Advertisement
ಮಗನ ಇರುವು ತಂದೆಗೆ ತಿಳಿಯಿತು. ಓಡೋಡಿ ಬಂದು ಕರೆದುಕೊಂಡು ಹೋದರು. ಆದರೆ ಸಂಗೀತ ಕಲಿಯಬೇಕೆಂಬ ಭಾವ ತೀವ್ರತೆ ಆಂತ ರ್ಯದಲ್ಲಿ ಹೆಚ್ಚಾಗುತ್ತಲೇ ಇತ್ತು. ಹುಡುಗ ಮತ್ತೂಮ್ಮೆ ಮನೆ ಬಿಟ್ಟು ಓಡಿದ. ಫುಟ್‌ಪಾತ್‌ನಲ್ಲಿ ಮಲಗಿದ, ಯಾರೋ ಊಟ ಕೊಟ್ಟರು. ಹಾಡಿದ್ದಕ್ಕಾಗಿ ಕೆಲವರು ಕೊಟ್ಟ ಚಿಲ್ಲರೆ ಕಾಸನ್ನು ತನ್ನ ಪುಟ್ಟ ಜೇಬಿನಲ್ಲಿರಿಸಿಕೊಂಡು ಗ್ವಾಲಿಯರ್, ಲಕ್ನೋ ಮುಂತಾದ ಊರುಗಳಲ್ಲಿ ಗುರುವಿಗಾಗಿ ಹುಡುಕಾಟ ನಡೆ ಸಿದ. ಆ ಹುಡುಕಾಟದಲ್ಲಿ ಗುರುವಾಗಿ ಒದಗಿ ಬಂದವರು ಖ್ಯಾತ ಸರೋದ್ ವಾದಕ ಅಮ್ಜದ್ ಆಲೀ ಖಾನ್ ಅವರ ತಂದೆ ಹಫೀಜ್ ಅಲೀ ಖಾನ್. ಅಲ್ಲಿಂದ ಪ್ರಾರಂಭವಾದ ಆತನ ಸಂಗೀತ ಲೋಕದ ಪಯಣ ಮುಂದೆ ಕೇಶವ ಮುಕುಂದ ಲುಖೆ, ಮಂಗತ್ ರಾವ್ ಮುಂತಾದ ಸಂಗೀತ ದಿಗ್ಗಜರಲ್ಲಿಯೂ ಶಿಷ್ಯತ್ವ ಪಡೆದರು. ಅನಂತರ ತನ್ನ ಮೂಲ ಪ್ರೇರಣಾ ಸ್ರೋತರಾದ ಉಸ್ತಾದ್ ಕರೀಂ ಖಾನ್ ಅವರ ನೇರ ಶಿಷ್ಯರಾದ ಸವಾಯಿ ಗಂಧರ್ವರ ಬಳಿ ಶಿಷ್ಯನಾಗಿ ಒಂದೊಂದೇ ರಾಗಗಳ ಆಳ ಅಗಲಗಳನ್ನು ಹುಡು ಕುತ್ತಾ ಹೊರಟರು. ಗುರುಗಳ ಸೇವೆ ಮಾಡುತ್ತಾ ಸಂಗೀತ ಶಾರದೆ ಯನ್ನು ಒಲಿಸಿಕೊಳ್ಳತೊಡಗಿದರು. ದಿನಕ್ಕೆ 16 ಗಂಟೆಗಳ ರಿಯಾಜ್. ಬೇರೆ ಬೇರೆ ರಾಗಗಳ ಮೇಲೆ ತನ್ನದೇ ಹೊಸ ಪ್ರಯೋಗಗಳನ್ನು ಮಾಡುತ್ತಾ ತನ್ನ ಮೂಲ ಕಿರಾಣಾ ಘರಾಣಾ ಶೈಲಿಯನ್ನ ಬಿಡದೆ ಹೊಸ ಹೊಸ ಆವಿಷ್ಕಾರಗಳನ್ನು ಪ್ರಾರಂಭಿಸಿದರು.
Related Articles
Advertisement
ಭೀಮಸೇನ ಜೋಶಿ ಅವರು ತಮ್ಮ ಜೀವಮಾನದಲ್ಲಿ ನೀಡಿದ ಒಟ್ಟು ಕಾರ್ಯಕ್ರಮಗಳ ಸಂಖ್ಯೆ ಸುಮಾರು 12 ಸಾವಿರ. ಭಾರತದಲ್ಲಿ ಅವರು ಪ್ರಸಿದ್ಧರಾದಷ್ಟೇ ವಿದೇಶಗಳಲ್ಲೂ ಪ್ರಸಿದ್ಧರು. 23 ದೇಶಗಳ 67 ನಗರಗಳಲ್ಲಿ ಭೀಮಸೇನರ ಕಾರ್ಯಕ್ರಮಗಳು ನಡೆದಿವೆ. ಇವರು ಯಾವಾಗಲೂ ಹವಾಯಿಯಲ್ಲೇ (ವಿಮಾನ)ತಿರುಗುವುದನ್ನು ನೋಡಿ ಅವರ ಸಹಚರರು ಗುರು ಸವಾಯಿ ಗಂಧರ್ವರು, ಶಿಷ್ಯ ಹವಾಯಿ ಗಂಧರ್ವ ಎನ್ನುತ್ತಿದ್ದರಂತೆ.
