ಕಾಪು : ಪಾಂಗಾಳ ಶರತ್ ಶೆಟ್ಟಿ ಕೊಲೆ ವಿಚಾರಕ್ಕೆ ಸಂಬಂಧಿಸಿ ಬಿರುಸಿನ ತನಿಖೆಯ ವೇಳೆ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು ಆರೋಪಿಗಳ ಬೆನ್ನತ್ತಿ ತೀವ್ರ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕಳೆದ ರವಿವಾರ ಸಂಜೆ ಶರತ್ ಶೆಟ್ಟಿ ಅವರನ್ನು ಪಾಂಗಾಳದ ಅಂಗಡಿಯೊಂದರ ಬಳಿಗೆ ಮಾತುಕತೆಗೆ ಕರೆದ ಯುವಕರ ತಂಡ ಬಳಿಕ ಅಲ್ಲೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿತ್ತು. ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತತ್‌ಕ್ಷಣದಿಂದಲೇ ಚುರುಕಿನ ತನಿಖೆ ಮುಂದುವರಿಸಿದ್ದರು.
ಹತ್ಯೆಗೆ ಸಂಬಂಧಿಸಿ ಸಂಶಯದ ಮೇರೆಗೆ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರಿಗೆ ಮಹತ್ವದ ವಿಚಾರಗಳು ದೊರಕಿವೆಯಾದರೂ ಅದನ್ನು ಇನ್ನೂ ಧೃಡಪಡಿಸಿಲ್ಲ. ಪ್ರಮುಖ ಆರೋಪಿಗಳ ಬೆನ್ನತ್ತಿರುವ ಪೊಲೀಸರಿಗೆ ಹತ್ಯೆಯ ಹಿಂದೆ ಹೊರಗಿನ ವ್ಯಕ್ತಿಗಳ ಕೈವಾಡ ಇರುವ ಬಗ್ಗೆಯೂ ಸುಳಿವು ಲಭ್ಯವಾಗಿದ್ದು ಆ ಆಯಾಮದಲ್ಲೂ ತನಿಖೆಯನ್ನು ಮುಂದುವರಿಸಿದ್ದಾರೆ.
ಉಡುಪಿ ಎಸ್ಪಿ, ಅಡಿಷನಲ್ ಎಸ್ಪಿ, ಕಾರ್ಕಳ ಡಿವೈಎಸ್ಪಿ ಸಹಿತ ಮೇಲಧಿಕಾರಿಗಳು ಕಾಪು ವೃತ್ತ ನಿರೀಕ್ಷಕರ ಕಛೇರಿಗೆ ಪದೇ ಪದೇ ಭೇಟಿ ನೀಡುತ್ತಿದ್ದು ವೃತ್ತ ನಿರೀಕ್ಷಕ ಕೆ. ಸಿ. ಪೂವಯ್ಯ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಹತ್ಯೆಯ ಹಿಂದಿನ ಸಂಪೂರ್ಣ ಚಿತ್ರಣ ಹೊರ ಬೀಳುವ ಸಾಧ್ಯತೆಗಳಿವೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಾಪು: ಸ್ಕೂಟಿ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಯುವ ಛಾಯಾಚಿತ್ರಗ್ರಾಹಕ ಸಾವು