Advertisement

ತವರಿಗೆ ಮರಳಿದ ವಿಠ್ಠಲನ ಭಕ್ತರು

10:01 AM Jul 14, 2019 | Naveen |

ಜಿ.ಎಸ್‌. ಕಮತರ
ಪಂಡರಪುರ:
ವಿಠ್ಠಲ ವಿಠ್ಠಲ ಎಂದು ಸ್ತುತಿಸುತ್ತ ಪಂಢರಪುರ ವಿಠ್ಠಲನಿಗೆ ಏಕಾದಶಿ ಉಪವಾಸ ವೃತಾಚರಣೆ ಮಾಡಿ ತಮ್ಮ ಭಕ್ತಿ ಪಾರಮ್ಯ ಮೆರೆದಿದ್ದ ವಾರಕರಿ ಭಕ್ತರು, ಶನಿವಾರ ಆಷಾಢ ದ್ವಾದಶ ದರ್ಶನ ಪಡೆದು ತವರಿನತ್ತ ಮುಖ ಮಾಡಿದರು.

Advertisement

ಏಕಾದಶಿಗೆ ಮುನ್ನಾ ಕೆಲ ದಿನಗಳಿಂದಲೇ ವಾರಕರಿ ಭಕ್ತರಿಂದ ತುಂಬಿ ತುಳುಕುತ್ತಿದ್ದ ಫಂಡರಪುರ ಶ್ರೀಕ್ಷೇತ್ರ ಶುಕ್ರವಾರ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಹಂತದಲ್ಲಿ ಭಕ್ತರ ಸಂಖ್ಯೆ 11-12 ಲಕ್ಷಕ್ಕೆ ಏರಿತ್ತು. ಏಕಾದಶಿ ಉಪವಾಸ ಹಾಗೂ ಚಂದ್ರಭಾಗಾ ನದಿಯಲ್ಲಿ ಪುಣ್ಯಸ್ನಾನ, ತಮ್ಮ ಆರಾಧ್ಯ ದೈವ ಪಂಢರಿನಾಥ ವಿಠ್ಠಲನ ದರ್ಶನ ಪಡೆದು, ಮಹಾ ರಥೋತ್ಸವದ ಮೆರವಣಿಗೆಯನ್ನು ಕಣ್ತುಂಬಿಕೊಂಡು ಹರಕೆ ತೀರಿಸಿ ಕೃತಾರ್ಥತೆ ಪಡೆದು ಶ್ರೀಕ್ಷೇತ್ರದಲ್ಲೇ ತಂಗಿದ್ದರು. ಏಕಾದಶಿ ದಿನ ಇಡಿ ರಾತ್ರಿ ಕೂಡ ಪಂಢರಪುರ ಶ್ರೀಕ್ಷೇತ್ರದ ತುಂಬೆಲ್ಲ ವಾರಕರಿ ಭಕ್ತರು ದಂಡು ದಂಡಾಗಿ ಸುತ್ತುತ್ತಿದ್ದ ಕಾರಣ ಪಂಢರಪುರ ರಾತ್ರಿ ಕೂಡ ಎದ್ದು ಕುಳಿತಿತ್ತು.

ದ್ವಾಶದಶ ದಿನವಾದ ಶನಿವಾರ ಸೂರ್ಯೋದಯಕ್ಕೆ ಮುನ್ನವೇ ಎದ್ದು ತಮ್ಮೊಂದಿಗೆ ಬಂದಿದ್ದ ಎಲ್ಲ ವಾರಕರಿ ಭಕ್ತರೊಂದಿಗೆ ಮತ್ತೆ ಚಂದ್ರಭಾಗಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿದರು. ಬಳಿಕ ವಿಠ್ಠಲ ವಿಠ್ಠಲ ನಾಮ ಸ್ಮರಣೆಯೊದಿಗೆ ತಮ್ಮ ದೈವ ಪಂಢರಿನಾಥನ ಮಂದಿರಕ್ಕೆ ತೆರಳಿ ವಿಠಲ-ರುಕ್ಮಿಣಿ ದರ್ಶನ ಪಡೆದರು.

ಬಳಿಕ ತಮ್ಮ ಕುಟುಂಬದವರಿಗೆ, ಆಪ್ತೇಷ್ಟರಿಗೆ, ಸ್ನೇಹಿತರಿಗೆ ಪಂಢರಿನಾಥನ ವಿವಿಧ ಚಿತ್ರ, ಫೋಟೋ ಫಲಕ, ಪ್ರಸಾದ, ತುಳಸಿ ಮಾಲೆ, ವಿಠ್ಠಲನ ಲಾಕೆಟ್, ವಿಠ್ಠಲನ ವಿಶೇಷತೆ ಎನಿಸಿದ ನಾಮಗಳ ಧಾರಣೆಗೆ ಗಂಧ, ಕರಿಗಳನ್ನು ಹಾಗೂ ಕೈದಾರ, ಕಸಿದಾರ, ಉಡದಾರ ಹೀಗೆ ದೇವರ ಪ್ರಸಾದದ ಕಾಣಿಕೆ ನೀಡಲು ಖರೀದಿಯಲ್ಲಿ ತೊಡಗಿದ್ದರು. ಇದಲ್ಲದೇ ದಿಂಡಿಗಳಲ್ಲಿ ಭಕ್ತರು ಭಜನೆ ಮಾಡಲು ತಾಳಗಳು, ಡೋಲುಗಳು, ತಪ್ಪಡಿಗಳಂಥ ಭಜನಾ ವಾದ್ಯಗಳ ಖರೀದಿಯಲ್ಲೂ ತೊಡಗಿದ್ದರು.

