Advertisement

ಬಿಸಿಲಿನ ಬೇಗೆ ತಡೆಯಲಾಗದೆ ರಸ್ತೆಗೇ ಹಾಕಿದರು ಚಪ್ಪರ!

10:57 AM Mar 27, 2019 | Naveen |
ನಗರ : ಬಿಸಿಲಿನ ತಾಪಕ್ಕೆ ಇಬ್ಬರು ಮೃತಪಡುತ್ತಿದ್ದಂತೆ ಕೇರಳದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಸದ್ಯ ಪುತ್ತೂರಿನಲ್ಲಿಯೂ ಇದೇ ರೀತಿ ರೆಡ್‌ ಅಲರ್ಟ್‌ ಘೋಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೆಡ್‌ ಅಲರ್ಟ್‌ ಘೋಷಣೆಯಾದರೆ ಮಧ್ಯಾಹ್ನದ ಹೊತ್ತು ಇಂತಿಷ್ಟು ಸಮಯ ಬಿಸಿಲಿಗೆ ಹೊರ ಬರುವಂತೆಯೇ ಇಲ್ಲ. ಕೆಲ ದಿನ ಮಧ್ಯಾಹ್ನದ ಹೊತ್ತು ವಾತಾವರಣ 42 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದ ನಿದರ್ಶನವಿದೆ. ಈ ವರ್ಷ ಸುರಿದ ಭಾರೀ ಮಳೆಗೆ ದುರಂತಗಳು ಸಂಭವಿಸಿತ್ತು. ಬಳಿಕದ ಚಳಿಗಾಲದಲ್ಲಿ ವಿಪರೀತ ಥಂಡಿಯಾಗಿದ್ದು, ನೆನಪಿನಲ್ಲಿ ಉಳಿಯುವಂತಹದ್ದು. ಇದೀಗ ಬೇಸಗೆಯ ಸರದಿ. ಮಳೆ, ಚಳಿಗೆ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಬೇಸಗೆಯೂ ಪ್ರಖರತೆಯಿಂದಲೇ ಕೂಡಿದೆ.
ಪ್ರಖರತೆಯೂ ಹೆಚ್ಚುತ್ತಲಿದೆ
ಸುಡುವ ಬಿಸಿಲಿಗೆ ಹೊರಹೋಗಿ ಮೈಯೊಡ್ಡುವುದು ಸಾಧ್ಯವಿಲ್ಲದ ಮಾತು. ಹಾಗೆಂದು ದಿನನಿತ್ಯದ ಕರ್ಮಗಳನ್ನು ಮಾಡದೇ ಇರುವ ಹಾಗಿಲ್ಲ. ಆದ್ದರಿಂದ ಸುಡುವ ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಬಳಿಕ ಒಂದಷ್ಟು ವಿಶ್ರಾಂತಿ ತೆಗೆದು ಕೊಳ್ಳುತ್ತಿರುವುದು ಸಾಮಾನ್ಯದ ದೃಶ್ಯವಾಗಿದೆ. ದಿನದಿಂದ ದಿನಕ್ಕೆ ಪ್ರಖರತೆ ಹೆಚ್ಚುತ್ತಾ ಸಾಗುತ್ತಿರುವ ಬೇಸಗೆ, ಹಲವು ರೋಗಗಳಿಗೂ ಕಾರಣವಾಗುತ್ತಿದೆ.
ಕೃಷಿಗೂ ಹಿನ್ನಡೆ
ಈಗಾಗಲೇ ಬಾವಿ, ಕೆರೆಗಳು ಬತ್ತಿ ಹೋಗಿವೆ. ಸಾಮಾನ್ಯವಾಗಿ ಮಾರ್ಚ್‌ವರೆಗೆ ಕೆರೆ, ಬಾವಿಗಳು ಬತ್ತುವುದಿಲ್ಲ. ಮೇ ಹೊತ್ತಿಗೆ ಬತ್ತಿ ಹೋಗುವುದು ಸಾಮಾನ್ಯ. ಒಂದು ತಿಂಗಳು ಹೇಗೋ ದಿನ ದೂಡಿದರೆ, ಬಳಿಕ ಮಳೆಗಾಲ ಎದುರಾಗುತ್ತದೆ. ಆದರೆ ಈ ವರ್ಷ ಪರಿಸ್ಥಿತಿ ಹಾಗಿಲ್ಲ. ಮಾರ್ಚ್‌ ತಿಂಗಳಲ್ಲೇ ಬಿಸಿಲಿನ ಹೊಡೆತ ಮಿತಿ ಮೀರಿದೆ. ಪರಿಣಾಮ ನೀರಿನ ಮೂಲಗಳು ಬತ್ತಿ ಹೋಗಿವೆ. ಇನ್ನು ಬೋರ್‌ವೆಲ್‌ಗ‌ಳ ಸ್ಥಿತಿ ಕೇಳಿದರೆ, ಅಲ್ಲೂ ಪರಿಸ್ಥಿತಿ ಹಾಗೇ ಇದೆ. ಬೋರ್‌ವೆಲ್‌ಗ‌ಳ ನೀರು ಕಡಿಮೆ ಆಗುತ್ತಿವೆ. ಕೃಷಿ ವಿಚಾರ ಬಿಡಿ, ಕನಿಷ್ಠ ಗ್ರಾಮ ಪಂಚಾಯತ್‌ನಿಂದ ನೀರು ಪೂರೈಕೆ ಮಾಡುವ ಬೋರ್‌ವೆಲ್‌ ಗಳು ಭಾರೀ ಪ್ರಯಾಸದಿಂದ ಕಾರ್ಯ ನಿರ್ವಹಿಸುವಂತಾಗಿದೆ.
