Advertisement

ಪಂಜಿಗುಡ್ಡೆ ಅಂಗನವಾಡಿ ಕೇಂದ್ರ ಶಿಥಿಲ

02:45 AM Jun 30, 2018 | Karthik A |

ವಿಶೇಷ ವರದಿ – ಕೆಯ್ಯೂರು: ಒಂದೆಡೆ ಸರಕಾರದ ಹೈಟೆಕ್‌ ಅಂಗನವಾಡಿ ಕನಸು ಬಿತ್ತಿದೆ. ಅದರೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಪಂಜಿಗುಡ್ಡೆ ಅಂಗನವಾಡಿಯಲ್ಲಿ ಮಳೆ ಬಂದರೆ ಮಕ್ಕಳು ಮೇಜಿನ ಅಡಿಯಲ್ಲಿ ರಕ್ಷಣೆ ಪಡೆಯುತ್ತಾರೆ. ಛಾವಣಿಯ ತಗಡು ತೂತಾಗಿದೆ. ಬಿರುಕು ಬಿಟ್ಟ ಗೋಡೆಯ ಕಿಂಡಿ ಮುಚ್ಚಲು ಅಡಿಕೆ ಮರದ ಸಲಾಕೆ, ಕಂಬಳಿ ಮಾದರಿಯ ಬಟ್ಟೆ ಬಳಸಲಾಗಿದೆ. ಒಳಗೆ ಮರದ ಕಂಬಗಳು ಗೆದ್ದಲು ಹಿಡಿದಿವೆ. ಮಕ್ಕಳು ಕುಳಿತುಕೊಳ್ಳುವ ನೆಲ ಸಣ್ಣ ಮಳೆಗೂ ಸಂಪೂರ್ಣ ಒದ್ದೆಯಾಗುತ್ತದೆ. ಗುಡಿಸಲಿಗಿಂತಲೂ ಕಡೆಯಾದ ಅಂಗನವಾಡಿಯಲ್ಲಿ ಮಕ್ಕಳ ಸುರಕ್ಷತೆ ಹೆತ್ತವರಿಗೆ ಚಿಂತೆ ತಂದಿದೆ.

Advertisement

ಕನಿಷ್ಠ ಸೌಕರ್ಯವೂ ಇಲ್ಲ
ಕಟ್ಟಡದಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ, ಕೆಂಪು ಕಲ್ಲಿನಿಂದ ಕಟ್ಟಿದ ಕಟ್ಟಡದ ಗೋಡೆ ಅಪೂರ್ಣವಾಗಿದೆ. ಈಗಿರುವ ಗೋಡೆ ಜೋರಾಗಿ ಬೀಸುವ ಗಾಳಿಗೆ ಬೀಳುವ ಸ್ಥಿತಿಯಲ್ಲಿದೆ. ಇದರ ಮಧ್ಯೆ ಇರುವ ಮರದ ಕಂಬಗಳು ಗೆದ್ದಲು ಹುಳುಗಳಿಗೆ ಆಹಾರವಾಗುತ್ತಿವೆ. ಅಂಗನವಾಡಿಯ ಪರಿಸರವೂ ಉತ್ತಮವಾಗಿಲ್ಲ. ಜಗಲಿಯ ಸುತ್ತಲೂ ಪೊದೆ ತುಂಬಿದ್ದು, ಮಳೆಗಾಲದಲ್ಲಿ ಅಲ್ಲಲ್ಲಿ ನೀರು ತುಂಬಿ ಸೊಳ್ಳೆಗಳ ಕಾಟವೂ ಪುಟಾಣಿಗಳಿಗೆ ಕಾಡುತ್ತಿದೆ. ಸೊಳ್ಳೆಗಳಿಂದ ದೇಹ ರಕ್ಷಿಸಿಕೊಳ್ಳಲು ಕೇಂದ್ರದ ಕಿಟಕಿಗಳಿಗೆ ಸುರಕ್ಷಾ ಪರದೆಯೂ ಒದಗಿಸಿಲ್ಲ.


2,000 ರೂ. ಅನುದಾನ!

