌ ಟೇಲರ್‌, ಮೊಹಮ್ಮದ್‌ ಹಫೀಜ್ , ಮುಶ್ಫಿಕರ್‌ ರಹೀಂ ಅವರಂಥ ಸಮರ್ಥ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳು ಇಲ್ಲಿ ಬ್ಯಾಟ್‌ ಹಿಡಿದು ಬರುತ್ತಿದ್ದಾರೆ.
ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲೂ ತಂಡವನ್ನು ಮೇಲೆತ್ತುತ್ತಾರೆ. ಆದರೆ ಭಾರತ ಮಾತ್ರ ಯಾವುದೇ ಅನುಭವ ಹೊಂದಿಲ್ಲದ, ತೀರಾ ಸಾಮಾನ್ಯ ಆಟಗಾರ ನಾಗಿರುವ ವಿಜಯ್‌ ಶಂಕರ್‌ ಅವರನ್ನು ಆಡಲಿಳಿಸುತ್ತಿದೆ. ವಿಶ್ವಕಪ್‌ನಂಥ ದೊಡ್ಡ ಕೂಟದಲ್ಲಿ ಇದನ್ನು ಗ್ಯಾಂಬ್ಲಿಂಗ್‌ ಎಂದೇ ಹೇಳಬೇಕಾಗುತ್ತದೆ. ಇದರ ವ್ಯತಿರಿಕ್ತ ಪರಿಣಾಮ ಈಗಾಗಲೇ ತಂಡದ ಮೇಲೆ ಉಂಟಾಗಿದೆ. ಅಫ್ಘಾನ್‌ ಮತ್ತು ವಿಂಡೀಸ್‌ ವಿರುದ್ಧ ಚಡಪಡಿಸಿದ್ದೇ ಇದಕ್ಕೆ ಸಾಕ್ಷಿ.

ವಿಜಯ್‌ ಶಂಕರ್‌ ಪ್ರತಿಭಾನ್ವಿತ ಆಲ್‌ರೌಂಡರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ವರ್ಷ ಈ ತಮಿಳುನಾಡು ಕ್ರಿಕೆಟಿಗನ ಪ್ರತಿಭೆ ದೊಡ್ಡ ಮಟ್ಟದಲ್ಲೇ ಅನಾವರಣಗೊಂಡಿತ್ತು. ಆದರೆ ವಿಶ್ವಕಪ್‌ ನಲ್ಲಿ ಇದು ಫ‌ಲ ಕೊಟ್ಟಿಲ್ಲ. ಮುಖ್ಯವಾಗಿ, ಮೊದಲೆರಡು ವಿಕೆಟ್‌ ಬೇಗನೆ ಬಿದ್ದಾಗ ಇನ್ನಿಂಗ್ಸ್‌ ಬೆಳಸಿಕೊಂಡು ಹೋಗುವ ಸಾಮರ್ಥ್ಯ ಶಂಕರ್‌ ಅವರಲ್ಲಿ ಇನ್ನೂ ಕಂಡು ಬಂದಿಲ್ಲ. ಹೀಗಾಗಿ ಮಿಡ್ಲ್ ಆರ್ಡರ್‌ ಮೇಲೀಗ ವಿಪರೀತ ಒತ್ತಡ ಬಿದ್ದಿದೆ.

