ಪಾಂಡವಪುರ: ಸಾರ್ವಜನಿಕರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಂವಿಧಾನ ದಿನಾಚರಣೆ ನಡೆಸಲಾಗುತ್ತಿದೆ ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಎಸ್.ವೇದಮೂರ್ತಿ ಹೇಳಿದರು.
ಪಟ್ಟಣದ ಜೆಎಂಎಫ್ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಯೋಜಿಸಿದ್ದ “70ನೇ ಸಂವಿಧಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನರಿಗೆ ಮನವರಿಕೆ ಮಾಡಿಸಿ: ದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಸಂವಿಧಾನದ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಸಂವಿಧಾನ ನಮಗೆ ಎಲ್ಲಾ ರೀತಿಯ ಹಕ್ಕುಗಳನ್ನು ಕೊಟ್ಟಿದೆ. ಅದೇರೀತಿ ಕರ್ತವ್ಯವನ್ನೂ ವಹಿಸಿದೆ. ನಾವು ಹೇಗೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳತ್ತೇವೆ ಅದೇ ರೀತಿ ಸಂವಿಧಾನ ನೀಡಿರುವ ಕರ್ತವ್ಯಗಳನ್ನು ಪಾಲನೆ ಮಾಡಬೇಕು. ತಮ್ಮ ಮೂಲ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಸಂವಿಧಾನ ಅಧ್ಯಯನ ಮಾಡಿ: ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕರೂ ಸಂವಿಧಾನ ಅಧ್ಯಯನ ಮಾಡುವ ಮೂಲಕ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಹಕ್ಕು ಮತ್ತು ಕರ್ತವ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನೂ ಸಮಾನವಾಗಿ ಕಾಣಬೇಕು. ವಕೀಲರು ಸಂವಿಧಾನ ಅಧ್ಯಯನ ಮಾಡಬೇಕು, ನಿತ್ಯ ಓದುವ ಮೂಲಕ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಜಾನಾರ್ಜನೆ ಜತೆಗೆ ಮಾನಸಿಕ ಆರೋಗ್ಯವೂ ವೃದ್ಧಿಸಲಿದೆ ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶೆ ಯಶಸ್ವಿನಿ ಮಾತನಾಡಿ, ಸಂವಿಧಾನದ ಹಕ್ಕು, ಕರ್ತವ್ಯಗಳನ್ನು ಅಧ್ಯಯನ ಮಾಡಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು, ಸಂವಿಧಾನದಲ್ಲಿರುವ ಕರ್ತವ್ಯ ಪಾಲನೆ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಎಸ್.ಶಿವಕುಮಾರ್ ಮಾತನಾಡಿದರು. ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜೆ, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ರಾಮೇಗೌಡ, ಉಪಾಧ್ಯಕ್ಷ ಎಂ.ಸುರೇಶ್, ಕಾರ್ಯದರ್ಶಿ ಸಿ.ಎಸ್. ಧನಂಜಯ್, ವಕೀಲ ಎಸ್. ಅಮರ್‌ನಾಥ್, ಸಿಬ್ಬಂದಿಗಳಾದ ಮಂಚಯ್ಯ, ಅರುಣ್ ಹಲವರಿದ್ದರು.