ಬೀದರ: ಲಾಕ್‌ಡೌನ್ ವಿಸ್ತರಣೆ ಜೀವನ ಶೈಲಿಯಲ್ಲಿ ಬದಲಾವಣೆಗೆ ಕಾರಣವಾಗುವ ಜತೆಗೆ ಸೃಜಶೀಲತೆ ಕಲಿಸುತ್ತಿದೆ. ಮನೆಯಲ್ಲೇ ಬಂಧಿಯಾಗಿರುವ ಬಿಸಿಲೂರಿನ ಸಾರ್ವಜನಿಕರು ಬಗೆಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುತ್ತ, ಕುಟುಂಬದೊಂದಿಗೆ ಸವೆದು ಹೋಟೆಲ್ ತಿಂಡಿಗಳ ರುಚಿ ಅನುಭವ ಪಡೆಯುತ್ತಿದ್ದಾರೆ.
ಹೌದು, ಸಾವಿನ ರಣಕೇಕೆ ಹಾಕುತ್ತ ಭೀತಿ ಹೆಚ್ಚಿಸುತ್ತಿರುವ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ 3 ವಿಸ್ತರಣೆಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲರೂ ಮನೆಯಲ್ಲೇ ಲಾಕ್ ಆಗಿದ್ದು, ಕೆಲವು ಓದುವುದು ಮತ್ತು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ಅಡುಗೆ ಕಲಿಕೆಯಲ್ಲಿ ದಿನ ಕಳೆಯುತ್ತಿದ್ದಾರೆ. ಲಾಕ್‌ಡೌನ್‌ದಿಂದಾಗಿ ಪ್ರತಿದಿನ ಮನೆ ಊಟ ಮಾಡಿ ಕೆಲವರಿಗೆ ಬೇಸರವಾಗುವುದು ಸಹಜ. ಒಂದು ದಿನ ಹೋಟೆಲ್, ಚಾಟ್ ಅಂಗಡಿಗೆ ಹೋಗುವಂತಿಲ್ಲ, ಇಷ್ಟಪಟ್ಟು ತಿಂಡಿ ತಿನ್ನುವಂತಿಲ್ಲ. ಹಾಗಂತ ತಮಗಿಷ್ಟವಾದ ತಿಂಡಿ ತಿನ್ನುವ ಅಭ್ಯಾಸ ಮಾತ್ರ ತಪ್ಪಿಸಿಲ್ಲ. ಮನೆಯಲ್ಲೇ ಬೇಕಾದ ತಿಂಡಿ ಮಾಡುತ್ತಿದ್ದಾರೆ. ಇವುಗಳ ಕಲಿಕೆಗಾಗಿ “ಯು ಟ್ಯೂಬ್’ ರೆಸಿಪಿಗಳ ಮೊರೆ ಹೋಗುತ್ತಿದ್ದಾರೆ.
