ಹೊಸಪೇಟೆ: ಪಂಚಮಸಾಲಿ ಸಮಾಜ 2 ಎ ಮೀಸಲಾತಿ ವಿಚಾರಕ್ಕೆ ಕುರಿತಂತೆ ಶಾಸಕರು, ಸಂಸದರು ನನ್ನನ್ನು ಉತ್ಸವ ಮೂರ್ತಿಯನ್ನಾಗಿ ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ವೀರರಾಣಿ ಕಿತ್ತೂರು ಚನ್ನಮ್ಮನ ೧೯೯ ನೇ ವಿಜಯೋತ್ಸವ ಹಾಗೂ ಪಂಚಮಸಾಲಿ 2 ಎ ಮೀಸಲಾತಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, 2 ಮೀಸಲಾತಿಗೆ ಸಚಿವ ಆನಂದ ಸಿಂಗ್ ಮುಂಚೂಣಿಯಲ್ಲಿರುತ್ತಾರೆ ಎಂದೇಳುವ ಮೂಲಕ ನನ್ನನ್ನು ಉತ್ಸವ ಮೂರ್ತಿಯನ್ನಾಗಿ ಮಾಡಿದ್ದಾರೆ. ಆದರೂ ಪರವಾಗಿಲ್ಲ 2 ಮೀಸಲಾತಿಗಾಗಿ ಸರ್ಕಾರ ಮತ್ತು ಸಮಾಜದ ಕೊಂಡಿಯಾಗಿ ಕೆಲಸ ಮಾಡುವೆ ಎಂದರು.
ಸಮಾವೇಶದಲ್ಲಿ ಭಾಗಿಯಾದ ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ್, ಭೀಮನಾಯ್ಕ್, ಸಂಸದ ಕರಡಿ ಸಂಗಣ್ಣ, ವೈ ದೇವೇಂದ್ರಪ್ಪ ಸೇರಿದಂತೆ ಇತರೆ ಗಣ್ಯರು, ವಿಜಯನಗರ ಜಿಲ್ಲೆಯನ್ನು ರಚನೆ ಮಾಡಿರುವ ಆನಂದ ಸಿಂಗ್ ಅವರಿಗೆ ಅಸಾಧ್ಯವಾದ ಕಾರ್ಯ ಯಾವುದಿಲ್ಲ. ಹೀಗಾಗಿ ಮೀಸಲಾತಿ ಹೊಣೆಯನ್ನು ಆನಂದ ಸಿಂಗ್ ಅವರಿಗೆ ಹೊರಿಸಿದರೆ, ಮೀಸಲಾತಿ ಬೇಡಿಕೆ ಸುಲಭವಾಗಿ ಈಡೇರಲಿದೆ ಎಂಬ ಮಾತುಗಳನ್ನಾಡಿದರು. ಇದಕ್ಕೆ ಆನಂದ ಸಿಂಗ್ ಎಲ್ಲರೂ ನನ್ನನ್ನು ಉತ್ಸವ ಮೂರ್ತಿಯನ್ನಾಗಿ ಮಾಡಿದ್ದಾರೆ ಎಂದರು.
ಈ ಬಾರಿ ಕೂಡ ನಾನೇ ಬಿಜೆಪಿ ಅಭ್ಯರ್ಥಿ:ಗೋಪಾಲ ಕೃಷ್ಣ
ಮುಂದಿನ ವಿಧಾನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೂಡ್ಲಿಗಿ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ. ನಾನು ತುಂಬಾ ಒಳ್ಳೆಯವನು ನನಗೆ ಆರ್ಶಿವಾದ ಮಾಡಿ ಎಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲ ಕೃಷ್ಣ, ಮನವಿ ಮಾಡಿದರು.
ಪಂಚಮಸಾಲಿ 2 ಎ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದು ಬಿಜೆಪಿ ಅಭ್ಯರ್ಥಿಯಾಗಿ ಕೂಡ್ಲಿಗಿಯಿಂದ ಸ್ಪರ್ಧಿಸಿದ ನನಗೆ ಎಲ್ಲ ಸಮಾಜ ಬಾಂಧವರೊಂದಿಗೆ ಪಂಚಮಸಾಲಿ ಸಮಾಜ ಬಾಂಧವರು ಆರ್ಶಿವಾದ ಮಾಡಿದ್ದಾರೆ. ಈ ಬಾರಿ ಕೂಡ ನನಗೆ ಆರ್ಶಿವಾದ ಮಾಡಿ ಎಂದು ಮನವಿ ಮಾಡಿದರು.