Advertisement

ಪನ್ನೀರ್‌ಸೆಲ್ವಂಗೆ ಸಿಎಂ ಪಟ್ಟ?

03:45 AM Apr 23, 2017 | Team Udayavani |

ನವದೆಹಲಿ/ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡೂ ಬಣಗಳ ನಡುವಿನ ಮಾತುಕತೆ ಸಫ‌ಲವಾಗಿದ್ದು, ಎರಡೆಲೆಯ ವಿಲೀನ ಸನ್ನಿಹಿತವಾಗಿದೆ.

Advertisement

ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾಗೂ ಉಪಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್‌ರನ್ನು ಅಧಿಕೃತವಾಗಿ ವಜಾ ಮಾಡಲು ಸಿಎಂ ಪಳನಿಸ್ವಾಮಿ ಬಣ ಒಪ್ಪಿಗೆ ನೀಡಿದೆ. ಮಾಜಿ ಸಿಎಂ ಪನ್ನೀರ್‌ಸೆಲ್ವಂ ಅವರು ಹಾಕಿದ್ದ ಷರತ್ತುಗಳಿಗೆ ಪಳನಿ ಬಣ ಸಮ್ಮತಿಸಿದ್ದು, ಪನ್ನೀರ್‌ಸೆಲ್ವಂ ಅವರೇ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.

ಪನ್ನೀರ್‌ರನ್ನು ಸಿಎಂ ಆಗಿಯೂ, ಹಾಲಿ ಸಿಎಂ ಪಳನಿಸ್ವಾಮಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿಯೂ ನೇಮಕ ಮಾಡುವ ಕುರಿತು ಒಮ್ಮತ ವ್ಯಕ್ತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ವಿಜಯಭಾಸ್ಕರ್‌ ವಜಾ?: ಇನ್ನೊಂದೆಡೆ, ತಮಿಳುನಾಡು ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್‌ ಅವರನ್ನು ಸಂಪುಟದಿಂದ ಕಿತ್ತುಹಾಕುವ ಸಾಧ್ಯತೆಯೂ ದಟ್ಟವಾಗಿದೆ. ಆರ್‌.ಕೆ.ನಗರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಜಯಭಾಸ್ಕರ್‌ ಮನೆ ಮೇಲೂ ದಾಳಿ ನಡೆಸಿದ್ದರು. ಅಷ್ಟೇ ಅಲ್ಲ, ಶಶಿಕಲಾ ರೆಸಾರ್ಟ್‌ ರಾಜಕೀಯ ಮಾಡಿದಾಗ, ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿಹಾಕುವಲ್ಲಿ ವಿಜಯ ಭಾಸ್ಕರ್‌ ಮಹತ್ವದ ಪಾತ್ರ ವಹಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ ಪನ್ನೀರ್‌ಸೆಲ್ವಂ ಅವರು ವಿಜಯಭಾಸ್ಕರ್‌ರನ್ನು ವಜಾ ಮಾಡುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ತಿಳಿಸಿವೆ. 

ಚಿಹ್ನೆ ವಾಪಸ್‌ ಪಡೆಯುವುದೇ ಗುರಿ: ಈ ನಡುವೆ, ಚುನಾವಣಾ ಆಯೋಗವು ಮುಟ್ಟುಗೋಲು ಹಾಕಿಕೊಂಡಿರುವ ಪಕ್ಷದ ಚಿಹ್ನೆ ಎರಡೆಲೆಯನ್ನು ವಾಪಸ್‌ ಪಡೆಯುವುದೇ ಎರಡೂ ಬಣಗಳ ಮುಖ್ಯ ಉದ್ದೇಶ ಎಂದು ಸಚಿವ ಎಸ್‌.ಪಿ. ವೇಲುಮಣಿ ತಿಳಿಸಿದ್ದಾರೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ನಾವು ಪಕ್ಷದ ಚಿಹ್ನೆಗಾಗಿ ಒಂದಾಗಿದ್ದೇವೆ ಎಂದೂ ಅವರು ಹೇಳಿದ್ದಾರೆ.

Advertisement

ಆಯೋಗಕ್ಕೆ ಲಂಚ: ದಿನಕರನ್‌ ವಿಚಾರಣೆ
ಎರಡೆಲೆ ಚಿಹ್ನೆಯನ್ನು ತಮ್ಮದಾಗಿಸಿಕೊಳ್ಳಲು ಚುನಾವಣಾ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾದ ಎಐಎಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್‌ರನ್ನು ಶನಿವಾರ ನವದೆಹಲಿಯಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಹಣಕಾಸು ಅವ್ಯವಹಾರ, ಲಂಚ ಆರೋಪ, ಬೆಂಗಳೂರಿನ ಮಧ್ಯವರ್ತಿ ಸುಕೇಶ್‌ ಚಂದ್ರಶೇಖರ್‌ ಜತೆಗಿನ ಸಂಬಂಧ ಮತ್ತಿತರ ವಿಚಾರಗಳ ಬಗ್ಗೆ ಪ್ರಶ್ನಿಸಲಾಗಿದೆ. ಜತೆಗೆ, ನೀವು ಯಾವು ದಾದರೂ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ದ್ದೀರಾ ಎಂದೂ ಪ್ರಶ್ನಿಸಲಾಗಿದೆ. ಈ ವೇಳೆ, ಸುಕೇಶ್‌ ಎಂದರೆ ಯಾರೆಂದೇ ಗೊತ್ತಿಲ್ಲ ಎಂದು ದಿನಕರನ್‌ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿನಕರನ್‌ ಮತ್ತು ಸುಕೇಶ್‌ಗೆ ಪಾಟೀ ಸವಾಲು ಹಾಕುವ ಸಾಧ್ಯತೆಯಿದೆ.

ನಿವಾಸದ ಸುತ್ತಲೂ ಬಿಗಿಭದ್ರತೆ: ಚಾಣಕ್ಯಪುರಿಯ ಅಂತಾರಾಜ್ಯ ಘಟಕದ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ದೆಹಲಿ ಕ್ರೈಂ ಬ್ರಾಂಚ್‌ ಪೊಲೀಸರು ದಿನಕರನ್‌ರನ್ನು ವಿಚಾರಣೆ ನಡೆಸಿದರು. ದಿನಕರನ್‌ ಅವರ ವಾಟ್ಸ್‌ಆ್ಯಪ್‌ ಸಂದೇಶಗಳನ್ನೂ ಪರಿಶೀಲಿಸಲಾಯಿತು. ಈ ವೇಳೆ, ಒಳಬರಲು ಅವರ ವಕೀಲರಿಗೂ ಅವಕಾಶ ನೀಡಲಿಲ್ಲ. ಮಾಧ್ಯಮಗಳಿಗೂ ಪ್ರವೇಶ ನಿರಾಕರಿಸಲಾಯಿತು. ದಿನಕರನ್‌ ಮನೆಯ ಸುತ್ತ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಮಾಧ್ಯಮ ಪ್ರತಿನಿಧಿಗಳಿಗೂ ನಿಷೇಧ ಹೇರಲಾಗಿತ್ತು. ಸ್ಥಳೀಯರನ್ನೂ ಗುರುತಿನ ಚೀಟಿ ಪರಿಶೀಲಿಸಿ, ಬಿಡುತ್ತಿದ್ದ ಕಾರಣ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next