ಅಫ್ಘಾನಿಸ್ಥಾನದ ದೊರೆ ಜಹೀರ್ ಶಾನ ಮಗಳಿಗೆ ಆಕಸ್ಮಿಕವಾಗಿ ಜೋಶಿ ಅವರ ಸಂಗೀತದ ಕ್ಯಾಸೆಟ್ ಒಂದು ಸಿಕ್ಕಿತು. ಕೇಳಿ ಪ್ರಭಾವಿತಳಾದ ಆಕೆ ಅರಮನೆಯಲ್ಲಿ ಸಂಗೀತ ಕಛೇರಿ ನಡೆಸುವಂತೆ ತಂದೆಯ ಬಳಿ ತನ್ನ ಇಚ್ಛೆಯನ್ನು ತೋಡಿಕೊಂಡಳು. ಜಹೀರ್ ಶಾ ಒಪ್ಪಿ ಭಾರತ ಸರಕಾರಕ್ಕೆ ತನ್ನ ವಿನಂತಿಯನ್ನು ಕಳುಹಿಸಿದ. ಸರಕಾರ ಒಪ್ಪಿತು. ಅಫ್ಘಾನಿಸ್ಥಾನದ ರಾಜ ದರ್ಬಾರಿನಲ್ಲಿ ನಡೆದ ಭೀಮಸೇನರ ಕಛೇರಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತು.
ಸರೋದ್ ಮಾಂತ್ರಿಕ ಪಂ| ರಾಜೀವ ತಾರಾನಾಥ್ ಅವರು ಜೋಶಿ ಅವರನ್ನು ಭೇಟಿಯಾಗಲೆಂದು ಆಟೋ ಹತ್ತಿ ಬಂದರು. ಆಟೋದವನಿಗೆ ದುಡ್ಡು ಕೊಡಲು ಹೋದಾಗ ಆ ಆಟೋ ಚಾಲಕರು ನಿಮ್ಮನ್ನು ನಾನು ಕರೆದುಕೊಂಡು ಬಂದಿದ್ದು ಭೀಮಸೇನರ ಮನೆಗೆ. ಅವರು ನಮ್ಮ ಪುಣೆಗೆ ಕಳಶಪ್ರಾಯರು. ಅವರ ಮನೆಗೆ ಬಂದ ಅತಿಥಿಗಳಿಂದ ನಾನು ದುಡ್ಡು ತೆಗೆದುಕೊಳ್ಳಲಾರೆ ಎಂದಿದ್ದು ಭೀಮಸೇನ ಜೋಶಿಯವರು ಜನಸಾಮಾನ್ಯರ ಮನಸ್ಸಿನಲ್ಲೂ ನೆಲೆಯಾಗಿದ್ದರೆಂಬುದಕ್ಕೆ ಸಾಕ್ಷಿ. ಭೀಮಸೇನರ ತೋಡಿ ರಾಗದಿಂದ ಪ್ರಭಾವಿತರಾದ ಡೆನ್ಮಾರ್ಕಿನ ಚಿತ್ರ ನಿರ್ಮಾಪಕ ಲೂಯಿವ್ಯಾನ್ ಗಸ್ಟ್ರಿನ್ ಹಾಗೂ ಡಚ್ ಚಿತ್ರ ನಿರ್ಮಾಪಕರಾದ ಎಂ. ಲೂಯಿಸ್ ಪುಣೆಗೆ ಬಂದು ಜೋಶಿ ಅವರ ತೋಡಿ ರಾಗ ಆಧಾರಿತವಾಗಿ ಇಬ್ಬರೂ ಪ್ರತ್ಯೇಕವಾಗಿ ಎರಡು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದರೆ ಕೆನಡಾದ ಜೇಮ್ಸ್ ಬೆವರಿಜ್ ಭೀಮಸೇನ ಜೋಶಿಯವರ 20 ನಿಮಿಷಗಳ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿ ಅದಕ್ಕೆ “ಮಿಯಾ ಮಲ್ಹಾರ್’ ಎಂದು ಹೆಸರಿಟ್ಟಿದ್ದಾರೆ. ಪಂ| ಭೀಮಸೇನ ಜೋಶಿಯವರ ಅಪರೂಪದ ಸ್ವರ ಮಾಧುರ್ಯ ಸೂರ್ಯ ಚಂದ್ರರಿರುವ ವರೆಗೆ ಜೀವಂತಿಕೆಯಿಂದ ಇರುವಂಥದ್ದು. ಆ ಗಾನ ಗಾರುಡಿಗನನ್ನು ತಾಯಿ ಸರಸ್ವತಿ ಈ ಭೂಮಿಗೆ ಕಳುಹಿಸಿ ಶುಕ್ರವಾರಕ್ಕೆ ನೂರು ಸಂವತ್ಸರಗಳು ಪೂರ್ಣಗೊಂಡಿವೆ.
-ಪ್ರಕಾಶ್ ಮಲ್ಪೆ