ಪಾಂಡವಪುರ: ಪುರಸಭೆ ಕಿರಿಯ ಆರೋಗ್ಯಾಧಿಕಾರಿ ಕಾಳಯ್ಯ ಹಾಗೂ ಸಿಬ್ಬಂದಿಗಳನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜುನಾಥ್ ಪರ ಪ್ರಚಾರದ ಫ್ಲೆಕ್ಸ್ ಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಫ್ಲೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಪುರಸಭೆ ಅಧಿಕಾರಿಗಳು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕಾರ್ಯಕ್ರಮ ಆಯೋಜನೆ ಮತ್ತು ಫ್ಲೆಕ್ಸ್ ಅಳವಡಿಕೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆಯಲಾಗಿದೆ. ಆದರೆ ಬಿಜೆಪಿ ಮುಖಂಡರನ್ನು ಸಂಪರ್ಕಿಸದೆ ಫ್ಲೆಕ್ಸ್ ತೆರವುಗೊಳಿಸಿ ಏಕಪಕ್ಷೀಯವಾಗಿ ಅಧಿಕಾರಿಗಳು ವರ್ತಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಣತಿಯಂತೆ ನಡೆದು ಕೊಳ್ಳುತ್ತಿದ್ದಾರೆ. ಅಧಿಕಾರಿಗಳ ವರ್ತನೆ ವಿರುದ್ದ ಕಾರ್ಯಕ್ರಮದ ಬಳಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ರಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಫ್ಲೆಕ್ಸ್ ಗಳನ್ನು ಮರು ಅಳವಡಿಸಲಾಗುವುದು ಎಂದು ತಿಳಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಈ ವೇಳೆ ಬಿಜೆಪಿ ಕ್ಷೇತ್ರಾಧ್ಯಕ್ಷ ಎಲ್.ಅಶೋಕ್, ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್, ಎಚ್.ಡಿ.ಶ್ರೀಧರ, ಶ್ರೀನಿವಾಸನಾಯಕ, ಅಶೋಕ, ಕಾಂತರಾಜು, ನೀಲನಹಳ್ಳಿ ಧನಂಜಯ ಇತರರು ಇದ್ದರು.