Advertisement

ಪಾಂಗಾಳ ತುಂಗರಬೈಲು: ಅಧಿಕಾರಿಗಳ, ಜನಪ್ರತಿನಿಧಿಗಳ ತಂಡ ಭೇಟಿ

04:34 PM Jun 28, 2023 | Team Udayavani |

ಕಟಪಾಡಿ: ಅಳಿದುಳಿದ ಕಾಲು ಸಂಕದ ಅವಯವಗಳ ಅವಶೇಷದ ಮೇಲೆಯೇ ಹರಸಾಹಸಪಟ್ಟು ಶವದಹನಕ್ಕೆ ಪಾರ್ಥಿವ ಶರೀರವನ್ನು ಸಾಗಿಸಿದ ಪ್ರದೇಶಕ್ಕೆ ಪಿಆರ್‌ಇಡಿ ಮತ್ತು ಸಣ್ಣ ನೀರಾವರಿ ಇಲಾಖೆ, ಇನ್ನಂಜೆ ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳ ತಂಡ ಜೂ.26 ಮತ್ತು ಜೂ. 27ರಂದು ಭೇಟಿ ನೀಡಿರುತ್ತಾರೆ.

Advertisement

ಪಾಂಗಾಳ ಗುಡ್ಡೆ ತುಂಗರಬೈಲು ಎಂಬಲ್ಲಿ ಲಲಿತಾ ಎಂಬವರು ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರದ ಅಂತಿಮ ಪ್ರಕ್ರಿಯೆಯನ್ನು ನಡೆಸಲು ಕೋಟೆ ಗ್ರಾ.ಪಂ.ನ ರುದ್ರಭೂಮಿಗೆ ಕೊಂಡೊಯ್ಯಲು ಈ ಹರಸಾಹಸ ನಡೆದಿತ್ತು ಎಂಬ ವರದಿಯನ್ನು ಉದಯವಾಣಿ ಸುದಿನ ಜೂ.26ರಂದು ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಭೇಟಿಯು ನಡೆದಿದೆ.

ಅಂದಾಜು30 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಕಾಲು ಸಂಕವು ಇದೀಗ ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಎಲ್ಲ ಕೆಲಸ ಕಾರ್ಯಗಳಿಗೆ ಅನಿವಾರ್ಯವಾಗಿ ಈ ಭಾಗದ ಜನತೆ ಇದೇ ಅಳಿದುಳಿದ ಕಾಲು ಸಂಕವನ್ನು ಅವಲಂಭಿಸಬೇಕಾದ ಅನಿವಾರ್ಯತೆ ಇದೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿ ಗಳು ಎಚ್ಚೆತ್ತು ಅಳಿದುಳಿದ ಅವಶೇಷಗಳನ್ನು ತೆಗೆದು ಸುಸಜ್ಜಿತ ಕಾಲು ಸೇತುವೆ ನಿರ್ಮಿಸಿ ತುಂಗರಬೈಲು ಭಾಗದ ನಿವಾಸಿಗಳ ಸುಗಮ ಸಂಚಾರಕ್ಕೆ ಸುವ್ಯವಸ್ಥೆಯನ್ನು ಕಲ್ಪಿಸುವಂತೆ ನಾಗರಿಕರ ಆಗ್ರಹವನ್ನು ಪ್ರಕಟಿಸಲಾಗಿತ್ತು.
ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಮಮತಾ, ಇನ್ನಂಜೆ ಗ್ರಾ.ಪಂ. ಪಿಡಿಒ ಚಂದ್ರಕಲಾ, ಕಾರ್ಯದರ್ಶಿ ಚಂದ್ರಶೇಖರ್‌ ಸಾಲ್ಯಾನ್‌, ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಆಚಾರ್ಯ, ಸದಸ್ಯರಾದ ಸೋನು ಪಾಂಗಾಳ, ಮಾಲಿನಿ ಶೆಟ್ಟಿ, ಸ್ಥಳೀಯರು ಉಪಸ್ಥಿತರಿದ್ದರು.

ಇಲ್ಲಿನ ಸಮಸ್ಯೆಯ ಬಗ್ಗೆ ಸರಕಾರದ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಸಚಿವರ ಗಮನ ಸೆಳೆದು ಇಲಾಖೆಯ ಮೂಲಕ ಇಲ್ಲಿನ ಕಾಮಗಾರಿಯನ್ನು ನಡೆಸಿ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು ಕ್ಷೇತ್ರ

ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಇಲ್ಲಿ ಬ್ಯಾಕ್‌ ವಾಟರ್‌ ಬರುವುದರಿಂದ ಅಲ್ಲಿ ವೆಂಟೆಡ್‌ ಡ್ಯಾಂ ನಿರ್ಮಾಣಕ್ಕೆ ಸೂಕ್ತ ಅಲ್ಲ ಎಂದು ತಿಳಿಸಲಾಗಿದೆ.
– ಮಮತಾ, ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

Advertisement

ಶಾಸಕರ ಕಚೇರಿಯಿಂದ ಬಂದ ಮಾಹಿತಿಯನ್ವಯ ಈ ಬಗ್ಗೆ ಸ್ಥಳವನ್ನು ಪರಿಶೀಲನೆ ನಡೆಸಲಾಗಿದ್ದು, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯಲ್ಲಿ 30 ಲಕ್ಷ ರೂ. ಲೈನ್‌ ಎಸ್ಟಿಮೇಟ್‌ ಮಾಡಿ ಕಾಪು ಶಾಸಕರ ಕಚೇರಿಗೆ ಸಲ್ಲಿಸಲಾಗಿದೆ. ಇನ್ನು ಶಾಸಕರು ಗ್ರ್ಯಂಟ್‌ ಇರಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕಿದೆ.
-ಸುನಿಲ್‌, ಅಸಿಸ್ಟೆಂಟ್‌ ಎಂಜಿನಿಯರ್‌, ಪಿಆರ್‌ಇಡಿ

Advertisement

Udayavani is now on Telegram. Click here to join our channel and stay updated with the latest news.

Next