ಪಂಜಿಗುಡ್ಡೆ ಅಂಗನವಾಡಿಗೆ ಅನುದಾನದ ರೂಪದಲ್ಲಿ ಪಂಚಾಯತ್‌ ವತಿಯಿಂದ 2,000 ರೂ. ಮಾತ್ರ ಸಿಕ್ಕಿದೆ. ಹೊರತಾಗಿ ಕಟ್ಟದ ದುರಸ್ತಿಗೆ ಅಥವಾ ಹೊಸ ಕಟ್ಟಡಕ್ಕೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಪ್ರಸ್ತುತ ಕಟ್ಟದ ಛಾವಣಿ ದುರಸ್ತಿಗೊಳಿಸಲು ಅನುದಾನಕ್ಕೆ ಮನವಿ ಮಾಡಲಾಗಿತ್ತು. ಆದರೆ ನಿರೀಕ್ಷಿಸಿದ್ದ ಅನುದಾನ ಲಭ್ಯವಾಗಲೇ ಇಲ್ಲ. ಮಳೆಗಾಲದಲ್ಲಿ ನೀರಿನಿಂದ ರಕ್ಷಿಸಿಕೊಳ್ಳಲು ಒಂದು ಟಾರ್ಪಲ್‌ ಒದಗಿಸುವಂತೆ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 

ವಿದ್ಯುತ್‌ ಇಲ್ಲ
ಸರಕಾರದಿಂದ ಅಂಗನವಾಡಿ ಮಕ್ಕಳಿಗೆ ಸಿಗುವ ಎಲ್ಲ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತದೆ. ಆದರೆ ಪೌಷ್ಟಿಕ ಆಹಾರ ತಯಾರಿಸುವ ಕೊಠಡಿ ಗುಡಿಸಲಿನಂತಿದ್ದು ದುಃಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಕೊಠಡಿಗೆ ತೇವಾಂಶ ಬರುತ್ತಿದ್ದು, ಇದರಿಂದ ಆಹಾರ ಧಾನ್ಯಗಳು ಹಾಳಾಗುತ್ತಿದೆ. ಮಕ್ಕಳಿಗೂ ತೇವಾಂಶದಿಂದ ಕೂಡಿದ ನೆಲದಲ್ಲಿ ಕುಳಿತುಕೊಳ್ಳಲು ಕಷ್ಠವಾಗುತ್ತಿದೆ. ವಿದ್ಯುತ್‌ ಸೌಲಭ್ಯದಿಂದ ವಂಚಿತವಾಗಿರುವ ಕಟ್ಟಡಕ್ಕೆ ದಾನಿಯೋಬ್ಬರು ನೀಡಿದ ಸೋಲಾರ್‌ ದೀಪವೇ ಆಶ್ರಯವಾಗಿದೆ. ಉಳಿದಂತೆ ಕತ್ತಲೆ ಯಲ್ಲೇ ವಿದ್ಯಾರ್ಥಿಗಳಿಗೆ ಬೆಳಕಿನ ಪಾಠ.

3 ಸೆಂಟ್ಸ್‌ ಜಾಗ
ಒಂದೂವರೆ ವರ್ಷದ ಹಿಂದೆ ಅಂಗನವಾಡಿಗೆ 3 ಸೆಂಟ್ಸ್‌ ಜಾಗದ ಪಹಣಿ ಪತ್ರ ಸಿಕ್ಕಿದೆ. ಆದರೆ ಅಂಗನವಾಡಿ ಕೇಂದ್ರ ಸಮಸ್ಯೆಯ ಬಗ್ಗೆ ಪ್ರತಿಗ್ರಾಮ ಸಭೆಗಳಲ್ಲಿ ಈ ಭಾಗದ ಜನರು ಮನವಿ ಸಲ್ಲಿಸುತ್ತಿದ್ದು, ಫ‌ಲಿತಾಂಶ ಮಾತ್ರ ಶೂನ್ಯ. ಕೋಟಿ-ಕೋಟಿ ಅನುದಾನ ಮಂಜೂರುಗೊಳಿಸಿದ ಲೆಕ್ಕ ಕೊಡುತ್ತಿರುವ ಜನಪ್ರತಿನಿಧಿಗಳಿಗೆ ಪಂಜಿಗುಡ್ಡೆ ಅಂಗನವಾಡಿ ಕಟ್ಟಡಕ್ಕೆ ಅನುದಾನ ನೀಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಶಿಕ್ಷಣಾಭಿಮಾನಿಗಳು. 

