•ಜಿ.ಎಸ್.ಕಮತರ
ಪಂಢರಪುರ: ಆಷಾಢ ಏಕಾದಶಿ ದಿನವಾದ ಶುಕ್ರವಾರ ಮಹಾರಾಷ್ಟ್ರದ ಪಂಢರಪುರ ಶ್ರೀಕ್ಷೇತ್ರದಲ್ಲಿ ಸೇರಿದ್ದ ವಿಠ್ಠಲನ ಸುಮಾರು 15 ಲಕ್ಷ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಶ್ರೀಕ್ಷೇತ್ರದ ಸುತ್ತಲೂ ಸುಮಾರು 10 ಕಿಮೀ ದೂರದಲ್ಲೇ ಎಲ್ಲ ವಾಹನಗಳನ್ನು ನಿಲ್ಲಿಸಿದ್ದರಿಂದ ಕ್ಷೇತ್ರವನ್ನು ಸಂಪರ್ಕಿಸುತ್ತಿದ್ದ ಎಲ್ಲ ರಸ್ತೆಗಳ ತುಂಬೆಲ್ಲ ಕಣ್ಣು ಹಾಯಿಸಿದಲ್ಲೆಲ್ಲ ಮಾವುಲೆ ದಿಂಡಿಗಳದ್ದೇ ನೋಟ. ಹೆಜ್ಜೆ ಹಾಕುತ್ತಿದ್ದ ಭಕ್ತರ ಬಾಯಲ್ಲಿ ವಿಠ್ಠಲ.. ವಿಠ್ಠಲ.. ಎಂಬ ಶಬ್ದದ ಹೊರತಾಗಿ ಮತ್ತೇನೂ ಕೇಳಿಸುತ್ತಿರಲಿಲ್ಲ.
ತಿರುಪತಿ ತಿಮ್ಮಪ್ಪ ಸಿರಿವಂತರ ದೇವತೆ ಎನಿಸಿದ್ದರೆ, ಪಂಢರಪುರದ ವಿಠ್ಠಲ ದೀನರ ದೇವತೆ ಎನಿಸಿದ್ದಾನೆ. ಈ ಕಾರಣಕ್ಕೆ ದಕ್ಷಿಣ ಭಾರತದ ಬಡ-ಮಧ್ಯಮ ವರ್ಗದ ಎಲ್ಲ ಜಾತಿ-ಸಮುದಾಯಗಳ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಕ್ಷೇತ್ರಕ್ಕೆ ಸುಮಾರು 15 ದಿನಗಳ ಕಾಲ ಪಾದಯಾತ್ರೆಯಲ್ಲೇ ಬಂದು ಆಷಾಢ ಏಕಾದಶಿ ದಿನದಂದು ಶ್ರೀಕ್ಷೇತ್ರದಲ್ಲಿ ವಿಠ್ಠಲನ ದರ್ಶನ ಪಡೆಯುತ್ತಾರೆ.
ಆಷಾಢ ಏಕಾದಶಿ ನಿಮಿತ್ತ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಢರಪುರ ಕ್ಷೇತ್ರಕ್ಕೆ ಮಹಾರಾಷ್ಟ್ರ ರಾಜ್ಯಕ್ಕಿಂತ ಹೆಚ್ಚಾಗಿ ಶ್ರೀಕ್ಷೇತ್ರದಲ್ಲಿ ಎಲ್ಲೆಲ್ಲೂ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳ ಭಕ್ತರದ್ದೇ ಪಾರುಪತ್ಯವಾಗಿತ್ತು.
ಏಕಾದಶಿ ನಿಮಿತ್ತ ಶ್ರೀಕ್ಷೇತ್ರದ ಪಕ್ಕದಲ್ಲಿ ಹರಿಯುತ್ತಿದ್ದ ಚಂದ್ರಭಾಗಾ (ಭೀಮಾ ನದಿ) ನದಿಯಲ್ಲಿ ದಿಂಡಿ ಹಾಗೂ ಪಲ್ಲಕ್ಕಿ ಸಹಿತ ಪುಣ್ಯ ಸ್ನಾನ ಮಾಡಿದ ಭಕ್ತರು, ಪಲ್ಲಕ್ಕಿಯಲ್ಲಿ ವಿಠuಲ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಶ್ರದ್ಧೆಯಿಂದ ವಿಠ್ಠಲ ವಿಠ್ಠಲ ಎಂದು ಭಜನೆ ಮಾಡುತ್ತ ಹೆಜ್ಜೆ ಹಾಕುತ್ತಿದ್ದ ವಾರಕರಿಗಳ ದಂಡು ಶ್ರೀಕ್ಷೇತ್ರಕ್ಕೆ ಆಗಮಿಸಿ ವಿಠ್ಠಲ ಹಾಗೂ ರುಕ್ಮಿಣಿ ದೇವತೆಗಳ ದರ್ಶನ ಪಡೆದರು. ಮಾರ್ಗದುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿದ್ದ ವಾರಕರಿ ಭಕ್ತರ ದಿಂಡಿ, ಪಲ್ಲಕ್ಕಿಗಳು ಒಂದಾದ ಮೇಲೊಂದರಂತೆ ವಿಠ್ಠಲ ಮಂದಿರಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದವು.
ಇದಾದ ಬಳಿಕ ಮಧ್ಯಾಹ್ನ 12 ಗಂಟೆಗೆ ಪ್ರಮುಖ ಪಲ್ಲಕ್ಕಿಗಳಾದ ವಿಠ್ಠಲನ ಪರಮ ಭಕ್ತರಾದ ಆಳಂಡಿ ಕ್ಷೇತ್ರದಿಂದ ಸಂತ ಜ್ಞಾನೇಶ್ವರರ, ದೇಹು ಕ್ಷೇತ್ರದಿಂದ ಸಂತ ತುಕಾರಾಮರ, ಪೈಠಾಣದಿಂದ ಸಂತ ಏಕನಾಥ, ಶೇಗಾಂವ ಕ್ಷೇತ್ರದಿಂದ ಸಂತ ಗಣಪತಿ, ಮುಕ್ತಾನಗರದಿಂದ ಸಂತ ಮುಕ್ತಾಬಾಯಿ ಸೇರಿದಂತೆ ಸಂತ ಜ್ಞಾನೇಶ್ವರ ಪರಿವಾಶರ ಹಾಗೂ ಇತರೆ ಸಂತರ ಸುಮಾರು 15 ಪಾಲಿಕೆಗಳು ಒಂದೊಂದಾಗಿ ನಗರದಲ್ಲಿ ಮೆರವಣಿ ನಡೆಸಿ, ವಿಠ್ಠಲ ಮಂದಿರ ಪ್ರದಕ್ಷಿಣೆ ಹಾಕಿ, ವಿಠ್ಠಲ-ರುಕ್ಮಿಣಿ ದರ್ಶನ ಪಡೆದವು.
ಮಧ್ಯಾಹ್ನ 5 ಗಂಟೆ ಸುಮಾರಿಗೆ ನಗರದ ಹೊರ ವಲಯದಲ್ಲಿರುವ ಮಾಹೇಶ್ವರಿ ಧರ್ಮಶಾಲಾದಿಂದ ಆಗಮಿಸಿದ ಮಹಾರಥೋತ್ಸವದಲ್ಲಿ ಸುಮಾರು 11 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಮೂಲಕ ವಿಠ್ಠಲ-ರುಕ್ಮಿಣಿ ಭಕ್ತಿಗೆ ಪಾತ್ರರಾದರು.