ಕಟಪಾಡಿ: ರಾಷ್ಟ್ರಪತಿ ಮೇಲಿನ ಅಭಿಮಾನದಿಂದ ಪಾನಿಪೂರಿ ವ್ಯಾಪಾರಿಯೊಬ್ಬರು 10 ರೂ.ಗೆ ಪಾನಿಪೂರಿ ಮಾರಾಟ ಮಾಡುವ ಮೂಲಕ ಪಾನಿಪೂರಿ ಪ್ರಿಯರಿಗೆ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಜೊತೆಗೆ ಮಕ್ಕಳಿಗೂ ರಾಷ್ಟ್ರಪ್ರೇಮದ ಅರಿವು ಮೂಡಿಸಿದ್ದಾರೆ.
ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಪಾನಿಪೂರಿ ವ್ಯಾಪಾರ ಮಾಡುವ ಒಡಿಸ್ಸಾ ಮೂಲದ ಯುಧಿಷ್ಠಿರ ಶೆಟ್ಟಿ ಕಳೆದ 7 ವರ್ಷಗಳಿಂದ ದಿನನಿತ್ಯ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ನಡೆಸುತ್ತಿದಾರೆ.
ಆದರೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತನ್ನೂರಿನ ಹೆಮ್ಮೆಯ ಪುತ್ರಿ ಎಂಬ ಗೌರವದ ಮನೋಭಾವನೆಯಿಂದ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಾಗಿ ಬೆಳಿಗ್ಗೆ 10 ಗಂಟೆಯಿಂದಲೇ ವ್ಯಾಪಾರ ಆರಂಭಿಸಿದ್ದು, ರಾತ್ರಿ 11 ಗಂಟೆಯವರೆಗೂ ವ್ಯಾಪಾರ ನಡೆಸಲಿದ್ದಾರೆ.
ಪಾನಿಪೂರಿಗೆ ಪ್ಲೇಟೊಂದರ ದರ 30 ರೂ. ಇದ್ದರೂ ಈ ಸ್ವಾತಂತ್ರ್ಯ ಸಂಭ್ರಮದ ಕೊಡುಗೆಯಾಗಿ ಕೇವಲ 10 ರೂ.ಗೆ ಪಾನಿಪೂರಿ ನೀಡುವ ಮೂಲಕ ಪಾನಿಪುರಿ ಪ್ರಿಯರಿಗೆ 77ನೇ ಸ್ವಾತಂತ್ರ್ಯೋತ್ಸವದ ಧಮಾಕ ಲಭಿಸಿದಂತಾಗಿದೆ.
ಸ್ವಾತಂತ್ರ್ಯೂತ್ಸವದ ಪ್ರಯುಕ್ತ ಇಂದು ಬೆಳಿಗ್ಗಿನಿಂದಲೇ ಮಕ್ಕಳು, ಮಹಿಳೆಯರು, ಯುವಕರ ಸಹಿತ ಸಾರ್ವಜನಿಕರು 10 ರೂ. ಬೆಲೆಯ ಪಾನಿಪೂರಿ ರುಚಿ ಸವಿಯಲು ಮುಗಿ ಬಿದ್ದಿರುವುದು ಕಂಡು ಬಂತು.