ಮನೆಯಲ್ಲಿಯೇ ತಯಾರು: ಪಾನಿ ಪೂರಿ ಎಂದಾಕ್ಷಣ ಬಾಯಲ್ಲಿ ನೀರು ತರಿಸುವ ತಿಂಡಿ ಪ್ರತಿಯೊಬ್ಬರಿಗೂ ಇಷ್ಟ. ಮಕ್ಕಳಿಂದ ಹಿಡಿದು ಎಲ್ಲರೂ ವಾರದಲ್ಲಿ ಒಮ್ಮೆಯಾದರೂ ಚಾಟ್ ಅಂಗಡಿಗೆ ಭೇಟಿ ಕೊಟ್ಟು ಸೇವಿಸುವುದು ಸಾಮಾನ್ಯ. ಆದರೆ, ಲಾಕ್‌ಡೌನ್‌ಗೂ ಮುನ್ನವೇ ಚಾಟ್ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ತಿನ್ನಲೇಬೇಕೆಂದು ಮಕ್ಕಳು ಹಠ ಹಿಡಿಯುವುದರಿಂದ ಪೋಷಕರು ಮನೆಯಲ್ಲೇ ಪಾನಿಪೂರಿ ತಯಾರಿಸುತ್ತಿದ್ದಾರೆ. ಈ ಮೂಲಕ ಕುಟುಂಬದವರ ಜತೆ ತಿಂಡಿ ಸವಿಯುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವೆಡೆ ಕೆಲಸ ಇಲ್ಲದೇ ಸಂಕಷ್ಟದಲ್ಲಿರುವ ಪಾನಿಪೂರಿ ವ್ಯಾಪಾರಿಗಳು ಮನೆಯಲ್ಲೇ ಪೂರಿ ಮಾಡಿ ಅದನ್ನು ಪ್ಯಾಕೆಟ್ ರೂಪದಲ್ಲಿ ಇತರ ಮನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲ, ಪಾವ್ ಭಾಜಿ, ಗೋಬಿ ಮಂಚೂರಿ ಸೇರಿ ಬಗೆ ಬಗೆಯ ಚಾರ್ಟ್ ತಿಂಡಿಗಳು ಮನೆಯಲ್ಲೇ ರೆಡಿಯಾಗುತ್ತಿರುವುದು ವಿಶೇಷ.
ಲಾಕ್‌ಡೌನ್ ವೇಳೆಯಲ್ಲಿಯೂ ಹುಟ್ಟು ಹಬ್ಬ ಮತ್ತು ಮದುವೆ ವಾರ್ಷಿಕೋತ್ಸವ ಸಂಭ್ರಮಕ್ಕೆ ಅಡ್ಡಿ ಆಗಿಲ್ಲ. ಬೇಕರಿಗಳು ಬಂದ್ ಆಗಿರುವುದರಿಂದ ಕೇಕ್‌ಗಳು ಸಿಗುತ್ತಿಲ್ಲ. ಹಾಗಾಗಿ ಇದಕ್ಕೂ ಪರ್ಯಾಯ ಕಂಡುಕೊಂಡಿರುವ ಜನರು ಮನೆಯಲ್ಲೇ ಕೇಕ್ ತಯಾರಿಸಿ ವಿಶೇಷ ದಿನಗಳನ್ನು ಆಚರಿಸುವುದು ಹೆಚ್ಚುತ್ತಿದೆ. ಬಿಸ್ಕಿಟ್, ಹಾಲು ಮತ್ತು ಹಣ್ಣುಗಳನ್ನು ಬಳಸಿ ಕೇಕ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಲಾಕ್‌ಡೌನ್‌ದಿಂದ ಮನೆಯಲ್ಲೇ ಬಗೆ ಬಗೆಯ ತಿಂಡಿ ಕಲಿಯಲು ಸಹಾಯವಾಗುತ್ತಿದೆ. ಯು ಟ್ಯೂಬ್ ಸಹಾಯದಿಂದ ಮನೆಯಲ್ಲೇ ಹೋಟೆಲ್ ಶೈಲಿಯಲ್ಲಿ ತಿಂಡಿಗಳನ್ನು ತಯಾರಿಸಲಾಗುತ್ತಿದೆ. ಮುಖ್ಯವಾಗಿ ಪಾನಿಪೂರಿಯನ್ನು ಮನೆಯಲ್ಲೇ ಮಾಡಿ ಮಕ್ಕಳ ಆಸೆ ಈಡೇರಿಸಿದ್ದೇನೆ. ನಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಮಕ್ಕಳೇ ಮನೆಯಲ್ಲಿ ಕೇಕ್ ಸಿದ್ಧಪಡಿಸಿ ಸಂಭ್ರಮಿಸಿದ್ದಾರೆ.
-ರೇಖಾ ಸಂಗಮೆ, ಗೃಹಿಣಿ, ಬೀದರ
-ಶಶಿಕಾಂತ ಬಂಬುಳಗೆ