Advertisement

ಹುದ್ದೆಗಳು ಭರ್ತಿಯಾಗಿವೆ
ಇಲ್ಲಿನ ಅಂಗನವಾಡಿ ಕಾರ್ಯಕರ್ತೆ, ಸಹಾ ಯಕಿ ಹುದ್ದೆಗಳು ಭರ್ತಿಯಾಗಿವೆ. ಇರುವ ವ್ಯವಸ್ಥೆಯಲ್ಲಿ ಮಕ್ಕಳನ್ನು ಚಟುವಟಿಕೆಯಿಂದ ತೊಡಗಿಸಿಕೊಳ್ಳಲು ಪಯತ್ನ ಮಾಡಿದರೂ ಇಲ್ಲಿನ ಮೂಲಸೌಕರ್ಯ ಅಡ್ಡಿಯಾಗಿದೆ.

ಪಂಜಿಗುಡ್ಡೆ ಅಂಗನವಾಡಿ
2009ರಲ್ಲಿ ಪಂಜಿಗುಡ್ಡೆ, ಪಲ್ಲತ್ತಡ್ಕ, ವ್ಯಾಪ್ತಿಯ ಮಕ್ಕಳ ಅನುಕೂಲಕ್ಕೆ ಪಂಜಿಗುಡ್ಡೆಯಲ್ಲಿ ಅಂಗನವಾಡಿ ಸ್ಥಾಪಿಸಲಾಗಿತ್ತು. ಮೂರು ವರ್ಷಗಳ ಹಿಂದೆ ತಾತ್ಕಾಲಿಕವಾಗಿ ನಿರ್ಮಿಸಿದ ಕೊಠಡಿಯೊಳಗೆ ಕುಳಿತುಕೊಳ್ಳುತ್ತಾರೆ. ಆರಂಭದಲ್ಲಿ 16 ಇದ್ದ ಮಕ್ಕಳ ಸಂಖ್ಯೆ ಈಗ 10ಕ್ಕೆ ಇಳಿದಿದೆ. ನಿತ್ಯ ಬರುವ ಮಕ್ಕಳ ಸಂಖ್ಯೆ 7. ಈ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಹೆತ್ತವರೂ ಆತಂಕ ವ್ಯಕ್ತಪಡಿಸುತ್ತಾರೆ.

ಮಾಹಿತಿ ಇಲ್ಲ
ಸ್ವಂತ ಕಟ್ಟಡ ಕಟ್ಟಲು ಜಾಗದ ಸಮಸ್ಯೆ ಇತ್ತು. ಈ ಕಾರಣದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೂತನ ಕಟ್ಟಡಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಮಹಿತಿ ಬಂದಿಲ್ಲ. 
– ಬಾಬು ಬಿ., ಅಧ್ಯಕ್ಷರು, ಕೆಯ್ಯೂರು ಗ್ರಾ.ಪಂ.

ಪಹಣಿ ಪತ್ರ ತಡವಾಯಿತು
ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖಾ ಅಧಿಕಾರಿ ಜತೆ ಮತನಾಡಿದಾಗ, ಸ್ಟೇಟ್‌ ಫ‌ಂಡ್‌ ನಿಯೋಗಕ್ಕೆ ಕಳುಹಿಸಲಾಗಿದೆ. ಅದಕಾರಣ ಹಣ ಕೂಡಲೇ ಕೆಲಸ ಮಾಡಿಸುತ್ತೇವೆ. ಪಹಣಿ ಪತ್ರ ಸಿಗಲು ತಡವಾದ ಕಾರಣ ಕುಂಠಿತವಾಯಿತು. 
– ಅನಿತಾ ಹೇಮನಾಥ ಶೆಟ್ಟಿ, ಜಿ. ಪಂ. ಸದಸ್ಯರು, ಮಕ್ಕಳ ಮತ್ತು ಆ. ಸ್ಥಾಯೀ ಸಮತಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next