ಮಹಿಳೆಯರು ಬಳೆ ತೊಡಿಸಿಕೊಳ್ಳುವ, ತಮ್ಮ ಕುಟುಂಬದ ಸದಸ್ಯರಿಗೆ ವಿವಿಧ ಬಗೆಯ ಹಾಗೂ ಶೈಲಿಯ ಬಳೆಗಳನ್ನು ಕೊಳ್ಳುವಲ್ಲಿ ಮುಳುಗಿದ್ದರು. ಮತ್ತೂಂದೆಡೆ ಮಕ್ಕಳು, ಯುವತಿಯರಿಗೆ ಅಚ್ಚು ಮೆಚ್ಚಿನ ಮುತ್ತಿನ ಸರಗಳು, ವಿಠ್ಠಲ-ರುಕ್ಮಿಣಿ ಲಾಕೆಟ್‌ಗಳನ್ನು ಕೊಳ್ಳುವುವುದು ಸಾಮಾನ್ಯವಾಗಿತ್ತು. ವಿಭೂತಿ, ಕುಂಕುಮ, ಭಂಡಾರ ಹೀಗೆ ಮಹಿಳೆಯರ ಆಗತ್ಯದ ವಸ್ತುಗಳ ಮಾರಾಟವೂ ಜೋರಾಗಿತ್ತು.

Advertisement

ಇನ್ನು ವಾರಕರಿ ಭಕ್ತರ ಬಹು ಬೇಡಿಕೆಯ ಫಳಹಾರ ಪೂರೈಕೆಗೆ ಬೀದಿ ಬದಿಯಲ್ಲಿ ಎಲ್ಲೆಡೆ ಫಳಹಾರ ವ್ಯಾಪಾರಿ ಮಳಿಗೆಗಳು ತಲೆ ಎತ್ತಿದ್ದವು. ಬೆಂಡು, ಬೆತ್ತಾಸ, ಚುರುಮರಿ, ಬಡಂಗ ಸೇರಿದಂತೆ ವಿವಿಧ ಬಗೆಯ ಖಾದ್ಯಪ್ರಸಾದ ಖರೀದಿಯಲ್ಲಿ ತೊಡಗಿದ್ದರು.

ಪಂಢರಪುರ ವಿಠ್ಠಲನ ಭಕ್ತರು ಬಡ ಮಧ್ಯಮ ವರ್ಗದವರೇ ಹೆಚ್ಚಿರುವ ಕಾರಣ ಬೀದಿ ಬದಿ ವ್ಯಾಪಾರಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಸಹಜವಾಗಿ ವ್ಯಾಪಾರದಲ್ಲಿ ಚೌಕಾಸಿಯೂ ನಡೆಯುವುದು ಸಾಮಾನ್ಯವಾಗಿತ್ತು.

ವಾರ-ಎರಡು ವಾರಗಳಿಂದ ಪಾದಯಾತ್ರೆಯಲ್ಲಿ ಪಂಢರಪುರಕ್ಕೆ ಬಂದಿದ್ದ ವಾರಕರಿ ಭಕ್ತರು, ದ್ವಾದಶ ದಿನ ಊರಿಗೆ ಮರಳು ವಾಹನ ಏರಿದ್ದರು. ಕೆಲವು ದಿಂಡಿ ಯಾತ್ರಿಗಳು ತಮ್ಮೊಂದಿಗೆ ಸರಕು ಹೊತ್ತು ತಂದಿದ್ದ ವಾಹನದಲ್ಲೇ ತವರಿಗೆ ಮರಳಿದರು. ಪಂಢರಪುರ ಏಕಾದಶಿ ಜಾತ್ರೆಯ ಭಕ್ತರ ಅನುಕೂಲಕ್ಕಾಗಿ ಮಹಾರಾಷ್ಟ್ರ ಮಾತ್ರವಲ್ಲ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಿಂದ ನೂರಾರು ಬಸ್‌ಗಳು ವಿಶೇಷ ಸಾರಿಗೆ ಕಲ್ಪಿಸಿದ್ದವು. ಇದರಿಂದಾಗಿ ವಾಹನ ಸೌಲಭ್ಯ ಇಲ್ಲದೇ ಕೇವಲ ಪಾದಯಾತ್ರೆಯಲ್ಲಿ ಬಂದಿದ್ದ ವಾರಕರಿಗಳು ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳು ಜಾತ್ರೆಯ ನಿಮಿತ್ತ ಓಡಿಸುತ್ತಿರುವ ಜಾತ್ರಾ ವಿಶೇಷ ಬಸ್‌ಗಳಲ್ಲಿ ತವರಿನತ್ತ ವಿಠ್ಠಲ ವಿಠ್ಠಲ ಎನ್ನುತ್ತ ಪ್ರಯಾಣ ಬೆಳೆಸಲು ನೆರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next