ನವದೆಹಲಿ: ಅಮೆರಿಕದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸಂಚು ರೂಪಿಸಿರುವ ಆರೋಪ ಎದುರಿಸುತ್ತಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (52ವರ್ಷ) ಕುಟುಂಬ ಶುಕ್ರವಾರ (ಡಿಸೆಂಬರ್ 15) ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ:
ನಿಖಿಲ್ ಗುಪ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ನೆರವು ನೀಡಲು ಮತ್ತು ಜೆಕ್ ಅಧಿಕಾರಿಗಳ ಜತೆ ಮಧ್ಯಪ್ರವೇಶಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಗುಪ್ತಾ ಕುಟುಂಬ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಜೆಕ್ ರಿಪಬ್ಲಿಕ್ ಅಧಿಕಾರಿಗಳು ಗುಪ್ತಾ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ ಎಂದು ಕುಟುಂಬ ಸದಸ್ಯರು ವಾದಿಸಿದ್ದಾರೆ. ಕಾನೂನು ಪಾಲಿಸುವ ಭಾರತೀಯ ಪ್ರಜೆಯಾಗಿರುವುದರಿಂದ, ಪೆರುಗ್ವೆಯಲ್ಲಿರುವ ವಿದೇಶಿ ಜೈಲು ಸೌಲಭ್ಯದಲ್ಲಿ ಗುಪ್ತಾಗೆ ಜೀವ ಬೆದರಿಕೆ ಇದೆ ಎಂದು ಕುಟುಂಬದ ಅರ್ಜಿದಾರರು ಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಖಲಿಸ್ತಾನಿ ನಾಯಕ ಗುರು ಪತ್ವಂತ್ ಸಿಂಗ್ ನನ್ನು ಕೊಲ್ಲುವ ಸರ್ಕಾರದ ಸಂಚಿನಲ್ಲಿ ನಿಖಿಲ್ ಗುಪ್ತಾ ಶಾಮೀಲಾಗಿರುವುದಾಗಿ ಅಮೆರಿಕ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿ ಗುಪ್ತಾ ಅವರನ್ನು ಜೆಕ್ ಗಣರಾಜ್ಯದಲ್ಲಿ ಬಂಧಿಸಿ ಜೈಲಿಗೆ ಹಾಕಲಾಗಿತ್ತು.