ರಸ್ತೆಗೆ ಚಪ್ಪರ
ಪುತ್ತೂರು ಪೇಟೆಯಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ರಸ್ತೆಗೆ ಚಪ್ಪರ ಹಾಕಲಾಗಿದೆ. ಪುತ್ತೂರು ಬಸ್‌ನಿಲ್ದಾಣ ಸಮೀಪವೇ ಮುಖ್ಯರಸ್ತೆಗೆ ಹಸಿರು ಚಪ್ಪರ ಹಾಕಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸ್ಥಳೀಯ ಅಂಗಡಿ ಮಾಲಕರು ಮಾಡಿದ ಉಪಾಯವಿದು. ತಮ್ಮ ಅಂಗಡಿಗೂ ನೆರಳಾಯಿತು. ಅಂಗಡಿಗೆ ಬರುವವರಿಗೂ ಬಿಸಿಲಿನ ರಕ್ಷಣೆ ಸಿಗಬೇಕು ಎನ್ನುವ ನೆಲೆಯಲ್ಲಿ ಇದನ್ನು ಹಾಕಲಾಯಿತು. ಇದೀಗ ಸಂಚಾರಿ ಠಾಣೆಯ ಪೊಲೀಸರಿಗೂ ಇದು ನೆರವಾದಂತಿದೆ.
ವೈಜ್ಞಾನಿಕ ಕಾರಣ
ಪುತ್ತೂರಿನಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿರುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಸಮುದ್ರ ತೀರ ಸುಮಾರು 50-55 ಕಿ.ಮೀ. ದೂರದಲ್ಲಿ ಇರುವುದೇ ತಾಪಮಾನ ಹೆಚ್ಚಾಗಲು ಕಾರಣ. ಸಮುದ್ರದ ನಡುವಿನ ತಂಪು ಗಾಳಿ, ತೀರದಲ್ಲಿರುವ ಬಿಸಿ ಗಾಳಿಯನ್ನು ಸುಮಾರು 50 ಕಿಲೋ ಮೀಟರ್‌ನಷ್ಟು ದೂರ ತಳ್ಳಿ ಬಿಡುತ್ತದೆ. ಇಂತಹ ಸಂದರ್ಭ ಪುತ್ತೂರಿನ ಆಸುಪಾಸಿನ ಪ್ರದೇಶಗಳಿಗೆ ಬಿಸಿ ಗಾಳಿಯ ಉಡುಗೊರೆ ಸಿಗುತ್ತದೆ. ಒಂದೆಡೆ ವಾತಾವರಣ, ಇನ್ನೊಂದೆಡೆ ಸಮುದ್ರದ ಬಿಸಿ ಗಾಳಿ ಒಟ್ಟಾಗಿ ಉಷ್ಣಾಂಶವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಲವಣಾಂಶಗಳ ಕೊರತೆ ಕಾಡುತ್ತದೆ
ಬಿಸಿಲಿಗೆ ಬಹುಮುಖ್ಯವಾಗಿ ಕಾಡುವ ಸಮಸ್ಯೆ ನಿರ್ಜಲೀಕರಣ. ದೇಹದಲ್ಲಿ ಲವಣಾಂಶಗಳ ಕೊರತೆ ಕಾಡುವುದು. ಈಗ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಆದಷ್ಟು ಬಿಸಿಲಿನಿಂದ ದೂರ ಇರುವುದೇ ಉತ್ತಮ. ದೇಹದ ಪ್ರಕ್ರಿಯೆಗಳಿಗೆ ತಾಪಮಾನ ಬೇಕು. ಆದರೆ ಹೆಚ್ಚು ಅಥವಾ ಕಡಿಮೆ ಆದರೂ ಸಮಸ್ಯೆ. ಹೆಚ್ಚು ಉಷ್ಣಾಂಶ ದಾಖಲಾದರೆ ಅದರಿಂದ ಹೀಟ್‌ ಸ್ಟ್ರೋಕ್‌ ಉಂಟಾಗಬಹುದು. ಪ್ರಮುಖ ಅಂಗಗಳಾದ ಹೃದಯ, ಕಿಡ್ನಿ, ಮೆದುಳಿಗೆ ಸಮಸ್ಯೆ ಆಗುವುದು.
– ಡಾ| ಸುಬ್ರಾಯ ಭಟ್‌,
     ಪುತ್ತೂರು
ಗಣೇಶ್‌ ಎನ್‌. ಕಲ್ಲರ್ಪೆ 
Advertisement

Udayavani is now on Telegram. Click here to join our channel and stay updated with the latest news.

Next