ಹೊಸದಿಲ್ಲಿ: ರೂರ್ಕಿ ಬಳಿ ಶುಕ್ರವಾರ ಬೆಳಗ್ಗೆ ನಡೆದ ಗಂಭೀರ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾರತದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಅವರು ಮುಂದೆ ಬಹಳಷ್ಟು ಸಮಯ ಕ್ರಿಕೆಟ್ ಆಡುವುದರಿಂದ ದೂರ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಕಳೆದ ವಾರ ಢಾಕಾದಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯದಾಗಿ ಭಾರತಕ್ಕಾಗಿ ಆಡಿದ 25 ವರ್ಷದ ವಿಕೆಟ್‌ಕೀಪರ್ ಬ್ಯಾಟರ್ ಪಂತ್, ಶುಕ್ರವಾರ ಬೆಳಿಗ್ಗೆ ರೂರ್ಕಿಯ ಸಮೀಪದಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಡಿವೈಡರ್ ಗೆ ಡಿಕ್ಕಿ ಹೊಡೆದರು.
ಪಂತ್ ಅವರ ಹಣೆಗೆ ಎರಡು ಗಾಯಗಳು, ಅವರ ಬಲ ಮೊಣಕಾಲಿನ ಅಸ್ಥಿರಜ್ಜಿಗೆ ಗಾಯ, ಹಾಗೆಯೇ ಅವರ ಬಲ ಮಣಿಕಟ್ಟು, ಪಾದಕ್ಕೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಅವರ ಬೆನ್ನಿಗೆ ಸವೆತದ ಗಾಯಗಳಾಗಿವೆ ಎಂದು ವರದಿಯಾಗಿದೆ.
ಏಮ್ಸ್ ವೈದ್ಯರನ್ನು ಉಲ್ಲೇಖಿಸಿದ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ರಿಷಭ್ ಅವರು ಕಾರು ಅಪಘಾತದ ಸಮಯದಲ್ಲಿ ಅನುಭವಿಸಿದ ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಮೂರರಿಂದ ಆರು ತಿಂಗಳವರೆಗೆ ಬೇಕಾಗಬಹುದು.
ಪಂತ್ ಅವರು ಗಾಯದಿಂದ ಚೇತರಿಸಿಕೊಳ್ಳಲು ಆರು ತಿಂಗಳು ತೆಗೆದುಕೊಂಡರೆ ಆಸ್ಟ್ರೇಲಿಯಾ ವಿರುದ್ಧ ಮುಂಬರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮತ್ತು 2023ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವುದು ಕಷ್ಟಕರವಾಗಿರುತ್ತದೆ.
2022ರ ಸಾಲಿನಲ್ಲಿ ಭಾರತದ ಯಶಸ್ವಿ ಟೆಸ್ಟ್ ಬ್ಯಾಟರ್ ಆಗಿರುವ ರಿಷಭ್ ಪಂತ್ ಅವರು ಟೆಸ್ಟ್ ಸರಣಿಯನ್ನು ಬಹುತೇಕ ಕಳೆದುಕೊಳ್ಳಲಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ಪಂತ್ ಈ ಬಾರಿ ಕೂಟ ಕಳೆದುಕೊಳ್ಳ ಬೇಕಾಗಬಹುದು.