ಬಾಗಲಕೋಟೆ: ರಾಜ್ಯ ಸರ್ಕಾರ ಅಧಿವೇಶನದ ವೇಳೆ ಚುಕ್ಕೆ ಗುರುತಿಲ್ಲದ ಪ್ರಶ್ನೆಯಡಿ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿ ಕುರಿತು ನೀಡಿದ್ದ ಭರವಸೆಗಳ ಕುರಿತು ಕರ್ನಾಟಕ ವಿಧಾನ ಪರಿಷತ್‌ನ ಸರ್ಕಾರಿ ಭರವಸೆಗಳ ಸಮಿತಿ ಗುರುವಾರ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಪರಿಶೀಲನೆ ನಡೆಸಿತು.
ಸಮಿತಿ ಸದಸ್ಯರೂ ಆಗಿರುವ ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ಬಸವರಾಜ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ, ಎಂ.ಎ. ಗೋಪಾಲಸ್ವಾಮಿ ಹಾಗೂ ಪ್ರವಾಸೋದ್ಯಮ ಇಲಾಖೆ, ವಿಧಾನ ಪರಿಷತ್ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು.
ಮೊದಲಿಗೆ ಬಾದಾಮಿಯ ಗುಹಾಂತರ ದೇವಾಲಯಗಳಿಗೆ ಭೇಟಿ ನೀಡಿ ವೀಕ್ಷಿಸಿ, ಅಲ್ಲಿಂದ ಬನಶಂಕರಿಗೆ ತೆರಳಿ ಬನಶಂಕರಿದೇವಿ ದರ್ಶನ ಪಡೆದರು. ಬಳಿಕ ಶಿವಯೋಗ ಮಂದಿರಕ್ಕೆ ತೆರಳಿ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಗದ್ದುಗೆ ದರ್ಶನ ಪಡೆದು ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದರು.
ದಕ್ಷಿಣಕಾಶಿ ಮಹಾಕೂಟಕ್ಕೂ ಭೇಟಿ ನೀಡಿದ ಸಮಿತಿ ಸದಸ್ಯರು ಮಹಾಕೂಟೇಶ್ವರ ದೇವಸ್ಥಾನ, ವರ್ಷದ 12 ತಿಂಗಳೂ ನೀರಿನಿಂದ ತುಂಬಿಕೊಂಡು ಕಂಗೊಳಿಸುವ ಹೊಂಡ ವೀಕ್ಷಿಸಿದರು.
ಬಳಿಕ ಬಾದಾಮಿ ಚಾಲುಕ್ಯರ ಪಟ್ಟಾಧಿಕಾರ ಸ್ಥಳ, ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲುಗೆ ತೆರಳಿ, ಅಲ್ಲಿನ 6, 7 ಹಾಗೂ 9ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯಗಳನ್ನು ವೀಕ್ಷಿಸಿದರು. ವಿಶ್ವ ಪಾರಂಪರಿಕತಾಣದಲ್ಲಿ ಸರ್ಕಾರ ಕೈಗೊಂಡ, ಈ ಹಿಂದೆ ನೀಡಿರುವ ಭರವಸೆಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿಂದ ಐಹೊಳೆಗೆ ಆಗಮಿಸಿದ ಸಮಿತಿ ದುರ್ಗಾ ದೇವಾಲಯ ಸಹಿತ ಎಲ್ಲ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಿದರು.
ಪ್ರವಾಸೋದ್ಯಮ ಇಲಾಖೆಯ ಆಯುಕ್ತ ನವೀನಕುಮಾರ, ವಿಧಾನ ಪರಿಷತ್ತಿನ ಸಚಿವಾಲಯದ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ, ಬಾದಾಮಿ ತಹಶೀಲ್ದಾರ್ ಸುಭಾಸ ಇಂಗಳೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಮೈಬೂಬಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ.ಎನ್. ಮೇಲಿನಮನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ, ಪ್ರವಾಸೋದ್ಯಮ ಇಲಾಖೆಯ ಅನೀಲಕುಮಾರ ಉಪಸ್ಥಿತರಿದ್ದರು.