ಆರಂಭಕಾರ ಶಿಖರ್‌ ಧವನ್‌ ಇದ್ದಾಗ ರಾಹುಲ್‌ 4ನೇ ಕ್ರಮಾಂಕಕ್ಕೆ
ಸೂಕ್ತವಾಗಿದ್ದರು. ಆದರೆ ರಾಹುಲ್‌ಗೆ ಭಡ್ತಿ ಲಭಿಸಿದ ಬಳಿಕ ಅವಕಾಶ ಪಡೆದ ಶಂಕರ್‌ ಇದರ ಲಾಭವೆತ್ತಲು ವಿಫ‌ಲರಾಗಿದ್ದಾರೆ. ಐಪಿಎಲ್‌ ವೇಳೆ ಸ್ಪಿನ್‌ ವಿರುದ್ಧ ಶಂಕರ್‌ ಅವರ ವೈಫ‌ಲ್ಯ ಗೋಚರಕ್ಕೆ ಬಂದಿತ್ತು. ಇಲ್ಲೀಗ ಉತ್ತಮ ಮಟ್ಟದ ಪೇಸ್‌ ಬೌಲಿಂಗ್‌ ವಿರುದ್ಧ ಸ್ಟ್ರೈಕ್‌ ರೊಟೇಟ್‌ ಮಾಡುವಲ್ಲಿ ವಿಫ‌ಲರಾಗುತ್ತಿದ್ದಾರೆ.

Advertisement

ಬೌಲಿಂಗ್‌ನಿಂದಲೂ ಹಿಂದೆ
ಆಲ್‌ರೌಂಡರ್‌ ಅಂದಮೇಲೆ ಆತನ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸಿ
ಕೊಳ್ಳಬೇಕಾಗುತ್ತದೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಶಂಕರ್‌ ಅವರನ್ನು ಬೌಲಿಂಗಿಗೇ ಇಳಿಸುತ್ತಿಲ್ಲ. 5ನೇ ಬೌಲರ್‌ ಆಗಿ ಪಾಂಡ್ಯ ಅವರೇ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ಪಾಕಿಸ್ಥಾನ ವಿರುದ್ಧ ಭುವನೇಶ್ವರ್‌ಕುಮಾರ್‌ ಓವರ್‌ ಪೂರ್ತಿಗೊಳಿಸಲು ಬಂದ ಶಂಕರ್‌ ಮೊದಲ ಎಸೆತದಲ್ಲೇ ಇಮಾಮ್‌ ಉಲ್‌ ಹಕ್‌ ವಿಕೆಟ್‌ ಕಿತ್ತು ಮಿಂಚಿದ್ದರು. ಬಳಿಕ ನಾಯಕ ಸಫ‌ರಾಜ್‌ ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದ್ದರು. ಬ್ಯಾಟಿಂಗಿಗಷ್ಟೇ ಮೀಸಲಾದ ಶಂಕರ್‌ ಇದರಲ್ಲಿ ಯಶಸ್ಸು ಕಾಣುತ್ತಿಲ್ಲ. ಅವರ ಗಳಿಕೆ 15, 29 ಮತ್ತು 14 ರನ್‌ ಮಾತ್ರ

ಸಮಸ್ಯೆಗೆ ಪರಿಹಾರ ಅಗತ್ಯ
ಇಂಗ್ಲೆಂಡ್‌ ಎದುರಿನ ರವಿವಾರದ “ಬಿಗ್‌ ಮ್ಯಾಚ್‌’ ಸಮೀಪಿಸುತ್ತಿರುವಂತೆಯೇ ತಂಡದ ಆಡಳಿತ ಮಂಡಳಿ 4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿಯಲ್ಲಿ ಯೋಚಿಸುತ್ತಿದೆ. ಇಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ರಿಷಭ್‌ ಪಂತ್‌ ರೇಸ್‌ನಲ್ಲಿದ್ದಾರೆ. ಅನುಭವದ ದೃಷ್ಟಿಯಲ್ಲಿ ಕಾರ್ತಿಕ್‌ ಓಕೆ. ಆದರೆ ಎಡಗೈ ಬ್ಯಾಟ್ಸ್‌ಮನ್‌ ಲೆಕ್ಕಾಚಾರದಲ್ಲಿ ಪಂತ್‌ ಮುಂದಿದ್ದಾರೆ. ಧವನ್‌ ಹೊರಬಿದ್ದ ಬಳಿಕ ಭಾರತ ಸ್ಪೆಷಲಿಸ್ಟ್‌ಎಡಗೈ ಬ್ಯಾಟ್ಸ್‌ಮನ್‌ ಕೊರತೆ ಅನುಭವಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next