ಮುಂಬಯಿ : ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ವಶಪಡಿಸಿ ಕೊಂಡ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರೆಲ್ಲ ಐಪಿಎಲ್‌ನತ್ತ ಗಮನ ಕೇಂದ್ರೀಕರಿಸ ತೊಡಗಿದ್ದಾರೆ. ಪಾಂಡ್ಯ ಬ್ರದರ್, ಸೂರ್ಯಕುಮಾರ್ ಯಾದವ್ ಅವರೆಲ್ಲ ಸೋಮವಾರ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಇವರು 7 ದಿನಗಳ ಕ್ವಾರಂಟೈನ್ ಪೂರೈಸಿ ಅಭ್ಯಾಸಕ್ಕೆ ಅಣಿಯಾಗಲಿದ್ದಾರೆ. 2021ರ ಐಪಿಎಲ್ ಆರಂಭಕ್ಕೆ ಉಳಿದಿರುವುದು ಇನ್ನು 10 ದಿನ ಮಾತ್ರ.
ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಇಂಗ್ಲೆಂಡ್ ಎದುರಿನ ಎಲ್ಲ 3 ಏಕದಿನ ಪಂದ್ಯ ಗಳಲ್ಲೂ ಕಾಣಿಸಿಕೊಂಡಿದ್ದರು. ಆದರೆ ಟಿ20ಯಲ್ಲಿ ಮಿಂಚಿದರೂ ಸೂರ್ಯ ಕುಮಾರ್ ಯಾದವ್‌ಗೆ ಏಕದಿನ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.
“ಭಾರತವನ್ನು ಪ್ರತಿನಿಧಿಸುವ ಅವ ಕಾಶ ಸಿಕ್ಕಿದ್ದು ನನ್ನ ಪಾಲಿನ ಹೆಮ್ಮೆಯ ಸಂಗತಿ. ದೇಶಕ್ಕಾಗಿ ಆಡುವುದು ನನ್ನ ದೊಡ್ಡ ಕನಸಾಗಿತ್ತು. ಇಂಥದೊಂದು ಅದ್ಭುತ ತಂಡದ ಸದಸ್ಯನಾಗಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. ಸದ್ಯ ರಾಷ್ಟ್ರೀಯ ತಂಡದಿಂದ ಬ್ರೇಕ್ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ಕುಟುಂಬ ವನ್ನು ಸೇರಿಕೊಂಡಿದ್ದೇನೆ’ ಎಂಬು ದಾಗಿ ಸೂರ್ಯಕುಮಾರ್ ಯಾದವ್ ವೀಡಿಯೋ ಒಂದರಲ್ಲಿ ಹೇಳಿದ್ದಾರೆ.
ರೋಹಿತ್ ಶರ್ಮ ನೇತೃತ್ವದ ಚಾಂಪಿಯನ್ ತಂಡ ಈ ಬಾರಿ ಬಹಳಷ್ಟು ಆಟಗಾರರನ್ನು ಖರೀದಿಸಿದೆ. ಇವರಲ್ಲಿ ಪ್ರಮುಖರೆಂದರೆ ಆ್ಯಡಂ ಮಿಲೆ° (3.3 ಕೋ.ರೂ.), ನಥನ್ ಕೋಲ್ಟರ್ ನೈಲ್ (5 ಕೋ.ರೂ.), ಪೀಯೂಷ್ ಚಾವ್ಲಾ (2.4 ಕೋ.ರೂ.), ಜೇಮ್ಸ್ ನೀಶಮ್ (50 ಲಕ್ಷ ರೂ.), ಯುದ್ವೀರ್ ಸಿಂಗ್ (20 ಲಕ್ಷ ರೂ.), ಮಾರ್ಕೊ ಜೆನ್ಸನ್ (20 ಲಕ್ಷ ರೂ.) ಮತ್ತು ಅರ್ಜುನ್ ತೆಂಡುಲ್ಕರ್ (20 ಲಕ್ಷ ರೂ.).
ಎ. 9ಕ್ಕೆ ಆರಂಭ
ಎ. 9ರಂದು ಚೆನ್ನೈಯಲ್ಲಿ ಮುಖಾಮುಖೀ ಆಗುವ ಮೂಲಕ ಮುಂಬೈ ಇಂಡಿಯನ್ಸ್- ರಾಯಲ್ ಚಾಲೆಂಜರ್ ಬೆಂಗಳೂರು 2021ರ ಐಪಿಎಲ್‌ಗೆ ನಾಂದಿ ಹಾಡಲಿವೆ.
ಡೆಲ್ಲಿ ಕ್ರಿಕೆಟಿಗರ ಆಗಮನ
ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೀನಿಯರ್ ಸ್ಪಿನ್ನರ್ ಆರ್. ಅಶ್ವಿನ್, ಆಲ್‌ರೌಂಡರ್ ಅಕ್ಷರ್ ಪಟೇಲ್, ಶಿಮ್ರನ್ ಹೆಟ್‌ಮೈರ್ ಮತ್ತು ಕ್ರಿಸ್ ವೋಕ್ಸ್ ಸೋಮವಾರ ಮುಂಬಯಿಗೆ ಆಗಮಿಸಿದರು. ಇವರೊಂದಿಗೆ ಪ್ರಧಾನ ಕೋಚ್ ರಿಕಿ ಪಾಂಟಿಂಗ್ ಕೂಡ ಬಂದಿಳಿದರು. ಇವರೆಲ್ಲ ಒಂದು ವಾರ ಕ್ವಾರಂಟೈನ್‌ನಲ್ಲಿ ಉಳಿಯಲಿದ್ದಾರೆ.
ಕಳೆದ ಸಲದ ರನ್ನರ್ ಅಪ್ ತಂಡವಾಗಿರುವ ಡೆಲ್ಲಿ ಈ ಬಾರಿ ನಾಯಕ ಶ್ರೇಯಸ್ ಅಯ್ಯರ್ ಅವರ ಗೈರಲ್ಲಿ ಆಡಲಿಳಿಯಲಿದೆ. ತಂಡದ ನೂತನ ನಾಯಕನನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದೆ.