Advertisement

ಪಂಚೋಡಿ ಕೆರೆಗೆ ಕೂಡಿ ಬಂತೇ ಕಾಯಕಲ್ಪ ಯೋಗ?

12:05 AM Jul 04, 2019 | mahesh |

ಸವಣೂರು: ಪಾಲ್ತಾಡಿ ಗ್ರಾಮದ ಪಂಚೋಡಿಯಲ್ಲಿರುವ ಕೆರೆಯ ಅಭಿವೃದ್ದಿಗೆ ಯೋಗ ಕೂಡಿಬಂದಿದೆ. ಸುಮಾರು 75 ಎಕ್ರೆಗಳಿಗಿಂತಲೂ ಹೆಚ್ಚು ಕೃಷಿ ತೋಟಗಳಿಗೆ ನೀರುಣಿಸುತ್ತಿದ್ದ ಈ ಕೆರೆ ಪ್ರಸ್ತುತ ಹೂಳು ತುಂಬಿಕೊಂಡಿದೆ. ಇದರ ಅಭಿವೃದ್ಧಿಗಾಗಿ ಸುಳ್ಯ ಶಾಸಕ ಎಸ್‌. ಅಂಗಾರ ಅವರ ಸೂಚನೆಯಂತೆ ಸಣ್ಣ ನಿರಾವರಿ ಇಲಾಖೆ ಎಂಜಿನಿಯರ್‌ ಸ್ಥಳ ಪರಿಶೀಲನೆ ನಡೆಸಿ ಅಂದಾಜುಪಟ್ಟಿ ಸಿದ್ಧಪಡಿಸಿದ್ದಾರೆ.

Advertisement

ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಹೂಳು ತೆಗೆದು ಇನ್ನಷ್ಟು ಉಪಯೋಗಿಯಾಗಿ ಹಾಗೂ ಇನ್ನಷ್ಟು ನೀರು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಶಾಸಕರು ವಿಶೇಷ ಮುತುವರ್ಜಿ ವಹಿಸಿ ಕೆರೆ ಅಭಿವೃದ್ದಿಗಾಗಿ ಮೊದಲ ಹಂತದ ಕಾಮಗಾರಿಗೆ ಈಗಾಗಲೇ 90 ಲಕ್ಷ ರೂ. ಅನುದಾನ ಮೀಸಲಿರಿಸಿದ್ದು, ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳಲಿದೆ.

ಎಂದೂ ಬತ್ತದ ಪಂಚೋಡಿ ಕೆರೆ
ಪಂಚೋಡಿಯಲ್ಲಿನ ಈ ಕೆರೆ ಎಂದೂ ಬತ್ತಿಲ್ಲ. ಇಲ್ಲಿನ ಹಿರಿಯರು ಸುಮಾರು ನೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಕೆರೆಯಾಗಿದ್ದು, ಈ ಕೆರೆ ಜಲಸಮೃದ್ಧಿಯಿಂದ ಕೂಡಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಕುಡಿಯುವ ನೀರು, ಅಥವಾ ಕೃಷಿ ಬಳಕೆಗೆ ಉಪಯೋಗಿಸುವ ಕೆರೆ, ಬಾವಿಗಳಲ್ಲಿ ಬಿರು ಬೇಸಗೆಯಲ್ಲೂ ನೀರು ಬತ್ತುತ್ತಿರಲಿಲ್ಲ. ಈಗ ಈ ಕೆರೆಯಲ್ಲಿ ಹೂಳು ತುಂಬಿದ್ದರಿಂದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥಯ ಕಡಿಮೆಯಾಗಿದೆ.

ಉದ್ಯೋಗ ಖಾತರಿಯಿಂದ ಕೆಲಸ
ಈ ಕೆರೆಯನ್ನು 3 ವರ್ಷಗಳ ಹಿಂದೆ ಸವಣೂರು ಗ್ರಾಮ ಪಂಚಾಯತ್‌ ವತಿಯಿಂದ ಉದ್ಯೋಗ ಕಾತರಿ ಯೋಜನೆಯ ಮೂಲಕ ಸ್ಥಳೀಯರು ಹೂಳು ತೆಗೆಯುವ ಕೆಲಸ ಮಾಡಿದ್ದರು. ಆದರೆ ಕೆರೆ ವಿಸ್ತೀರ್ಣವಾಗಿರುವುದರಿಂದ ಕೆರೆಯ ಒಂದು ಭಾಗದಲ್ಲಿ ಮಾತ್ರವೇ ಕೆಲಸ ಮಾಡುವಂತಾಯಿತು. ಕೆರೆಯನ್ನು ಅಭಿವೃದ್ಧಿಪಡಿಸಿ ಸಂಪೂರ್ಣ ಹೂಳೆತ್ತುವ ಕಾರ್ಯ ಮಾಡಿದ್ದರೆ ಇಂದಿಗೂ ಆ ಕೆರೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಬೇಸಗೆಗೆ ನೀರಿನ ಅಭಾವ ಇಲ್ಲದಂತೆ ಮಾಡುತ್ತಿತ್ತು. 2 ವರ್ಷಗಳ ಹಿಂದೆ ಇಲ್ಲಿ ಕೆರೆ ಇರುವುದನ್ನು ಕಂಡ ಸುಳ್ಯ ಶಾಸಕ ಎಸ್‌. ಅಂಗಾರ ಈ ಕೆರೆ ಅಭಿವೃದ್ಧಿ ಮಾಡಿದರೆ ಕೃಷಿಕರೇ ಇರುವ ಈ ಭಾಗದ ಜನತೆಗೆ ವರದಾನವಾಗಬಹುದು ಎನ್ನುವ ದೂರದೃಷ್ಟಿಯಿಂದ ಈ ಕೆರೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಎಂಜಿನಿಯರ್‌ ಸ್ಥಳ ಪರಿಶೀಲನೆ
ಶಾಸಕ ಎಸ್‌. ಅಂಗಾರ ಅವರ ಸೂಚನೆ ಮೇರೆಗೆ ಸಣ್ಣ ನಿರಾವರಿ ಇಲಾಖೆ ಎಂಜಿನಿಯರ್‌ ಲಕ್ಷ್ಮಣ ಪೂಜಾರಿ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಸದಸ್ಯ ಸತೀಶ್‌ ಅಂಗಡಿಮೂಲೆ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ, ಮಾಜಿ ಉಪಾಧ್ಯಕ್ಷ ರಾಕೇಶ್‌ ರೈ ಕೆಡೆಂಜಿ, ಪುತ್ತೂರು ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಪಾಲ್ತಾಡಿ ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್‌ ಶೆಟ್ಟಿ ಕುಂಜಾಡಿ, ಕೃಷಿಕ ಪದ್ಮಪ್ರಸಾದ್‌ ಆರಿಗ ಪಂಚೋಡಿ, ಉದ್ಯೋಗ ಖಾತರಿ ಯೋಜನೆಯ ಎಂಜಿನಿಯರ್‌ ವಿನೋದ್‌ ಕೊೖಂಗಾಜೆ ಉಪಸ್ಥಿತರಿದ್ದರು.

Advertisement

ಅನುದಾನ ಮೀಸಲಿರಿಸಲಾಗಿದೆ
ನೀರಿನ ಮೂಲವಾದ ಪಂಚೋಡಿ ಕೆರೆಯನ್ನು ಅಭಿವೃದ್ಧಿಪಡಿಸಬೇಕೆನ್ನುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಮುಖಾಂತರ ಅನುದಾನ ಮೀಸಲಿರಿಸಲಾಗಿದೆ. ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕೆರೆಯ ಅಭಿವೃದ್ದಿ ಕಾಮಗಾರಿ ಆರಂಭಗೊಳ್ಳಲಿದೆ.
– ಎಸ್‌. ಅಂಗಾರ, ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ

•ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next