ಪಾಟ್ನಾ: ಬಾಲಿವುಡ್ ನ ಜನಪ್ರಿಯ ನಟ ಪಂಕಜ್ ತ್ರಿಪಾಠಿ ಅವರ ತಂದೆ ಪಂಡಿತ್ ಬನಾರಸ್ ತಿವಾರಿ(98) ಸೋಮವಾರ(ಆ.21 ರಂದು) ನಿಧನರಾಗಿದ್ದಾರೆ. ತಂದೆ ನಿಧನದ ಸುದ್ದಿಯನ್ನು ಕೇಳಿದ ಬಳಿಕ ನಟ ಪಂಕಜ್ ತ್ರಿಪಾಠಿ ಬಿಹಾರದ ಬೆಲ್‌ಸಂಡ್‌ನಲ್ಲಿರುವ ತಮ್ಮ ಗ್ರಾಮಕ್ಕೆ ಧಾವಿಸಿದ್ದಾರೆ.
ಬನಾರಸ್ ತಿವಾರಿ ಅವರು ಆರಂಭದಲ್ಲಿ ಒಬ್ಬ ಕೃಷಿಕ ಹಾಗೂ ಪೂಜಾರಿಯಾಗಿದ್ದರು. ಬೆಲ್‌ಸಂಡ್ ನಲ್ಲಿ ಪತ್ನಿಯೊಂದಿಗೆ ಬನಾರಸ್ ಅವರು ವಾಸಿಸುತ್ತಿದ್ದರು.
ಪಂಕಜ್ ತ್ರಿಪಾಠಿ ಅವರ ತಂದೆ ನಿಧನದ ಸುದ್ದಿಯನ್ನು ಅವರ ಕುಟುಂಬಸ್ಥರು ಅಧಿಕೃತಗೊಳಿಸಿದ್ದು, ಸೋಮವಾರ (ಆ.21 ರಂದು) ಅವರ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಹೇಳಿದ್ದಾರೆ.
“ನನ್ನ ತಂದೆಗೆ ನಾನು ವೈದ್ಯನಾಗಬೇಕೆಂದು ಕನಸಿತ್ತು. ನನ್ನ ಗ್ರಾಮದಲ್ಲಿ (ಉತ್ತರ ಬಿಹಾರದ ಗೋಪಾಲಗಂಜ್) ಜನರಿಗೆ ಡಾಕ್ಟರ್ ಹಾಗೂ ಇಂಜಿನಿಯರ್ ಎರಡೂ ವೃತ್ತಿ ಮಾತ್ರ ಗೊತ್ತಿದೆ. ನಾನೊಬ್ಬ ರೈತನ ಮಗ. ನನ್ನ ಗ್ರಾಮದಲ್ಲಿ ಇಂದಿಗೂ ಉತ್ತಮವಾಗಿ ನಿರ್ಮಿಸಲಾದ ರಸ್ತೆಗಳಿಲ್ಲ” ಎಂದು ಸಂದರ್ಶನವೊಂದರಲ್ಲಿ ಪಂಕಜ್ ತ್ರಿಪಾಠಿ ಹೇಳಿದ್ದರು.
“ನನ್ನ ತಂದೆಗೆ ನಟನಾ ವೃತ್ತಿ ಬಗ್ಗೆ ತಿಳಿದಿರಲಿಲ್ಲ. ನನ್ನ ಸಾಧನೆ ಬಗ್ಗೆ ಅವರಿಗೆ ತುಂಬಾ ಹೆಮ್ಮೆಯೇನಿಲ್ಲ.ನಾನು ಸಿನಿಮಾದಲ್ಲಿ ಏನು ಮಾಡುತ್ತೇನೆ ಮತ್ತು ಹೇಗೆ ಮಾಡುತ್ತೇನೆ ಎಂಬುದು ನನ್ನ ತಂದೆಗೆ ಗೊತ್ತಿಲ್ಲ. ಇಲ್ಲಿಯವರೆಗೆ, ಚಿತ್ರಮಂದಿರವು ಒಳಗಿನಿಂದ ಹೇಗೆ ಕಾಣುತ್ತದೆ ಎಂಬುದನ್ನು ಅವರು ನೋಡಿಲ್ಲ. ಯಾರಾದರೂ ತಮ್ಮ ಕಂಪ್ಯೂಟರ್‌ನಲ್ಲಿ ಅಥವಾ ಇತ್ತೀಚೆಗೆ ನನ್ನ ಮನೆಯಲ್ಲಿ ಸ್ಥಾಪಿಸಲಾದ ದೂರದರ್ಶನದಲ್ಲಿ ತೋರಿಸಿದರೆ ಮಾತ್ರ ಅವರು ನನ್ನ ಕೆಲಸವನ್ನು ನೋಡುತ್ತಾರೆ” ಎಂದು ಇತ್ತೀಚೆಗೆ ಪಂಕಜ್ ತ್ರಿಪಾಠಿ ಹೇಳಿದ್ದರು.